ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ; ಶೆಟ್ಟರ್‌

Published 14 ಡಿಸೆಂಬರ್ 2023, 13:20 IST
Last Updated 14 ಡಿಸೆಂಬರ್ 2023, 13:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಆ ಪಕ್ಷದಿಂದ ಹೊರ ಹೋಗುವವರನ್ನು ತಡೆಯುವ ಕೆಲಸವಾಗುತ್ತಿದೆ. ಮತ್ತೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ರೀತಿ ಹೇಳಿಕೆ ನೀಡುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಕುರಿತು ಈವರೆಗೂ ನನ್ನನ್ನು ಯಾರೂ ಭೇಟಿಯಾಗಿಲ್ಲ. ಭೇಟಿಯಾಗುವ ಅವಶ್ಯಕತೆಯೂ ಇಲ್ಲ’ ಎಂದರು.

‘ಯಾರದ್ದೋ ವೈಯಕ್ತಿಕ ಹಿತಾಸಕ್ತಿಗಾಗಿ ನನಗೆ ಟಿಕೆಟ್ ತಪ್ಪಿಸಿ ಅಪಮಾನ ಮಾಡಲಾಯಿತು. ಅದನ್ನು ಸಹಿಸಲು ಸಾಧ್ಯವಾಗದೆ ಅಲ್ಲಿಂದ ಹೊರಬಂದಿದ್ದೇನೆ. ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ಟಿಕೆಟ್ ನೀಡಿಲ್ಲ ಎಂದಾದರೆ ತತ್ವ, ಸಿದ್ಧಾಂತ ಏಕೆ ಬೇಕು. ಕೆ.ಎಸ್.ಈಶ್ವರಪ್ಪ ಅವರಿಗೂ ನನ್ನಂತೆ ಆಗಿದ್ದರೆ ಅವರಿಗೆ ಗೊತ್ತಾಗುತ್ತಿತ್ತು’ ಎಂದು ಹೇಳಿದರು.

‘ಚಿತ್ತಾಪುರದಲ್ಲಿ ಪ್ರಿಯಾಂಕ್‌ ಖರ್ಗೆ ವಿರುದ್ಧ 80 ಕ್ರಿಮಿನಲ್ ಪ್ರಕರಣ ಇದ್ದ ವ್ಯಕ್ತಿಗೆ ಟಿಕೆಟ್ ನೀಡಲಾಯಿತು. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಲಾಯಿತು. ಅಡ್ವಾಣಿ, ವಾಜಪೇಯಿ ಅವರ ಕಾಲದಲ್ಲಿದ್ದ ಭ್ರಷ್ಟಾಚಾರ ರಹಿತ ವ್ಯವಸ್ಥೆ ಈಗಿನ ಬಿಜೆಪಿಯಲ್ಲಿ ಇಲ್ಲ’ ಎಂದರು.

‘ರಿಪೇರಿ ಮಾಡಲು ಸಾಧ್ಯವಾಗದಷ್ಟು ಬಿಜೆಪಿ ಹಾಳಾಗಿದೆ. ಬಿ.ಎಸ್.ಯಡಿಯೂರಪ್ಪ ಅವರಂತಹ ಹಿರಿಯರನ್ನು ಬಹಿರಂಗವಾಗಿ ಟೀಕೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಉದ್ಧಾರ ಆಗಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಅಧಿವೇಶನದಲ್ಲಿ ಮಹದಾಯಿ, ಹುಬ್ಬಳ್ಳಿ–ಅಂಕೋಲಾ ರೈಲು ಯೋಜನೆ, ಬೆಣ್ಣಿಹಳ್ಳ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಆಗಲಿಲ್ಲ. ಈ ಬಗ್ಗೆ ಬೇಸರ ಇದೆ. ಜನಪ್ರತಿನಿಧಗಳು ಭಾಷಣ ಮಾಡುವುದು ಬಿಟ್ಟು ಯೋಜನೆಗಳನ್ನು ಜಾರಿಗೊಳಿಸಿದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ’ ಎಂದು ಹೇಳಿದರು.

‘ನಾನು ಕೈಗಾರಿಕಾ ಸಚಿವನಾಗಿದ್ದಾಗ ಎಫ್‌ಎಂಸಿಜಿ ಕ್ಲಸ್ಟರ್‌ಗೆ 200 ಎಕರೆ ಜಮೀನು ಮಂಜೂರು ಮಾಡಲಾಗಿತ್ತು. ಬಿಜೆಪಿ ಸರ್ಕಾರ ಇದ್ದಾಗ ಜಮೀನಿನ ದರ ಹೆಚ್ಚಿಸಲಾಯಿತು. ಹೀಗಾಗಿ ಯಾವ ಕೈಗಾರಿಕೆಗಳು ಬರುತ್ತಿಲ್ಲ’ ಎಂದರು.

‘ಸಂಸತ್‌ ಭವನದಲ್ಲಿ ನಡೆದ ಭದ್ರತಾ ವೈಫಲ್ಯ ಘಟನೆ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳು ನಡೆಯಬಾರದು. ಇದಕ್ಕೆ ಮೂಲ ಕಾರಣ, ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

‘ಹೊಸ ಸಂಸತ್‌ ಭವನದಲ್ಲಿ ಭದ್ರತಾ ವ್ಯವಸ್ಥೆ ಸರಿ ಇಲ್ಲ ಎಂಬ ಅಪನಂಬಿಕೆ ಜನರಲ್ಲಿ ಮೂಡಿದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ಕೇಂದ್ರ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಸಂಸತ್‌ ಭವನ ಪ್ರವೇಶಿಸಲು ವ್ಯಕ್ತಿಗಳ ಹಿನ್ನೆಲೆ ಪರಿಶೀಲಿಸಿ ಪಾಸ್  ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT