ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್‌: ಭೂಮಿ ವಾಪಸ್‌ಗೆ ರೈತರ ಆಗ್ರಹ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇಡಿಕೆ ತಲುಪಿಸಿ, ಕ್ರಮಕ್ಕೆ ಗಡುವು ನೀಡಲು ನಿರ್ಧಾರ
Published 27 ಸೆಪ್ಟೆಂಬರ್ 2023, 16:15 IST
Last Updated 27 ಸೆಪ್ಟೆಂಬರ್ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ನೈಸ್‌ ರಸ್ತೆಗಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವ ಭೂಮಿಯನ್ನು ವಾಪಸ್‌ ನೀಡದಿದ್ದರೆ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲು ರೈತರು ನಿರ್ಧರಿಸಿದ್ದಾರೆ.

ನೈಸ್‌ ಸಂತ್ರಸ್ತ ರೈತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಬುಧವಾರ ಆಯೋಜಿಸಿದ್ದ ‘ದುಂಡು ಮೇಜಿನ ಸಭೆ’ಯಲ್ಲಿ ರೈತ ಮುಖಂಡರು ಚರ್ಚೆ ನಡೆಸಿದರು. ‘ಮೂಲ ಒಪ್ಪಂದದ ಚೌಕಟ್ಟು ಉಲ್ಲಂಘಿಸಿ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಜತೆ ಮಾಡಿಕೊಂಡಿರುವ ನೈಸ್‌ ಕಂಪನಿಯ ಎಲ್ಲ ಒಪ್ಪಂದಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ನೈಸ್‌ ಕಂಪನಿಯ ಬಿಎಂಐಸಿ ಯೋಜನೆಯನ್ನು ರದ್ದುಗೊಳಿಸಬೇಕು. ನೈಸ್‌ ಹಗರಣಕ್ಕೆ ಸಂಬಂಧಿಸಿದ ಸದನ ಸಮಿತಿ ಮತ್ತು ಸಂಪುಟ ಉಪ ಸಮಿತಿಗಳು ನೀಡಿರುವ ವರದಿಯನ್ನು ಜಾರಿಗೊಳಿಸಬೇಕು. ಟೋಲ್‌ ಸಂಗ್ರಹಿಸುತ್ತಿರುವ ರಸ್ತೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯಂತೆ ನಿವೇಶನ, ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಭೆಯ ನಿರ್ಣಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸಿ, ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಗಡುವು ನೀಡಬೇಕು. ಆ ಅವಧಿ ನಂತರವೂ ಬೇಡಿಕೆಗಳು ಈಡೇರದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲು ನಿರ್ಧರಿಸಲಾಯಿತು.

ನೈಸ್‌ ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್‌. ವೆಂಕಟಾಚಲಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ದಲಿತ ಸಂಘರ್ಷ ಸಮಿತಿ ಮುಖಂಡ ವಿ. ನಾಗರಾಜ್‌, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು. ಬಸವರಾಜು, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪುಟ್ಟಮಾದು, ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಇದ್ದರು.

ನಾನು ನಿಮ್ಮೊಂದಿಗಿರುವೆ: ಕುಮಾರಸ್ವಾಮಿ

‘ನೈಸ್‌ ಭೂಸ್ವಾಧೀನವನ್ನು ರದ್ದುಪಡಿಸಿ ಅದನ್ನು ರೈತರಿಗೆ ವಾಪಸ್‌ ನೀಡುವ ಅಧಿಕಾರ ಇದೀಗ ಸರ್ಕಾರಕ್ಕಿದೆ. ನ್ಯಾಯಾಲಯದಲ್ಲಿ ಯಾವುದೇ ವಿವಾದ ಇಲ್ಲ. ಹೀಗಾಗಿ ರೈತರೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಲು ಸಿದ್ಧರಾಗಿದ್ದರೆ ನಾವು ನಿಮ್ಮೊಂದಿಗೆ ಹೋರಾಡುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

‘ನೈಸ್‌ ಯೋಜನೆಯ ಹಗರಣಗಳ ಬಗ್ಗೆ ಜಯಚಂದ್ರ ನೇತೃತ್ವದಲ್ಲಿ 2016ರಲ್ಲಿ ಸದನ ಸಮಿತಿ ನೀಡಿದ ವರದಿಯಂತೆ ಯೋಜನೆಯನ್ನೇ ರದ್ದುಗೊಳಿಸಲು ನಿರ್ಧರಿಸಿದ್ದೆ. ಆದರೆ ಸಮ್ಮಿಶ್ರ ಸರ್ಕಾರ ಆದ್ದರಿಂದ ನಾನು ಕೇವಲ ‘ಕ್ಲರ್ಕ್‌’ ಆಗಿದ್ದ ಆ ಅವಧಿಯಲ್ಲಿ ಏನೂ ಮಾಡಲು ಸಾಧ್ಯವಾಗಲಿಲ್ಲ’ ಎಂದರು.

‘ನೈಸ್ ಯೋಜನೆ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಿರುವ 11 ಸಾವಿರ ಎಕರೆ ಭೂಮಿಯನ್ನು ಸರ್ಕಾರ ವಾಪಸ್ ಪಡೆದು ರೈತರಿಗೆ ಕೊಡಬೇಕು. ಇಲ್ಲದಿದ್ದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಿಂಗೂರು ಮಾದರಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT