ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವೆ ನಿರ್ಮಲಾ ಸುಳ್ಳು ಹೇಳುವುದರಲ್ಲಿ ಮೋದಿಯವರನ್ನೇ ಮೀರಿಸಿದ್ದಾರೆ: ಗುಂಡೂರಾವ್‌

Published 19 ಫೆಬ್ರುವರಿ 2024, 13:24 IST
Last Updated 19 ಫೆಬ್ರುವರಿ 2024, 13:24 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸುಳ್ಳು ಹೇಳುವುದರಲ್ಲಿ ಇತ್ತೀಚೆಗೆ ಮೋದಿಯವರನ್ನೇ ಮೀರಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

‘ಪ್ರಜಾವಾಣಿ’ ಪತ್ರಿಕೆಗೆ ನಿರ್ಮಲಾ ಸೀತಾರಾಮನ್‌ ಅವರು ನೀಡಿರುವ ಸಂದರ್ಶನವನ್ನು ಉಲ್ಲೇಖಿಸಿ 'ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಅನ್ಯಾಯವಾಗುತ್ತಿರುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ತೆರಿಗೆ ಅನ್ಯಾಯದ ಬಗ್ಗೆ ನಾವು ಸಾಕ್ಷಿ ಸಮೇತ ತೋರಿಸಿದ್ದೇವೆ. ಆದರೂ ಅನ್ಯಾಯ ಮಾಡಿಲ್ಲ ಎಂದು ನಿರ್ಮಲಾ ಅವರು ವಿತಂಡ ವಾದ ಮಾಡುವುದ್ಯಾಕೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ. ಗ್ಯಾರಂಟಿ ಯೋಜನೆಗಳಲ್ಲಿ ಯಾವ ಹುಳುಕುಗಳು ಇಲ್ಲ. ಸಚಿವೆ ನಿರ್ಮಲಾ ಅವರು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹುಳುಕು ಕಂಡು ಹಿಡಿಯುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ. ನಾವು ಕೇಂದ್ರದ ಬಳಿ ಕೇಳುತ್ತಿರುವುದು ನ್ಯಾಯಯುತವಾಗಿ ರಾಜ್ಯಕ್ಕೆ ಸೇರಬೇಕಾದ ತೆರಿಗೆ ಹಣವನ್ನು. ನಾವು ಮೋದಿಯವರ ತಿಜೋರಿಯಿಂದಾಗಲಿ, ಅಮಿತ್ ಶಾರವರ ಬ್ಯಾಂಕ್ ಖಾತೆಯಿಂದಾಗಲಿ ಅನುದಾನ ಕೇಳುತ್ತಿಲ್ಲ. ಈ ಸಾಮಾನ್ಯ ಜ್ಞಾನ ನಿರ್ಮಲಾ ಅವರಿಗೆ ಇದ್ದರೆ ಸಾಕು ಎಂದು ಗುಂಡೂರಾವ್‌ ಟೀಕಾಪ್ರಹಾರ ನಡೆಸಿದ್ದಾರೆ.

ಮೋದಿಯವರ ಮುಂದೆ ನಡು ಬಗ್ಗಿಸಿ ನಿಲ್ಲಲು ಹೆದರುವ ರಾಜ್ಯದ ಬಿಜೆಪಿ ನಾಯಕರು ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ? ಪ್ರಸ್ತಾಪಿಸಲು ಸಾಧ್ಯವೇ?, ಆದರೆ ನಾವು ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದಾಗಲೂ ತೆರಿಗೆ ಅನ್ಯಾಯದ ಬಗ್ಗೆ ಪ್ರಶ್ನಿಸುತ್ತಲೇ ಇದ್ದೇವೆ. ಹಿಂದಿನ ಬಿಜೆಪಿ ಸರ್ಕಾರಕ್ಕೂ ಕೇಂದ್ರವನ್ನು ಪ್ರಶ್ನಿಸುವಂತೆ ಒತ್ತಾಯಿಸಿದ್ದೇವೆ‌. ಈ ಬಗ್ಗೆ ನಿರ್ಮಲಾ ಸೀತಾರಾಮನ್‌ ಅವರಿಗೆ ಅನುಮಾನಗಳಿದ್ದರೆ ಪರಿಶೀಲಿಸಬಹುದು‌ ಎಂದು ಹೇಳಿದ್ದಾರೆ.

ಕೇಂದ್ರದಿಂದ ಯಾವುದೇ ತೆರಿಗೆ ಬಾಕಿಯಿಲ್ಲ, ಕೊಡ ಬೇಕಾಗಿರುವುದೆನ್ನಲ್ಲಾ ಕೊಟ್ಟಾಗಿದೆ ಎಂದು ಗಿಳಿಪಾಠ ಹೇಳುವ ಅವರು, 2109ರ ಬಜೆಟ್ ಗಾತ್ರ ಹಾಗೂ 2024ರ ಬಜೆಟ್ ಗಾತ್ರ ಎಷ್ಟಾಗಿದೆ ಎಂದು ಒಮ್ಮೆ ಪರಿಶೀಲಿಸಲಿ. ಬಜೆಟ್‌ ಗಾತ್ರ ಹೆಚ್ಚಾದಂತೆ ರಾಜ್ಯಗಳಿಗೆ ಕೊಡಬೇಕಾದ ಅನುದಾನಗಳು ಹೆಚ್ಚಾಗಬೇಕು ಎಂಬುವುದು ಕಾಮನ್ ಸೆನ್ಸ್. 2019 ರಲ್ಲಿ ನಮ್ಮ ರಾಜ್ಯಕ್ಕೆ ಬಂದ ಅನುದಾನವೆಷ್ಟು? ಈಗ 45 ಲಕ್ಷ ಕೋಟಿ ಬಜೆಟ್‌ನಲ್ಲಿ ಕೊಟ್ಟಿರುವ ಅನುದಾನವೆಷ್ಟು ಎಂದು ಪ್ರಾಮಾಣಿಕವಾಗಿ ಹೇಳಲಿ‌. ಇದನ್ನು ಬಿಟ್ಟು ಜನರ ಕಿವಿಗೆ ಹೂ ಮುಡಿಸುವ ವ್ಯರ್ಥ ಪ್ರಯತ್ನವೇಕೆ ಎಂದು ಗುಡುಗಿದ್ದಾರೆ.

'ನಮ್ಮವರೇ ನಮಗೆ ಮೂಲ' ಎಂಬಂತೆ ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ‌. ನಮ್ಮ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆಯಲ್ಲಿ, ಅನುದಾನದಲ್ಲಿ, ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ, ಅಕ್ಕಿ ಕೊಡುವ ವಿಚಾರದಲ್ಲಿ, ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳಲ್ಲಿ ಅನ್ಯಾಯವಾಗುತ್ತಿರುವುದು ಆ ಸೂರ್ಯ ಚಂದ್ರರಷ್ಟೇ ಸತ್ಯ. ಈ ಸತ್ಯವನ್ನು ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರು ಒಪ್ಪಿಕೊಳ್ಳಲಿ. ಕನಿಷ್ಟಪಕ್ಷ ಸತ್ಯ ಒಪ್ಪಿಕೊಂಡ ಕಾರಣಕ್ಕಾದರೂ ಕನ್ನಡಿಗರು ನಿಮ್ಮನ್ನು ಕ್ಷಮಿಸಬಹುದು‌ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT