ಮೈಸೂರು: ‘ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿದ ಕೇಂದ್ರದ ನಾಯಕರ ತೀರ್ಮಾನ ನನ್ನನೂ ಸೇರಿದಂತೆ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಇಲ್ಲಿನ ಪಕ್ಷದ ಕಚೇರಿ ಆವರಣದಲ್ಲಿ ಶನಿವಾರ ನಡೆದ ಸಂಭ್ರಮಾಚರಣೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗುತ್ತದೆ ಎಂಬ ಚರ್ಚೆ 3–4 ತಿಂಗಳಿಂದ ನಡೆಯುತ್ತಿತ್ತು. ನಳೀನ್‌ಕುಮಾರ್ ಕಟೀಲ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿಯಿಂದಾಗಿ ಕಾರ್ಯಕರ್ತರು ದುಗುಡದಲ್ಲಿದ್ದರು. ರಾಜ್ಯದ ಉದ್ದಗಲಕ್ಕೂ ಪರಿಚಯ ಇರುವಂಥ ನಾಯಕನಿಗೆ ಸ್ಥಾನ ನೀಡಿರುವುದು ಸರಿಯಾಗಿದೆ. ಬಿ.ಎಸ್. ಯಡಿಯೂರಪ್ಪ ಹಾದಿಯಲ್ಲಿ ಸಾಗಲಿದ್ದಾರೆ. ಎಲ್ಲ ಹಿರಿಯ–ಕಿರಿಯ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬಲ್ಲಂತಹ ಸಾಮರ್ಥ್ಯ ಹಾಗೂ ಚಾಕಚಕ್ಯತೆ ಎರಡೂ ಅವರಲ್ಲಿದೆ’ ಎಂದರು.
‘ಹೊಸ ಮತದಾರರು ಹಾಗೂ ಯುವಕರನ್ನು ಪಕ್ಷಕ್ಕೆ ಸೆಳೆಯುವಲ್ಲಿ ದಾಪುಗಾಲನ್ನು ವಿಜಯೇಂದ್ರ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಬೇರೆ ಪಕ್ಷದಲ್ಲಿರುವವರು ಪ್ರಭಾವಿ ಮುಖಂಡರು ಬಿಜೆಪಿ ಸೇರ್ಪಡೆಯಾಗಬೇಕು, ಹೊಸಬರು ಬರಬೇಕು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಆಯ್ಕೆ ಅತ್ಯಂತ ಸೂಕ್ತವಾಗಿದೆ’ ಎಂದು ಹೇಳಿದರು.
‘ನ.17ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಅಂದು, ವಿಧಾನಸಭೆ ವಿರೋಧ ಪಕ್ಷದ ನಾಯಕನ ಆಯ್ಕೆಯೂ ಆಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಪ್ರತಿಕ್ರಿಯಿಸಿದರು.
‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಎನ್ನುವ ಕಾರಣಕ್ಕೆ ವಿಜಯೇಂದ್ರ ಅವರಿಗೆ ಅಧಿಕಾರ ನೀಡಿಲ್ಲ. ಅವರ ಸಾಮರ್ಥ್ಯವನ್ನು ಗುರುತಿಸಿ ಅವಕಾಶ ಕೊಟ್ಟಿದ್ದಾರೆ. ಕೆ.ಆರ್. ಪೇಟೆ ಸೇರಿದಂತೆ ಹಲವು ಉಪ ಚುನಾವಣೆಯಲ್ಲಿನ ಚುನಾವಣಾ ತಂತ್ರವನ್ನು ವರಿಷ್ಠರು ಗಮನಿಸಿದ್ದಾರೆ. ವರಿಷ್ಠರ ನಿರ್ಧಾರವು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕರ್ತರು ಹಾಗೂ ಮುಖಂಡರು ಘೋಷಣೆ ಕೂಗಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಭಾವಚಿತ್ರ ಹಿಡಿದು ಸಂಭ್ರಮಿಸಿದರು.
ಉಪ ಮೇಯರ್ ಜಿ.ರೂಪಾ ಯೋಗೇಶ್, ಮುಖಂಡರಾದ ಮೈ.ವಿ.ರವಿಶಂಕರ್, ಜೋಗಿ ಮಂಜು, ಗಿರಿಧರ್, ಸೋಮಸುಂದರ್, ಹೇಮಾ ನಂದೀಶ್ ಪಾಲ್ಗೊಂಡಿದ್ದರು.
ವಿಶೇಷ ಪೂಜೆ: ವಿಜಯೇಂದ್ರ ನೇಮಕ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಗ್ರಹಾರ ವೃತ್ತದ ನೂರೊಂದು ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಯಶಂಕರ್ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.