ಬೆಂಗಳೂರು: ‘ನಿವೇಶನಗಳನ್ನು ವಾಪಸ್ ಮಾಡಿದ ಕಾರಣಕ್ಕೆ ತನಿಖೆ ನಿಲ್ಲುವುದಿಲ್ಲ. ಸಿದ್ದರಾಮಯ್ಯ ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿಯ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಈ ಪ್ರಕರಣದಲ್ಲಿ ಸಾಲು–ಸಾಲು ತಪ್ಪುಗಳು ನಡೆದಿವೆ. ಲೋಕಾಯುಕ್ತ, ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ನಿವೇಶನ ವಾಪಸ್ ಮಾಡಿದ್ದಾರೆ. ಅದನ್ನು ಒಂದೇ ದಿನದಲ್ಲಿ ವಾಪಸ್ ಪಡೆದು, ಕ್ರಯಪತ್ರ ರದ್ದು ಮಾಡಲಾಗಿದೆ. ಇದೂ ಸಹ ತನಿಖೆಗೆ ಅರ್ಹವಾದ ಬೆಳವಣಿಗೆ’ ಎಂದರು.
‘ಸಿದ್ದರಾಮಯ್ಯ ಪ್ರಭಾವಿ ರಾಜಕಾರಣಿ ಆಗಿರುವುದರಿಂದ ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿಯೇ ಸಿಬಿಐಗೆ ತನಿಖೆ ಒಪ್ಪಿಸಬೇಕು. ಮುಖ್ಯಮಂತ್ರಿಯ ಪತ್ನಿ ಪತ್ರ ಬರೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ಮುಡಾ ಆಯುಕ್ತರು, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಖಾತೆ ರದ್ದು ಮಾಡಿದ್ದಾರೆ. ಅಧಿಕಾರಿಗಳೂ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದರು.
‘ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಈ ಹಿಂದೆ ಒತ್ತಾಯಿಸಿದ್ದರು. ಈಗ ಅವರು ಅದೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ರಾಜ್ಯದ ಈ ಬೆಳವಣಿಗೆಯು ದೇಶದ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದು ಕಾಂಗ್ರೆಸ್‌ನ ಮೇಲೆ ಪರಿಣಾಮ ಬೀರಲಿದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸಿದ್ದರಾಮಯ್ಯ ಪತ್ನಿ ನಿವೇಶನ ವಾಪಸ್ ಮಾಡಿ ಅಕ್ರಮ ನಡೆದಿದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಇನ್ನು ಅಧಿಕಾರದಲ್ಲಿರುವುದು ಶೋಭೆಯಲ್ಲಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಸಂಸದ
ಸೋನಿಯಾ ರಾಹುಲ್ ಪ್ರಿಯಾಂಕ ರಾಬರ್ಟ್ ವಾದ್ರಾ ಜಾಮೀನಿನ ಮೇಲೆ ಹೊರಗಿದ್ದಾರೆ. ತಾವೇ ಆರ್ಥಿಕ ಅಪರಾಧ ಪ್ರಕರಣದಲ್ಲಿ ಇರುವುದರಿಂದ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿಲ್ಲಪ್ರಲ್ಹಾದ ಜೋಶಿ ಕೇಂದ್ರ ಸಚಿವ
<p class="quote">ನಿವೇಶನ ವಾಪಸ್ ಮಾಡಿರುವುದು, ಮುಖ್ಯಮಂತ್ರಿ ಅವರಿಂದ ತಪ್ಪಾಗಿದೆ ಎಂಬುದನ್ನು ಸೂಚಿಸುತ್ತದೆ. ಸೂಕ್ತ ತನಿಖೆ ನಡೆಯಲು ಅವರು ರಾಜೀನಾಮೆ ನೀಡಬೇಕು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, <span class="Designate">ಸಂಸದ</span></p>
‘ಡಿಕೆಶಿ ಸಲಹೆಗಳೇ ಆಗಿರಬಹುದು..’
‘ಸಿದ್ದರಾಮಯ್ಯ ಅವರ ಭಂಡತನ ಮತ್ತು ತಪ್ಪು ನಿರ್ಧಾರಗಳಿಂದಲೇ ಹೀಗಾಗುತ್ತಿದೆ. ಇದೇ ಅವರಿಗೆ ಕಂಟಕವಾಗಲಿದೆ. ಅವರು ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದಾರೆ. ಬಹುಶಃ ಇವೆಲ್ಲಾ ಡಿ.ಕೆ.ಶಿವಕುಮಾರ್ ಅವರ ಸಲಹೆಗಳೇ ಆಗಿರಬಹುದು’ ಎಂದು ವಿಜಯೇಂದ್ರ ಅಭಿಪ್ರಾಯಪಟ್ಟರು. ‘ಈಗ ತೆಗೆದುಕೊಂಡಿರುವ ನಿರ್ಧಾರವನ್ನು ನಾವು ಹೋರಾಟ ಮಾಡುವ ಮುನ್ನವೇ ತೆಗೆದುಕೊಂಡಿದ್ದರೆ ಇಷ್ಟೆಲ್ಲಾ ಹೋರಾಟಕ್ಕೆ ಅವಕಾಶವೇ ಇರುತ್ತಿರಲಿಲ್ಲ. ರಾಜ್ಯಪಾಲರಿಂದ ತನಿಖೆಗೆ ಅನುಮತಿ ಹೈಕೋರ್ಟ್‌ನಿಂದ ಛೀಮಾರಿ ವಿಶೇಷ ಕೋರ್ಟ್‌ನಲ್ಲಿ ತನಿಖೆಗೆ ಆದೇಶ... ಇವೆಲ್ಲವನ್ನೂ ತಪ್ಪಿಸಬಹುದಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.