ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ | ಸಿ.ಎಂ 10 ದಿನ ನಿರಾಳ: ಆ. 29ರವರೆಗೆ ಕ್ರಮ ಬೇಡ ಎಂದ ಹೈಕೋರ್ಟ್

Published : 19 ಆಗಸ್ಟ್ 2024, 23:49 IST
Last Updated : 19 ಆಗಸ್ಟ್ 2024, 23:49 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಡಾ ನಿವೇಶನ ಹಂಚಿಕೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಆದೇಶಕ್ಕೆ ಅನುಗುಣವಾಗಿ ಇದೇ 29ರವರೆಗೆ ಯಾವುದೇ ಕ್ರಮಕ್ಕೆ ಮುಂದಾಗಬಾರದು’ ಎಂದು ಹೈಕೋರ್ಟ್‌, ಜನಪ್ರತಿನಿಧಿಗಳ ಸೆಷನ್ಸ್‌ ಕೋರ್ಟ್‌ಗೆ ನಿರ್ದೇಶಿಸಿದೆ.

ಈ ಸಂಬಂಧ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್‌ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಸೋಮವಾರ ಮಧ್ಯಾಹ್ನ ವಿಚಾರಣೆ ನಡೆಸಿದರು.

‘ಹೈಕೋರ್ಟ್‌ ಈಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ವಾದ ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತನ್ನ ನ್ಯಾಯಿಕ ಪ್ರಕ್ರಿಯೆಯನ್ನು ಮುಂದೂಡಬೇಕು. ಇದೇ 29ರವರೆಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳಬಾರದು’ ಎಂದು ಆದೇಶಿಸಿದರು.

ಸಿಂಘ್ವಿ ಸುದೀರ್ಘ ವಾದ

ಸಿದ್ದರಾಮಯ್ಯ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ‘ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವುದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಇದರ ಹಿಂದೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶವಿದೆ. ರಾಜ್ಯಪಾಲರು ಸಚಿವ ಸಂಪುಟದ ಶಿಫಾರಸನ್ನು ನಿರಾಕರಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂಬುದನ್ನು ವಿವರಿಸಿಲ್ಲ’ ಎಂದು ಆಕ್ಷೇಪಿಸಿದರು.

‘ಸಚಿವ ಸಂಪುಟದ ನಿರ್ಧಾರಕ್ಕೆ ನಾನು ಬದ್ಧವಾಗಿರಬೇಕಿಲ್ಲ. ಆದ್ದರಿಂದ, ಅನುಮತಿ ನೀಡಲಾಗುತ್ತಿದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಸಚಿವ ಸಂಪುಟದ ನಿರ್ಧಾರ ತಿರಸ್ಕರಿಸಿದರೂ ಯಾವ ಆಧಾರದಲ್ಲಿ ಅನುಮತಿ ನೀಡಲಾಗುತ್ತಿದೆ ಎಂಬ ಬಗ್ಗೆ ಅವರು ವಿವರಣೆ ಕೊಡಬೇಕಿತ್ತು. ಆದರೆ, ಅವರ ಆದೇಶದಲ್ಲಿ ಆ ಕುರಿತು ಒಂದೇ ಒಂದು ಸಾಲೂ ಇಲ್ಲ. ಇದೊಂದು ವಿವೇಚನಾರಹಿತ ಅನುಮತಿ’ ಎಂದು ದೂರಿದರು.

‘ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದ ಟಿ.ಜೆ.ಅಬ್ರಹಾಂ ಅರ್ಜಿಯ ಆಧಾರದಡಿ ದೂರು ಸಲ್ಲಿಸಿದ ದಿನವೇ ರಾಜ್ಯಪಾಲರು, ಸಿದ್ದರಾಮಯ್ಯ ಅವರಿಗೆ ಷೋಕಾಸ್‌ ನೋಟಿಸ್ ಜಾರಿ ಮಾಡಿದ್ದಾರೆ. ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿದ ಅರ್ಜಿಗಳು ದೀರ್ಘ ಸಮಯದಿಂದ ಬಾಕಿ ಇವೆ. ಆದರೆ, ಸಿದ್ದರಾಮಯ್ಯನವರ ಪ್ರಕರಣದಲ್ಲಿ ಮಾತ್ರ ರಾಜ್ಯಪಾಲರು ಇನ್ನಿಲ್ಲದ ಉತ್ಸಾಹ ತೋರಿ ಅನುಮತಿ ನೀಡಿದ್ದಾರೆ’ ಎಂದರು.

ರಾಜ್ಯಪಾಲರ ಆದೇಶದ ಬಗ್ಗೆ ಸೆಷನ್ಸ್‌ ನ್ಯಾಯಾಲಯ ತೀರ್ಮಾನ ಮಾಡಲು ಸಾಧ್ಯವೇ? ಈ ವಿಚಾರವನ್ನು ಸಾಂವಿಧಾನಿಕ ಅಧಿಕಾರ ಹೊಂದಿದ ಹೈಕೋರ್ಟ್ ತೀರ್ಮಾನಿಸಬೇಕಲ್ಲವೇ?
-ಎಂ.ನಾಗಪ್ರಸನ್ನ ನ್ಯಾಯಮೂರ್ತಿ 

‘ಷೋಕಾಸ್ ನೋಟಿಸ್‌ಗೆ ಮುಖ್ಯಮಂತ್ರಿ ಉತ್ತರಿಸಿದ್ದಾರೆ. ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರವೇ ಇಲ್ಲ. ಅವರು ಯಾವುದೇ ಶಿಫಾರಸನ್ನೂ ಮಾಡಿಲ್ಲ. ನಿವೇಶನಗಳ ಮರು ಹಂಚಿಕೆ ಪ್ರಕ್ರಿಯೆ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದಿದೆ. ಆದಾಗ್ಯೂ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ–2023ರ (ಬಿಎನ್‌ಎಸ್‌ಎಸ್) ಕಲಂ 218ರ ಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ’ ಎಂದು ಆಕ್ಷೇಪಿಸಿದರು.

‘ಕಲಂ 218ರ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕಾದರೆ ನಿರ್ದಿಷ್ಟ ಅಪರಾಧ ಅಡಗಿರಬೇಕು. ಆ ಅಪರಾಧವು ಆ ವ್ಯಕ್ತಿಯು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ನಡೆದಿರಬೇಕು. ಆದರೆ, ಈ ಪ್ರಕರಣದಲ್ಲಿನ ನಿವೇಶನ ಹಂಚಿಕೆ 1992ರಲ್ಲಿ ಆಗಿದೆ. 2010ರಂದು ಸಿದ್ದರಾಮಯ್ಯ ಪತ್ನಿಗೆ ಅವರ ಸಹೋದರ ದಾನಪತ್ರ ನೀಡಿದ್ದಾರೆ. ಇಷ್ಟು ವರ್ಷಗಳಲ್ಲಿನ ಬಹುತೇಕ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ’ ಎಂದು ವಿವರಿಸಿದರು.

‘ಜನರಿಂದ ಆಯ್ಕೆ ಆಗದ ರಾಜ್ಯಪಾಲರು, ಜನಾದೇಶ ಪಡೆದ ಮುಖ್ಯಮಂತ್ರಿಯೊಬ್ಬರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದು ಅಸಮಂಜಸ. ಇದೊಂದು ರೀತಿ ಮಹಾಭಾರತದಲ್ಲಿನ ಅಶ್ವತ್ಥಾಮನ ಅರ್ಧ ಸತ್ಯದ ಕತೆಯಂತಾಗಿದೆ. ಅರ್ಧಸತ್ಯವು ಸುಳ್ಳು ಹೇಳುವುದಕ್ಕಿಂತಲೂ ಹೆಚ್ಚು ಅಪಾಯಕಾರಿ. ರಾಜ್ಯಪಾಲರು ಜನರಿಂದ ಆಯ್ಕೆಯಾಗಬೇಕು. ಅವರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಅಂಬೇಡ್ಕರ್ ಆಶಿಸಿದ್ದರು’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ವಿವರಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಹಾಗೂ ಮೂವರು ಫಿರ್ಯಾದುದಾರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.

ಜನಪ್ರತಿನಿಧಿಗಳ ಸೆಷನ್ಸ್‌ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಖಾಸಗಿ ದೂರುಗಳಿಗೆ ಸಂಬಂಧಿಸಿದಂತೆ ಸಿಸಿಎಚ್‌– 82ನೇ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ಇದೇ 20ಕ್ಕೆ ಆದೇಶ ಕಾಯ್ದಿರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿವಾದಿಗಳಾದ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಎಸ್.ತುಷಾರ್ ಮೆಹ್ತಾ, ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಫಿರ್ಯಾದುದಾರರಾದ ಎಸ್‌.ಪಿ.ಪ್ರದೀಪ್‌ ಕುಮಾರ್‌ ಪರ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ ಮತ್ತು ಎಂ.ಎಚ್‌.ಪ್ರಕಾಶ್‌, ಸ್ನೇಹಪ್ರಿಯ ಕೃಷ್ಣ ಪರ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್‌, ಕೆ.ಜಿ.ರಾಘವನ್‌, ಸಿ.ವಿ.ನಾಗೇಶ್‌ ಮತ್ತು ವಸಂತ ಕುಮಾರ್, ಟಿ.ಜೆ.ಅಬ್ರಹಾಂ ಪರ ಆರ್.ಆರ್‌.ರಂಗನಾಥ ರೆಡ್ಡಿ ಹಾಜರಿದ್ದರು.

ವಿಚಾರಣೆಯನ್ನು ಆಲಿಸಲು ಮಾಜಿ ಸಭಾಪತಿ ವಿ.ಆರ್.ಸುದರ್ಶನ್‌, ಕರ್ನಾಟಕ ಸರ್ಕಾರದ ದೆಹಲಿಯ ಪ್ರತಿನಿಧಿ ಟಿ.ಬಿ.ಜಯಚಂದ್ರ, ಆಡಳಿತ ಪಕ್ಷದ ಮುಖ್ಯಸಚೇತಕ ಅಶೋಕ ಪಟ್ಟಣ ಹಾಜರಿದ್ದರು. ಮುಖ್ಯಮಂತ್ರಿಯವರ ಪರವಾಗಿ ಅವರ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ, ಹಿರಿಯ ವಕೀಲ ರವಿವರ್ಮ ಕುಮಾರ್, ಹಿರಿಯ ವಕೀಲ ಎಚ್‌.ಎಸ್‌.ಚಂದ್ರಮೌಳಿ, ವಕಾಲತ್ತು ವಹಿಸಿರುವ ಶತಭಿಷ ಶಿವಣ್ಣ, ಲೀಲಾ ಪಿ.ದೇವಾಡಿಗ, ಸೂರ್ಯ ಮುಕುಂದರಾಜ್‌ ಇತರರು ಇದ್ದರು.

ರಾಜಭವನದಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ: ಎಸ್‌ಜಿ

ರಾಜ್ಯಪಾಲರ ಕಚೇರಿಯ ಪರವಾಗಿ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಹಾಜರಾಗಿದ್ದ ಸಾಲಿಸಿಟರ್ ಜನರಲ್ (ಎಸ್‌ಜಿ) ಎಸ್‌.ತುಷಾರ್ ಮೆಹ್ತಾ ಅವರು ‘ರಾಜ್ಯಪಾಲರ ಮುಂದೆ ಪ್ರಾಸಿಕ್ಯೂಷನ್‌ ಅನುಮತಿಗೆ ಕಾಯುತ್ತಿರುವ ಯಾವುದೇ ಅರ್ಜಿಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಂತೆಯೇ ಅರ್ಜಿಗೆ ಸಂಬಂಧಿಸಿದಂತೆ ವಿವರವಾದ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದ ಅವರು ‘ರಾಜ್ಯಪಾಲರ ಆದೇಶಕ್ಕೆ ತಡೆ ನೀಡಬಾರದು’ ಎಂದು ಮನವಿ ಮಾಡಿದರು. ಸಿಂಘ್ವಿ ಅವರು ತಮ್ಮ ವಾದದ ಮಧ್ಯೆ ‘ಫ್ರೆಂಡ್ಲಿ ಗವರ್ನರ್‌’ ಎಂದು ಸಂಬೋಧಿಸಿದ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತುಷಾರ್ ಮೆಹ್ತಾ ‘ಸಿಂಘ್ವಿ ಮಾಧ್ಯಮಗಳ ಚಪಲಕ್ಕೆ ಈಡಾಗಿ ಇಂತಹ ಮಸಾಲೆ ಮಾತುಗಳನ್ನು ಆಡಬಾರದು. ರಾಜ್ಯಪಾಲರು ಸಾಂವಿಧಾನಿಕವಾದ ಗೌರವಾನ್ವಿತ ಹುದ್ದೆಯಲ್ಲಿರುವವರು. ಇದು ಕೋರ್ಟ್‌ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದರು.

ರಾಜ್ಯಪಾಲರ ವಿರುದ್ಧ ‘ಕೈ’ ಕೆಂಡ

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದರೆ, ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಸಚಿವರು, ಸಂಸದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನಾ ಸಮಾವೇಶ, ರ‍್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೆಲವಡೆ ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಿದರು. 

ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವರು ಸಿಟಿ ಬಸ್ಸೊಂದಕ್ಕೆ ಕಲ್ಲು ತೂರಿದ್ದರಿಂದ ಪ್ರಯಾಣಿಕ ಮಹಿಳೆಯೊಬ್ಬರಿಗೆ ಗಾಯವಾಯಿತು. ರಸ್ತೆ ತಡೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದವರನ್ನು ಪೊಲೀಸರು ವಶಕ್ಕೆ ಪಡೆದರು.

ಕ್ರುದ್ಧ ಕಾಂಗ್ರೆಸ್‌ ಕಾರ್ಯಕರ್ತರು, ರಾಜ್ಯಪಾಲ ಮತ್ತು ಬಿಜೆಪಿ ನಾಯಕರಿಗೆ ಧಿಕ್ಕಾರ ಕೂಗಿದರು.

ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಲು ಪೆಟ್ರೋಲ್ ಸುರಿ ಯುವಾಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ‌ ಬೆಂಕಿ ತಗಲಿತು. ತಕ್ಷಣ ಸುತ್ತಲಿನ ಜನರು ಬೆಂಕಿ ನಂದಿಸಿ ದರು. ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ಅಣಕು ಶವಯಾತ್ರೆ ನಡೆಸಿದರು. ಅಣಕು ಶವ ಸುಡಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಈ ವೇಳೆ ಕಾಂಗ್ರೆಸ್‌ ಕಾರ್ಯಕ ರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಕೆಲವೆಡೆ ‘ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಏಜೆಂಟರಾಗಿದ್ದಾರೆ’, ಎಂಬ ಬರಹಗಳಿದ್ದ ಫಲಕಗಳು, ಪ್ರಧಾನಿ ಮೋದಿಯೊಂದಿಗೆ ರಾಜ್ಯಪಾಲ ಗೆಹಲೋತ್ ಇರುವ ಚಿತ್ರಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ  ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಸತೀಶ ಜಾರಕಿಹೊಳಿ, ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ರಹೀಂ ಖಾನ್ ಮತ್ತು ಕೆಲವು ಶಾಸಕರು ಭಾಗವಹಿಸಿದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಹುತೇಕ ಸಚಿವರು, ರಾಜ್ಯ ಪಾಲರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

‘ಗೆಹಲೋತ್ ದಲಿತರಾಗಿದ್ದಕ್ಕೆ ಗುರಿ’

‘ಥಾವರಚಂದ್ ಗೆಹಲೋತ್ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೇ ಕಾಂಗ್ರೆಸ್‌ ಪಕ್ಷ ಅವರನ್ನು ಗುರಿ ಮಾಡಿದೆ. ಇದು ಕಾಂಗ್ರೆಸ್‌ ದಲಿತ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್‌ ಆರೋಪಿಸಿದರು.

ಸೋಮವಾರ ಸಂಜೆ ನಡೆದ ಪಕ್ಷದ ನಾಯಕರ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಾಂಗ್ಲಾ ದೇಶದ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗಿ ರಾಜ್ಯಪಾಲ ರನ್ನು ಕೆಳಗಿಳಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕರು ಬೆದರಿಕೆ ಒಡ್ಡಿದ್ದಾರೆ. ಇದರ ಅರ್ಥ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮಾದರಿಯಲ್ಲಿ ಕರ್ನಾಟಕದಲ್ಲೂ ಗಲಭೆ ಮತ್ತು ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್‌ ಸಂಚು ರೂಪಿಸಿದೆ ಎಂದಾಗಿದೆ. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಇದೇ 22ರಂದು ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

‘ಪ್ರತಿಭಟನೆಯ ವೇಳೆ ರಾಜ್ಯಪಾಲರ ಪ್ರತಿಕೃತಿ ಯನ್ನು ಕಾಂಗ್ರೆಸ್‌ನವರು ಸುಟ್ಟು ಹಾಕಿದ್ದಾರೆ. ಅವಾಚ್ಯ ಪದಗಳಿಂದ ಬೆದರಿಕೆ ಹಾಕಿದ್ದಾರೆ. ಹಂಸರಾಜ್‌ ಭಾರದ್ವಾಜ್‌ ರಾಜ್ಯಪಾಲರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಇದೇ ರೀತಿ ಅನುಮತಿ ನೀಡಿದ್ದರು. ಆಗ ಕಾಂಗ್ರೆಸ್‌ನವರು ರಾಜ್ಯಪಾಲರನ್ನು ಹಾಡಿ ಹೊಗಳಿದ್ದರು. ಭಾರದ್ವಾಜ್‌ಗೊಂದು ನೀತಿ, ದಲಿತ ಗೆಹಲೋತ್ ಅವರಿಗೆ ಮತ್ತೊಂದು ನೀತಿಯೇ’ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ ಭವನಕ್ಕೆ ನುಗ್ಗಿ ರಾಜ್ಯಪಾಲರನ್ನು ಕೆಳಗಿಳಿಸುವುದಾಗಿ ಬೆದರಿಕೆ ಒಡ್ಡಿರುವುದನ್ನು ವಿರೋಧಿಸಿ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸ ಲಾವುದು. ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಐವನ್ ಡಿಸೋಜ ವಿರುದ್ಧ ಮಂಗಳೂರಿನಲ್ಲಿ ದಾಖಲಿಸಿರುವ ದೂರನ್ನು ಆಧರಿಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮಾದರಿಯಾಗಿರುವುದು ನೋಡಿ ದರೆ ‘ಕರುನಾಡು’ ಇವರ ಕೈಲಿರು ವುದು ಎಷ್ಟು ಅಪಾಯಕಾರಿ ಎಂಬು ದನ್ನು ಸೂಚಿಸುತ್ತಿದೆ ಎಂದರು.

ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಮಾಜಿ ಸಚಿವ ಗೋವಿಂದ ಕಾರಜೋಳ ಮೊದಲಾದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಎಚ್‌ಡಿಕೆ ವಿರುದ್ಧ ಚಾರ್ಜ್‌ಶೀಟ್: ಮತ್ತೆ ಪ್ರಸ್ತಾವ

ನಿಯಮ ಉಲ್ಲಂಘಿಸಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ (ಎಸ್‌ಎಸ್‌ವಿಎಂ) ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ಆರೋಪದಡಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ಕೋರಿ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ರಾಜ್ಯಪಾಲರಿಗೆ ಸೋಮವಾರ ಮತ್ತೆ ಪ್ರಸ್ತಾವ ಸಲ್ಲಿಸಿದೆ.

ಕುಮಾರಸ್ವಾಮಿ ಅವರು 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಎಸ್‌ಎಸ್‌ವಿಎಂ ಕಂಪನಿಗೆ ಗಣಿ ಮತ್ತು ಖನಿಜ ನಿಯಮಗಳನ್ನು ಉಲ್ಲಂಘಿಸಿ 550 ಎಕರೆ ವಿಸ್ತೀರ್ಣದ ಗಣಿ ಗುತ್ತಿಗೆ ಮಂಜೂರು ಮಾಡಿದ ಆರೋಪವಿದೆ. 2011ರಲ್ಲಿ ಲೋಕಾಯುಕ್ತರಾಗಿದ್ದ ಎನ್‌. ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ್ದ ವರದಿಯಲ್ಲಿನ ಉಲ್ಲೇಖ ಆಧರಿಸಿ ಲೋಕಾಯುಕ್ತದ ಎಸ್‌ಐಟಿ ತನಿಖೆ ನಡೆಸುತ್ತಿದೆ.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ 2023ರ ನ. 21ರಂದು ಪ್ರಸ್ತಾವ ಸಲ್ಲಿಸಿದ್ದ ಲೋಕಾ ಯುಕ್ತದ ಎಸ್‌ಐಟಿ ಮುಖ್ಯಸ್ಥರಾಗಿರುವ ಐಜಿಪಿ ಎಂ. ಚಂದ್ರಶೇಖರ್‌, ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದರು.

‘ಪ್ರಸ್ತಾವವು ದೀರ್ಘ ಕಾಲದಿಂದ ರಾಜ್ಯಪಾಲರ ಬಳಿಯಲ್ಲೇ ಇದೆ. ಜುಲೈ 29ರ ದಿನಾಂಕ ಉಲ್ಲೇಖಿಸಿ ರಾಜ್ಯಪಾಲರು ಬರೆದಿದ್ದ ಪತ್ರವೊಂದು ಆಗಸ್ಟ್‌ 8ರಂದು ಎಸ್‌ಐಟಿಗೆ ತಲುಪಿತ್ತು. ಕುಮಾರಸ್ವಾಮಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆಗಳನ್ನು ನೀಡುವಂತೆ ಸೂಚಿಸಲಾಗಿತ್ತು. ಎಸ್‌ಐಟಿ ಮುಖ್ಯಸ್ಥರು ರಾಜ್ಯಪಾಲರು ಕೋರಿದ್ದ ಸ್ಪಷ್ಟನೆಗಳಿಗೆ ಉತ್ತರಗಳೊಂದಿಗೆ ಸೋಮವಾರ ಸಂಜೆ ಪತ್ರವೊಂದನ್ನು ರಾಜಭವನಕ್ಕೆ ರವಾನಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಮತ್ತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ’ ಎಂದು ಲೋಕಾಯುಕ್ತದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅನುಮತಿ ಏಕೆ ಅಗತ್ಯ?: ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ಕ್ಕೆ 2018ರಲ್ಲಿ ತಿದ್ದುಪಡಿ ತರಲಾಗಿದೆ. ಅಲ್ಲಿಯವರೆಗೂ, ಹುದ್ದೆಯಿಂದ ನಿರ್ಗಮಿಸಿದ ಚುನಾಯಿತ ಪ್ರತಿನಿಧಿಗಳು ಅಥವಾ ನಿವೃತ್ತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪಪಟ್ಟಿ ಸಲ್ಲಿಸಲು ಪೂರ್ವಾನುಮತಿ ಅಗತ್ಯವಿರಲಿಲ್ಲ. 2018ರ ತಿದ್ದುಪಡಿಯ ಪ್ರಕಾರ, ಅಪರಾಧ ಹಿಂದೆಯೇ ನಡೆದಿದ್ದರೂ ತಿದ್ದುಪಡಿಯ ಬಳಿಕ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯ. ಈ ಕಾರಣಕ್ಕಾಗಿಯೇ ರಾಜ್ಯಪಾಲರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ನವರಂಗಿ ನಕಲಿ ಸ್ವಾಮಿ ವಿರುದ್ಧ ಕ್ರಮ ಏಕಿಲ್ಲ?

‘ಜೆಡಿಎಸ್‌ ಅಗ್ರಗಣ್ಯ ನಾಯಕ, ನವರಂಗಿ ನಕಲಿ ಸ್ವಾಮಿ, ಬರೀ ಬುರುಡೆ ಬಿಡುವ ಕುಮಾರಸ್ವಾಮಿ ವಿರುದ್ಧ ಇಲ್ಲದ ಕ್ರಮ ನಮ್ಮ ವಿರುದ್ದವೇಕೆ ರಾಜ್ಯಪಾಲರೇ? ಮುಂದಿನ 10 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ನಿಮ್ಮ ಯಾವ ಹುನ್ನಾರಗಳಿಗೂ ನಮ್ಮ ಸರ್ಕಾರ ಜಗ್ಗುವುದಿಲ್ಲ, ಬಗ್ಗುವುದಿಲ್ಲ, ಹೆದರುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಗುಡುಗಿದರು.

ಮಾತಿನುದ್ದಕ್ಕೂ ಬಿಜೆಪಿ, ಜೆಡಿಎಸ್‌ ಮತ್ತು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಜನಾರ್ದನ ರೆಡ್ಡಿ ಅವರ ಮೇಲೂ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿದೆ. ಈ ಕಳಂಕಿತರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರೂ ಏಕೆ ಪುರಸ್ಕರಿಸಿಲ್ಲ ರಾಜ್ಯಪಾಲರೇ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯ ಪರವಾಗಿ ಡಿ.ಕೆ. ಶಿವಕುಮಾರ್ ಒಬ್ಬನೇ ಅಲ್ಲ, ‘ಇಂಡಿಯಾ’ ಒಕ್ಕೂಟ ಹಾಗೂ ರಾಜ್ಯದ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಕಟ್ಟಕಡೆಯ ಮತದಾರರು ಆಶೀರ್ವಾದ ಮಾಡಿ ಬೆನ್ನಲುಬಾಗಿ ನಿಂತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT