ಬೆಂಗಳೂರು: ಮುಖ್ಯಮಂತ್ರಿ ವಿರುದ್ಧದ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡುವ ಆದೇಶದ ಆಧಾರದಲ್ಲಿ ತನಿಖೆಯ ವ್ಯಾಪ್ತಿ ಮತ್ತು ಸ್ವರೂಪ ನಿರ್ಧಾರವಾಗುತ್ತದೆ ಎನ್ನುತ್ತಾರೆ ಕಾನೂನು ತಜ್ಞರು.
ಮೂವರು ವ್ಯಕ್ತಿಗಳು ಸಲ್ಲಿಸಿರುವ ಅರ್ಜಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಬರಲಿದೆ. ‘ಸಿದ್ದರಾಮಯ್ಯ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ಅನಿಸಿದರೆ, ಅವರ ವಿರುದ್ಧ ತನಿಖೆಗೆ ಆದೇಶಿಸಲು ನಿರಾಕರಿಸಬಹುದು. ಆ ರೀತಿ ಆದರೆ ಅವರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಹಿರಿಯ ವಕೀಲ ಕೆ.ವಿ.ಧನಂಜಯ.
‘ವಿಶೇಷ ನ್ಯಾಯಾಲಯವು ಇದಕ್ಕೆ ವ್ಯತಿರಿಕ್ತವಾಗಿಯೂ ಆದೇಶ ನೀಡಬಹುದು. ಅವರು ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇದ್ದಾಗಷ್ಟೇ ಅವರ ಪತ್ನಿಯ ಜಮೀನಿಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆದಿವೆ ಎಂಬುದನ್ನು ನ್ಯಾಯಾಧೀಶರು ಪರಿಗಣಿಸಿದರೆ, ಸಿದ್ದರಾಮಯ್ಯ ಮತ್ತು ಈ ಎಲ್ಲ ಪ್ರಕ್ರಿಯೆಗಳನ್ನು ನಡೆಸಿದವರ ವಿರುದ್ಧವೂ ತನಿಖೆಗೆ ಆದೇಶಿಸಬಹುದು’ ಎಂದರು.
‘ಇಂತಹವ ವಿರುದ್ಧವೇ ತನಿಖೆ ಮಾಡಿ ಎಂದು ಸೂಚಿಸದೆ, ತನಿಖೆ ನಡೆಸಿ ಎಂದೂ ಆದೇಶಿಸುವ ಸಾಧ್ಯತೆ ಇದೆ. ಆಗ ದೂರಿನಲ್ಲಿ ಉಲ್ಲೇಖಿಸಿರುವ ಎಲ್ಲರ ವಿರುದ್ಧವೂ ತನಿಖೆ ನಡೆಸಬಹುದು’ ಎಂಬುದು ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರ ಅಭಿಪ್ರಾಯ.
‘ತನಿಖೆ ನಡೆದು, ಅದರ ಆಧಾರದಲ್ಲಿ ದೋಷಾರೋಪ ಪಟ್ಟಿ ದಾಖಲಿಸಬೇಕಾಗುತ್ತದೆ. ಆದರೆ ದೋಷಾರೋಪ ಪಟ್ಟಿ ಸಲ್ಲಿಸಿ, ವಿಚಾರಣೆ ಆರಂಭಿಸಲು ಲೋಕಾಯುಕ್ತ ಪೊಲೀಸರು ಮತ್ತೆ ರಾಜ್ಯಪಾಲರಿಂದ ಅನುಮತಿ ಪಡೆಯಬೇಕಾಗುತ್ತದೆ’ ಎನ್ನುತ್ತಾರೆ ಹಿರಿಯ ವಕೀಲ ಬಿ.ವಿ.ಆಚಾರ್ಯ.