ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದಾರಿಯಲ್ಲಿ ಗಣಿಗಾರಿಕೆ: ಕುಮಾರಸ್ವಾಮಿ ಒಪ್ಪಿಗೆ

Published 12 ಜೂನ್ 2024, 23:58 IST
Last Updated 12 ಜೂನ್ 2024, 23:58 IST
ಅಕ್ಷರ ಗಾತ್ರ

ನವದೆಹಲಿ: ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕುದುರೆಮುಖ ಕಬ್ಬಿಣದ ಅದಿರು ಕಂ‍‍ಪನಿಯ (ಕೆಐಒಸಿಎಲ್‌) ಕಡತಕ್ಕೆ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಸಹಿ ಹಾಕಿದರು. 

ಉಭಯ ಇಲಾಖೆಗಳ ಉನ್ನತ ಅಧಿಕಾರಿಗಳ ಜತೆಗೆ ಸಚಿವರು ಸಭೆ ನಡೆಸಿ ಇಲಾಖೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ದೇವದಾರಿ ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ. ಈ ಯೋಜನೆಗೆ ಕರ್ನಾಟಕ ಸರ್ಕಾರ ಸಹ ಒಪ್ಪಿಗೆ ನೀಡಬೇಕಿದೆ. ಕುಮಾರಸ್ವಾಮಿ ಅವರು ಸಚಿವರಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ. ಇಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಸಮಾಜ ಪರಿವರ್ತನ ಸಮುದಾಯ ಹಾಗೂ ಪರಿಸರ ಹೋರಾಟಗಾರರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಗೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯವು ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಎರಡನೇ ಹಂತದ ಅನುಮೋದನೆಯನ್ನು ಕಳೆದ ವರ್ಷ ನೀಡಿತ್ತು. ಕಂಪನಿಯು 388 ಹೆಕ್ಟೇರ್‌ನಲ್ಲಿ 50 ವರ್ಷಗಳ ಕಾಲ ಗಣಿಗಾರಿಕೆ ನಡೆಸಲು ಗಣಿ ಹಾಗೂ ಭೂವಿಜ್ಞಾನ ಇಲಾಖೆಯಿಂದ ಅನುಮೋದನೆ ಪಡೆದಿದೆ.

ಸುಪ್ರೀಂ ಕೋರ್ಟ್‌ ಆದೇಶದ ಕಾರಣ, ಕುದುರೆಮುಖದಲ್ಲಿ ಕಂಪನಿಯು 2006ರಲ್ಲಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಪ್ರಸ್ತುತ ತನ್ನ ಮಂಗಳೂರಿನಲ್ಲಿರುವ ಸ್ಥಾವರಕ್ಕಾಗಿ ಛತ್ತೀಸಗಢದಿಂದ ಸಿಗುವ ಅದಿರನ್ನು ಅವಲಂಬಿಸಿದೆ. 2024–2025ನೇ ಸಾಲಿನಲ್ಲಿ ದೇವದಾರಿಯಲ್ಲಿ 3 ಲಕ್ಷ ಟನ್‌ಗಳಷ್ಟು ಗಣಿಗಾರಿಕೆ ನಡೆಸುವ ಯೋಜನೆಯನ್ನು ಕೆಐಒಸಿಎಲ್‌ ಹೊಂದಿದೆ. 

ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ ಸೇರಿ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ‘ಉತ್ಪಾದನೆಯಲ್ಲಿ ಕ್ಷಮತೆ ತರಬೇಕು. ನಿಗದಿತ ಗುರಿ ಮುಟ್ಟಬೇಕು’ ಎಂದು ಸೂಚಿಸಿದರು. 

ಕುದುರೆಮುಖ ವಿಷಯದ ಬಗ್ಗೆ ಸಚಿವರು ಮತ್ತೆ ಪ್ರಸ್ತಾಪ ಮಾಡಿದರು. ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಬಗ್ಗೆಯೂ ಸಮಾಲೋಚನೆ ನಡೆಸಿದರು. ಉಕ್ಕು ಕ್ಷೇತ್ರದಲ್ಲಿ ಚೀನಾ ಒಡ್ಡುತ್ತಿರುವ ಪೈಪೋಟಿಯ ಬಗ್ಗೆ ಸಚಿವರಿಗೆ ಅಧಿಕಾರಿಗಳು ನೀಡಿದರು. 

‘ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನ’ 

ಆಟೊಮೊಬೈಲ್ ಸೇರಿ ಎಲ್ಲ ವಿಭಾಗ ಮುಖ್ಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಕುಮಾರಸ್ವಾಮಿ ಚರ್ಚೆ ನಡೆಸಿದರು.  ಪೆಟ್ರೋಲ್ ಡೀಸೆಲ್ ವಾಹನಗಳು ಅಗ್ಗ. ಎಲೆಕ್ಟ್ರಿಕ್ ವಾಹನಗಳು ದುಬಾರಿ. ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕಿದೆ ಎಂದು ಅಧಿಕಾರಿಗಳು ಸಲಹೆ ಮಾಡಿದರು. ಉದ್ಯೋಗ ಸೃಷ್ಟಿ ಉತ್ಪಾದನೆ ಪ್ರಮಾಣ ಹೆಚ್ಚಳ ಉದ್ಯೋಗ ವಲಯದಲ್ಲಿ ಅವಕಾಶಗಳ ಹೆಚ್ಚಿಸುವ ಸಚಿವರು ಮಾಹಿತಿ ಪಡೆದರು.  ‘ಭಾರತಕ್ಕೆ ಬರುವುದಕ್ಕೆ ಟೆಸ್ಲಾ ಒಲವು ತೋರಿದೆ. ಅದಕ್ಕೆ ಕೆಲವು ರಿಯಾಯಿತಿಗಳನ್ನು ಕೇಳಿದೆ. ಅದಕ್ಕೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ’ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.  ತುಮಕೂರು ಇಂಡಸ್ಟ್ರಿಯಲ್‌ ಪಾರ್ಕ್ ಎಚ್‌ಎಂಟಿ ಕಾರ್ಖಾನೆಯ ಪರಿಸ್ಥಿತಿ ಬಗ್ಗೆ ಸಚಿವರು ವಿವರಗಳನ್ನು ಪಡೆದರು. ದೇಶದಾದ್ಯಂತ ಸುಸ್ಥಿತಿಯಲ್ಲಿರುವ ಹಾಗೂ ರೋಗಗ್ರಸ್ತ ಘಟಕಗಳ ಬಗ್ಗೆ ಮಾಹಿತಿಯನ್ನೂ ಪಡೆದರು. 

ಸಚಿವರು ನಿರ್ಧಾರ ಪುನರ್‌ ಪರಿಶೀಲಿಸಲಿ: ಹಿರೇಮಠ

‘ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಹಾನಿಯಾದ ಕಾರಣಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸದಂತೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿತ್ತು. ಸಂಡೂರು ಅತ್ಯಂತ ಶ್ರೀಮಂತ ಜೀವವೈವಿಧ್ಯದ ಪ್ರದೇಶ. ಇಲ್ಲಿ ಗಣಿಗಾರಿಕೆ ನಡೆಸಿದರೆ ಭಾರಿ ಹಾನಿಯಾಗಲಿದೆ. ಉಕ್ಕು ಸಚಿವಾಲಯದ ಅಧಿಕಾರಿಗಳ ಮಾತು ಕೇಳಿ ಕುಮಾರಸ್ವಾಮಿಯವರು ಕಡತಕ್ಕೆ ಸಹಿ ಹಾಕಿದ್ದಾರೆ. ಅವರು ನಿರ್ಧಾರವನ್ನು ಮರುಪರಿಶೀಲಿಸಬೇಕು. ಸಂಡೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರು ಹಾಗೂ ಪರಿಸರ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌.ಆರ್.ಹಿರೇಮಠ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT