ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವಂತಹ ಘಟನೆ ಏನು ನಡೆದಿದೆ ಹೇಳಿ?’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ವಿರುದ್ಧ ತನಿಖೆ ಆಗುತ್ತದೆ ಬಿಡಿ. ವರದಿ ಬರಲಿ. ವರದಿಗೂ ಮುನ್ನವೇ ಮಾತನಾಡಲು ವಿರೋಧ ಪಕ್ಷದವರೇನು ನ್ಯಾಯಾಧೀಶರಾ’ ಎಂದು ಪ್ರಶ್ನಿಸಿದರು.
‘ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹೀಗಾಗಿ ಸಿಬಿಐ ಮೇಲೆ ರಾಜ್ಯದಲ್ಲಿ ಅಂಕುಶ ಹಾಕುತ್ತಿದ್ದೇವೆ. ಬಿಜೆಪಿ–ಜೆಡಿಎಸ್‌ನವರ ಗುರಿ ಚುನಾಯಿತ ಸರ್ಕಾರಗಳನ್ನು ಬೀಳಿಸುವುದೇ ಆಗಿದೆ. ಶಾಸಕರು, ಹೈಕಮಾಂಡ್ ಹಾಗೂ ಜನರು ಸಿದ್ದರಾಮಯ್ಯ ಪರವಾಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯನವರನ್ನು ಅಲ್ಲಾಡಿಸಲು ವಿರೋಧಪಕ್ಷದವರಿಂದ ಸಾಧ್ಯವಿಲ್ಲ; ಅವರ ರಾಜೀನಾಮೆ ಕೊಡಿಸಲೂ ಸಾಧ್ಯವಿಲ್ಲ’ ಎಂದರು.
‘ಸಿದ್ದರಾಮಯ್ಯ ಪ್ರಾಮಾಣಿಕ; ಇದರ ಬಗ್ಗೆ ಎಳ್ಳಷ್ಟೂ ಅನುಮಾನ ಬೇಡ. ನೈತಿಕತೆ ಬಗ್ಗೆ ಮಾತಾಡುವವರ ನೈತಿಕತೆ ಎಷ್ಟಿದೆ ಕೇಳಿ? ಹೈಕಮಾಂಡ್ ಶೇ 100ಕ್ಕೆ 100ರಷ್ಟು ಸಿದ್ದರಾಮಯ್ಯ ಪರ ಇದೆ’ ಎಂದು ಹೇಳಿದರು.
‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯನ್ನು ಕ್ರಿಮಿನಲ್ ಹಿನ್ನೆಲೆಯವರು ಹೆಚ್ಚಾಗಿ ಬಳಸುತ್ತಿದ್ದಾರೆ. ಆ ಕಾಯ್ದೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ’ ಎಂದು ದೂರಿದರು.