ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಗಣೇಶ್‌ಗಾಗಿ ಹುಡುಕಾಟ; ಈಗಲ್‌ಟನ್‌ ರೆಸಾರ್ಟಿನಲ್ಲಿ ಸಾಕ್ಷ್ಯ ಸಂಗ್ರಹ

ಆನಂದ್ ಸಿಂಗ್‌ಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
Last Updated 23 ಜನವರಿ 2019, 14:44 IST
ಅಕ್ಷರ ಗಾತ್ರ

ರಾಮನಗರ: ಈಗಲ್‌ಟನ್‌ ರೆಸಾರ್ಟಿನಲ್ಲಿ ಹಲ್ಲೆಗೆ ಒಳಗಾಗಿರುವ ಶಾಸಕ ಆನಂದ್ ಸಿಂಗ್‌ಗೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮತ್ತೊಂದೆಡೆ ಹಲ್ಲೆ ನಡೆಸಿ ಪರಾರಿ ಆಗಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್‌ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಡಿವೈಎಸ್ಪಿ ಪುರುಷೋತ್ತಮ್‌, ರಾಮನಗರ ಗ್ರಾಮೀಣ ಸಿಪಿಐ ಜೀವನ್‌ ನೇತೃತ್ವದ ತಂಡಗಳು ಆರೋಪಿಗಾಗಿ ಹುಡುಕಾಡುತ್ತಿವೆ. ಒಂದು ತಂಡವು ಬೆಂಗಳೂರಿನಲ್ಲೂ, ಉಳಿದ ತಂಡಗಳು ಬಳ್ಳಾರಿ, ಮೈಸೂರು ಮೊದಲಾದ ಕಡೆಗಳಲ್ಲಿ ಶೋಧ ನಡೆಸಿವೆ. ಶಾಸಕರ ಆಪ್ತರ ಮೂಲಕ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆದಿದೆ. ಆರೋಪಿಯು ಹೈದರಾಬಾದ್‌ ಕಡೆಗೆ ತೆರಳಿರುವ ಶಂಕೆಯೂ ವ್ಯಕ್ತವಾಗಿದೆ.

ಕಾಂಗ್ರೆಸ್‌ನ ಕೆಲವು ನಾಯಕರಿಗೆ ಗಣೇಶ್ ಚಲನವಲನಗಳ ಬಗ್ಗೆ ಮಾಹಿತಿ ಇದೆ. ‘ಆನಂದ್ ಸಿಂಗ್‌ ಬಯಸಿದಲ್ಲಿ ಗಣೇಶ್‌ರನ್ನು ಅವರ ಮುಂದೆ ತಂದು ನಿಲ್ಲಿಸುತ್ತೇನೆ’ ಎಂದು ಸಚಿವರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.

ಸಾಕ್ಷ್ಯಗಳಿಗೆ ಹುಡುಕಾಟ: ಬಿಡದಿ ಎಸ್‌ಐ ಹರೀಶ್ ನೇತೃತ್ವದ ತಂಡವು ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಸ್ಥಳ ಮಹಜರು ನಡೆಸಿದ್ದು, ಸಾಕ್ಷ್ಯಗಳಿಗಾಗಿ ಜಾಲಾಡಿದೆ. ಮುಖ್ಯವಾಗಿ ಅಲ್ಲಿನ ಸಿಸಿಟಿವಿಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದೆ. ಹಲ್ಲೆ ನಡೆಸಲು ಬಳಸಿದ್ದರು ಎನ್ನಲಾದ ದೊಣ್ಣೆ, ಹೂಕುಂದ ಮೊದಲಾದವುಗಳಿಗಾಗಿ ಹುಡುಕಾಟ ನಡೆಸಿದೆ.

ರೆಸಾರ್ಟಿನ ವ್ಯವಸ್ಥಾಪಕರು ಹಾಗೂ ಘಟನೆ ಸಂದರ್ಭ ಅಲ್ಲಿ ಹಾಜರಿದ್ದ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ತಿಂಗಳ 19ರ ತಡರಾತ್ರಿ ಈ ಘಟನೆ ನಡೆದಿತ್ತು. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಇಬ್ಬರ ನಡುವೆ ಮಾತುಕತೆ ಆರಂಭವಾಗಿತ್ತು. ಅಲ್ಲಿಂದ ಮೂರು ಗಂಟೆ ಕಾಲ ಮಾತು ಮುಂದುವರಿದಿದ್ದು, ಅಂತಿಮವಾಗಿ ಜಗಳ ತಾರಕಕ್ಕೇರಿ ಗಣೇಶ್ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದರು. ಅಲ್ಲಿದ್ದ ಉಳಿದ ಶಾಸಕರು ನೆರವಿಗೆ ಧಾವಿಸಿ ರಕ್ಷಣೆ ಮಾಡುವಷ್ಟರಲ್ಲಿ ಆನಂದ್‌ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

ಶಾಸಕರ ವಿಚಾರಣೆ: ಗಲಾಟೆ ಸಂದರ್ಭ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ, ಶಾಸಕರಾದ ತನ್ವೀರ್ ಸೇಠ್‌, ರಾಮಪ್ಪ ಹಾಗೂ ರಘು ಮೂರ್ತಿ ಅವರು ತಮ್ಮ ಜೊತೆ ಇದ್ದದ್ದಾಗಿ ಆನಂದ್‌ ಸಿಂಗ್‌ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಈ ಎಲ್ಲರ ಹೇಳಿಕೆಗಳನ್ನು ಪೊಲೀಸರು ಪಡೆಯಲಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಯತ್ನ
ಗಣೇಶ್‌ ನಿರೀಕ್ಷಣಾ ಜಾಮೀನು ಪಡೆಯಲು ಯತ್ನಿಸುತ್ತಿದ್ದು, ಅದು ಸಿಗುವ ತನಕ ಪೊಲೀಸರ ಕಣ್ಣು ತಪ್ಪಿಸಿ ಓಡಾಡುವ ಸಾಧ್ಯತೆ ಹೆಚ್ಚಿದೆ.
ಬುಧವಾರ ಅವರು ವಕೀಲರ ಮೂಲಕ ರಾಮನಗರದ ನ್ಯಾಯಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಂಜೆಯವರೆಗೆ ಯಾವ ವಕೀಲರು ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT