ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದ ಮಂಕಿಪಾಕ್ಸ್‌ ಸೋಂಕಿತ

ರೋಗ ಹರಡಿರುವ ಶಂಕೆ: 35 ಮಂದಿಗೆ ಪ್ರತ್ಯಕವಾಸ
Last Updated 18 ಜುಲೈ 2022, 13:52 IST
ಅಕ್ಷರ ಗಾತ್ರ

ಮಂಗಳೂರು: ಮಂಕಿಪಾಕ್ಸ್ ದೃಢಪಟ್ಟ ಕೇರಳದ ಯುವಕ ಮಂಗಳೂರು ವಿಮಾನನಿಲ್ದಾಣದ ಮೂಲಕ ಪ್ರಯಾಣಿಸಿದ್ದು, ಇಲ್ಲೂ ಸೋಂಕು ಹರಡುವ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆಯು ಸೊಂಕಿತ ಯುವಕನೊಂದಿಗೆ ಪ್ರಯಾಣಿಸಿದ್ದವರೂ ಸೇರಿದಂತೆ 35 ಮಂದಿಗೆ ಪ್ರತ್ಯೇಕ ವಾಸಕ್ಕೆ ಒಳಗಾಗುವಂತೆ ಸೂಚನೆ ನೀಡಿದೆ.

‘ಯುವಕ ದುಬೈನಿಂದ ಜುಲೈ 13ರಂದು ತವರಿಗೆ ಮರಳಿದ್ದ. ಆತನಿಗೆ ಜುಲೈ 15ರಂದು ಜ್ವರ ಹಾಗೂ ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದವು. ಕೇರಳದ ಕಣ್ಣೂರಿನ ಪೆರಿಯಾರ್‌ ವೈದ್ಯಕೀಯ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಆತ ಮಂಕಿಪಾಕ್ಸ್ ಹೊಂದಿರುವುದು ದೃಢಪಟ್ಟಿತ್ತು. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಯುವಕ ಇಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಿದ್ದ. ಹಾಗಾಗಿ ಮಂಗಳೂರಿನಲ್ಲೂ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದುಬೈನಿಂದ ಯುವಕ ಪ್ರಯಾಣಿಸಿದ್ದ ವಿಮಾನದಲ್ಲಿ ಒಟ್ಟು 191 ಪ್ರಯಾಣಿಕರಿದ್ದರು. ವಿಮಾನದಲ್ಲಿ ಯುವಕ ಕುಳಿತಿದ್ದ ಸಾಲು, ಅದರ ಎದುರು ಮತ್ತು ಹಿಂದಿನ ಮೂರು ಸಾಲುಗಳ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ್ದವರು ಸೇರಿ ಒಟ್ಟು 35 ಮಂದಿಗೆ ಪ್ರತ್ಯೇಕವಾಸಕ್ಕೆ ಒಳಗಾಗುವಂತೆ ಸೂಚಿಸಿದ್ದೇವೆ. ಇವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಜಿಲ್ಲೆಯ 13, ಕಣ್ಣೂರಿನ ಒಬ್ಬರು ಸೇರಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಯಾಣಿಕರು ರಾಜ್ಯದ ಆರೋಗ್ಯ ಇಲಾಖೆಯ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಸದ್ಯಕ್ಕೆ ಯಾರಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಮಂಗಳೂರು ವಿಮಾನ ನಿಲ್ದಾಣದ ವಲಸೆ ಅಧಿಕಾರಿಗೂ ಪ್ರತ್ಯೇಕ ವಾಸಕ್ಕೆ ಒಳಗಾಗುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

‘ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ 21 ದಿನಗಳ ಪ್ರತ್ಯೇಕವಾಸದ ಸಂದರ್ಭದಲ್ಲಿ ಮಂಕಿ ಪಾಕ್ಸ್‌ನ ಯಾವುದೇ ಲಕ್ಷಣ ಕಾಣಿಸಿಕೊಳ್ಳದಿದ್ದರೆ, ಅವರಿಂದ ಇತರರಿಗೆ ಅಪಾಯ ಇಲ್ಲ’ ಎಂದು ಡಾ.ಜಗದೀಶ್‌ ಸ್ಪಷ್ಟಪಡಿಸಿದರು.

‘ಮಂಕಿ ಪಾಕ್ಸ್‌ ವೈರಸ್‌ ಮೂಲಕ ಹರಡುವ ರೊಗ. ಇದು ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಂದಾಗ ಹರಡು ಸಾಧ್ಯತೆ ಜಾಸ್ತಿ. ಅವರು ಮುಟ್ಟಿದ ವಸ್ತುಗಳನ್ನು ಬೇರೆಯವರು ಮುಟ್ಟಿದಾಗ ಅಥವಾ ಅವರು ಕೆಮ್ಮಿದಾಗ ವೈರಾಣು ಇತರರ ಸಂಪರ್ಕಕ್ಕೂ ಬರಬಹುದು. ಕೋವಿಡ್‌ ಹರಡದಂತೆ ಏನೆಲ್ಲ ಮುನ್ನೆಚ್ಚರಿಕೆ ವಹಿಸಲಾಗುತ್ತಿತ್ತೋ, ಅಂತಹದ್ದೇ ಮುನ್ನೆಚ್ಚರಿಕೆಯನ್ನು ಈ ರೋಗ ನಿಯಂತ್ರಣಕ್ಕಾಗಿ ವಹಿಸಬೇಕು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT