ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಕನಿಷ್ಠ ಬೆಂಬಲ ಬೆಲೆಯಡಿ 16 ಜಿಲ್ಲೆಗಳಲ್ಲಿ ಖರೀದಿ ಆರಂಭ

Published 12 ಮಾರ್ಚ್ 2024, 0:11 IST
Last Updated 12 ಮಾರ್ಚ್ 2024, 0:11 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ (ಕೆಎಫ್‌ಸಿಎಸ್‌ಸಿ) ರಾಜ್ಯದ 16 ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಗಿ, ಜೋಳ ಮತ್ತು ಭತ್ತ ಖರೀದಿಗೆ ಸೋಮವಾರ ದಿಢೀರ್‌ ಚಾಲನೆ ನೀಡಿದೆ.

ಎಂಎಸ್‌ಪಿ ಯೋಜನೆ ಅಡಿಯಲ್ಲಿ ಆಹಾರ ಧಾನ್ಯ ಖರೀದಿ ಗಡುವು ಮುಗಿಯಲು 20 ದಿನಗಳಷ್ಟೇ ಬಾಕಿ ಉಳಿದಿದ್ದರೂ, ರಾಜ್ಯದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗದ ಕುರಿತು ‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ‘ಖರೀದಿ ವಿಳಂಬ: ರೈತರು ಕಂಗಾಲು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.

ಸೋಮವಾರ ಬೆಳಿಗ್ಗೆಯೇ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮತ್ತು ಖರೀದಿ ಕೇಂದ್ರಗಳ ಅಧಿಕಾರಿಗಳ ಜತೆ ತುರ್ತು ವಿಡಿಯೊ ಕಾನ್ಫರೆನ್ಸ್‌ ನಡೆಸಿದ ಕೆಎಫ್‌ಸಿಎಸ್‌ಸಿ ಅಧಿಕಾರಿಗಳು, ಸಂಜೆಯೊಳಗೆ ತುರ್ತಾಗಿ ಆಹಾರ ಧಾನ್ಯ ಖರೀದಿಗೆ ಚಾಲನೆ ನೀಡುವಂತೆ ನಿರ್ದೇಶನ ನೀಡಿದರು. ಮಧ್ಯಾಹ್ನದ ವೇಳೆಗೆ ಖರೀದಿ ಕೇಂದ್ರಗಳನ್ನು ತಲುಪಿದ ಅಧಿಕಾರಿಗಳು, ಖರೀದಿ ಪ್ರಕ್ರಿಯೆಯನ್ನು ಆರಂಭಿಸಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಆಗಲಕೋಟೆ, ಕೋಲಾರ, ರಾಮನಗರ, ಕೊಪ್ಪಳ, ವಿಜಯಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಎಂಎಸ್‌ಪಿ ಯೋಜನೆಯಡಿ ಖರೀದಿ ಆರಂಭವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಕೆಎಫ್‌ಸಿಎಸ್‌ಸಿ ಹಿರಿಯ ಅಧಿಕಾರಿಗಳು, ‘ನಮ್ಮ ನಿಗಮಕ್ಕೆ ಹಂಚಿಕೆಯಾಗಿರುವ 16 ಜಿಲ್ಲೆಗಳಲ್ಲಿ ರಾಗಿ, ಜೋಳ ಮತ್ತು ಭತ್ತದ ಖರೀದಿ ಸೋಮವಾರದಿಂದ ಆರಂಭವಾಗಿದೆ. ಮಂಗಳವಾರದಿಂದ ಪೂರ್ಣ ಪ್ರಮಾಣದಲ್ಲಿ ಖರೀದಿ ನಡೆಯಲಿದೆ’ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಹಂಚಿಕೆಯಾಗಿರುವ ಒಂಬತ್ತು ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಹಂಚಿಕೆಯಾಗಿರುವ ಆರು ಜಿಲ್ಲೆಗಳಲ್ಲಿ ಮಂಗಳವಾರ ಅಥವಾ ಬುಧವಾರದಿಂದ ಆಹಾರ ಧಾನ್ಯಗಳ ಖರೀದಿ ಆರಂಭವಾಗಲಿದೆ ಎಂದು ಎರಡೂ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT