ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್ ಸೇರಿ ಭಾವಚಿತ್ರಗಳ ಅನಾವರಣಕ್ಕೆ ವಿರೋಧಪಕ್ಷಗಳ ಆಕ್ಷೇಪ

Last Updated 19 ಡಿಸೆಂಬರ್ 2022, 13:51 IST
ಅಕ್ಷರ ಗಾತ್ರ

ಬೆಳಗಾವಿ(ಸುವರ್ಣ ವಿಧಾನಸೌಧ):ವಿಧಾನಸಭೆಯ ಸಭಾಂಗಣದಲ್ಲಿ ಸೋಮವಾರ ಕಲಾಪದ ಆರಂಭಕ್ಕೂ ಮೊದಲೇ ವಿನಾಯಕ ದಾಮೋದರ ಸಾವರ್ಕರ್ ಅವರದ್ದೂ ಸೇರಿ ಏಳು ಮಹನೀಯರ ಭಾವಚಿತ್ರಗಳ ಅನಾವರಣ ವಿರೋಧಪಕ್ಷಗಳ ಗಮನಕ್ಕೂ ತರದೇ ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಬಸವೇಶ್ವರ, ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ಸರ್ದಾರ್‌ ವಲ್ಲಭಬಾಯ್ ಪಟೇಲ್‌, ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ಸಾವರ್ಕರ್‌ ಭಾವಚಿತ್ರಗಳನ್ನು ಹಾಕಲಾಗಿದ್ದು, ಆದರೆ, ಭಾರತದ ಮೊದಲ ಪ್ರಧಾನಿ ನೆಹರೂ ಅವರ ಭಾವಚಿತ್ರವನ್ನು ಹಾಕಿಲ್ಲ.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ನಾರಾಯಣಗೌಡ, ಬೈರತಿ ಬಸವರಾಜ, ಪ್ರಭು ಚವ್ಹಾಣ ಇದ್ದರು.

ಬಿಜೆಪಿ ಲೆಕ್ಕಾಚಾರ–ಪಟ್ಟು ಬದಲಿಸಿದ ಕೈ:

ಸಾವರ್ಕರ್‌ ಅವರ ಭಾವಚಿತ್ರ ಅಳವಡಿಕೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಹಜವಾಗಿ ವಿರೋಧ ವ್ಯಕ್ತಪಡಿಸಲಿದ್ದು ರಾಜಕೀಯವಾಗಿ ಇದರ ಲಾಭ ಪಡೆಯಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಇದರ ಮರ್ಮ ಅರಿತ ಕಾಂಗ್ರೆಸ್‌ ಪಕ್ಷ ತನ್ನ ಪಟ್ಟನ್ನು ಬದಲಿಸಿತು. ‘ಸಾವರ್ಕರ್‌ ಅವರ ಭಾವಚಿತ್ರಕ್ಕೆ ನಮ್ಮ ವಿರೋಧವಿಲ್ಲ. ಇನ್ನೂ ಹಲವು ಮಹಾನ್‌ ನಾಯಕರ ಚಿತ್ರ ಅಳವಡಿಸಬಹುದಿತ್ತು. ಆದರೆ, ಸರ್ಕಾರವು ವಿರೋಧ ಪಕ್ಷಗಳ ಗಮನಕ್ಕೂ ತರದೇ ಮತ್ತು ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಚರ್ಚಿಸಿದೇ, ಕಡೇ ಪಕ್ಷ ಆಹ್ವಾನ ನೀಡದೇ ಗುಟ್ಟಾಗಿ ಅನಾವರಣಗೊಳಿಸಿದ್ದು ಸರಿಯಲ್ಲ’ ಎಂಬುದಾಗಿ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿತು.

‘ಕಲಾಪ ಸಲಹಾ ಸಮಿತಿಯಲ್ಲಿ ವಿಷಯವನ್ನು ಪ್ರಸ್ತಾಪಿಸದೇ ಭಾವಚಿತ್ರವನ್ನು ಅನಾವರಣ ಮಾಡಲಾಗಿದೆ. ಸರ್ಕಾರದ ಈ ನಡೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಲಾಪ ಸಲಹಾ ಸಮಿತಿ ಸಭೆಯನ್ನೂ ಬಹಿಷ್ಕರಿಸುತ್ತೇವೆ’ ಎಂದು ಕಾಂಗ್ರೆಸ್‌ ನಾಯಕರು ಹೇಳಿದರು.

ಸಾವರ್ಕರ್‌ ಭಾವಚಿತ್ರ ಅಳವಡಿಕೆಯನ್ನು ನೇರವಾಗಿ ವಿರೋಧಿಸದ ಕಾಂಗ್ರೆಸ್‌ ನಾಯಕರು, ರಾಜ್ಯ ಮತ್ತು ರಾಷ್ಟ್ರದ ಇತರ ಮಹಾನ್‌ ನಾಯಕರ ಭಾವಚಿತ್ರಗಳನ್ನೂ ಅಳವಡಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿತು.

ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕರು ಬಹಿರಂಗವಾಗಿ ಸಾವರ್ಕರ್‌ ಚಿತ್ರ ಅವಳವಡಿಕೆಯನ್ನು ಆಕ್ಷೇಪಿಸಲಿಲ್ಲ. ಸಂತಾಪ ಸೂಚನೆಯ ಬಳಿಕ ಈ ವಿಷಯ ಪ್ರಸ್ತಾಪಿಸುವ ಗೋಜಿಗೂ ಹೋಗಲಿಲ್ಲ. ಆದರೆ, ಮಂಗಳವಾರ ಕಾಂಗ್ರೆಸ್‌ನ ಕೆಲವು ಶಾಸಕರು ಪ್ರಸ್ತಾಪಿಸುವ ಸಾಧ್ಯತೆ ಇದೆ.

ಕಲಾಪ ಆರಂಭವಾಗುವುದಕ್ಕೂ ಮುನ್ನ ಅನೌಪಚಾರಿಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌, ಸಚಿವ ಆರ್‌.ಅಶೋಕ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದರು.

'ಭಾವಚಿತ್ರ ಅಳವಡಿಕೆ ವಿಚಾರ ತಮಗೆ ಗೊತ್ತೇ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲದೇ ಹಾಕುತ್ತಾರೆಯೇ’ ಎಂದ ಡಿ.ಕೆ.ಶಿವಕುಮಾರ್, ’ಹಾಗಿದ್ದರೆ ಅವರಿಗೆ ಅತ್ಯಂತ ಮುಗ್ದ ಎಂಬ ಪ್ರಶಸ್ತಿ ಕೊಡಬೇಕು’ ಎಂದು ಛೇಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ, ‘ಹಾಗಿದ್ದರೆ ನೀವು ಡೇಟ್‌ ಫಿಕ್ಸ್‌ ಮಾಡಿ ಕಾರ್ಯಕ್ರಮ ನಿಗದಿ ಮಾಡಿ’ ಎಂದು ಡಿ.ಕೆ.ಶಿವಕುಮಾರ್ ಅವರ ಕಾಲೆಳೆದರು.

ಕಾಂಗ್ರೆಸ್‌ನ ಈಶ್ವರ ಖಂಡ್ರೆಯವರು, ‘ಬಸವೇಶ್ವರ ಅವರ ಭಾವಚಿತ್ರ ಅಷ್ಟು ಸರಿಯಾಗಿ ಮೂಡಿ ಬಂದಿಲ್ಲ, ಬಸವಣ್ಣನವರ ಭಾವಕ್ಕೆ ಹತ್ತಿರವಿಲ್ಲ. ಬೇರೆಯದೇ ಅಳವಡಿಸಬೇಕು’ ಎಂದರು. ‘ನೀವೇ ಒಂದು ಮಾಡಿಸಿಕೊಡಿ ಅದನ್ನೇ ಹಾಕಿಸೋಣ’ ಎಂಬ ಪ್ರತಿಕ್ರಿಯೆ ಆಡಳಿತ ಪಕ್ಷದ ಕಡೆಯಿಂದ ಬಂದಿತು.

ಕಾಂಗ್ರೆಸ್‌ ಆಕ್ಷೇಪವೇನು?

ವಿಧಾನಸಭೆಯ ಸಭಾಂಗಣದಲ್ಲಿ ಅನಾವರಣಗೊಳ್ಳುವ ಭಾವಚಿತ್ರಗಳು ಸದನದ ಆಸ್ತಿಯಾಗಿರುತ್ತದೆ. ಆಡಳಿತ ಮತ್ತು ವಿರೋಧಪಕ್ಷಗಳು ಸೇರಿ ಈ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಬೇಕು. ಇದಕ್ಕಾಗಿ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಬೇಕು. ಯಾವ– ಯಾವ ಭಾವಚಿತ್ರಗಳನ್ನು ಅಳವಡಿಸಲಾಗುತ್ತದೆ ಎಂಬುದನ್ನು ಮೊದಲೇ ತೀರ್ಮಾನಿಸಬೇಕು. ಕಾರ್ಯಕ್ರಮಕ್ಕೆ ದಿನಾಂಕವನ್ನು ಹಿರಿಯ ಸದಸ್ಯರು ಒಮ್ಮತದಿಂದ ನಿರ್ಧರಿಸಬೇಕು. ಆಹ್ವಾನ ಪತ್ರಿಕೆಯನ್ನು ಅಧಿಕೃತವಾಗಿ ವಿಧಾನಸಭೆ ಸಚಿವಾಲಯದಿಂದಲೇ ಹೊರಡಿಸಬೇಕು. ಸಭಾಧ್ಯಕ್ಷರು ಈ ಯಾವುದೇ ಪ್ರಕ್ರಿಯೆನ್ನು ಕೈಗೊಂಡಿಲ್ಲ. ಆದ್ದರಿಂದ ಕಲಾಪ ಸಲಹಾಸಮಿತಿ ಸಭೆಯನ್ನು ಬಹಿಷ್ಕರಿಸುತ್ತೇವೆ.

ಭಾವಚಿತ್ರ ಹಾಕುವ ಚಿತ್ರ ಗೊತ್ತಿರಲಿಲ್ಲ

‘ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ವೀರ ಸಾವರ್ಕರ್‌ ಸೇರಿ ಏಳು ಮಹನೀಯರ ಭಾವಚಿತ್ರ ಹಾಕುವ ವಿಚಾರ ಸ್ಪೀಕರ್‌ಗೆ ಬಿಟ್ಟಿದ್ದು, ಅದು ಅವರ ನಿರ್ಧಾರ. ನನಗೆ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸೋಮವಾರ ನಗರಕ್ಕೆ ಬಂದ ಅವರು, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

‘ಸಾವರ್ಕರ್‌ ಭಾವಚಿತ್ರ ಹಾಕಿದ ಬಗ್ಗೆ ಕಾಂಗ್ರೆಸ್‌ ಅ‍ಪಸ್ವರ ಹಾಗೂ ಇನ್ನೂ ಹಲವು ಮಹಾತ್ಮರ ಭಾವಚಿತ್ರ ಅಳವಡಿಸುವಂತೆ ಪತ್ರ ಬರೆದ ವಿಚಾರಗಳೂ ನನಗೆ ತಿಳಿದಿಲ್ಲ. ಈ ಬಗ್ಗೆ ಸ್ಪೀಕರ್‌ ಹಾಗೂ ವಿರೋಧ ಪಕ್ಷದವರೊಂದಿಗೆ ನಾನೇ ಮಾತನಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT