ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಮೀಸಲಾತಿ ತೃಪ್ತಿ ತಂದಿದೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ
Last Updated 17 ಏಪ್ರಿಲ್ 2023, 6:56 IST
ಅಕ್ಷರ ಗಾತ್ರ

ಶಿವಮೊಗ್ಗ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಕಾನೂನು ಚೌಕಟ್ಟಿನಲ್ಲಿ ದೊರೆಯಬೇಕಿದ್ದ ಶೇ 7ರಷ್ಟು ಮೀಸಲಾತಿ ಸಿಕ್ಕಿರುವುದು ತೃಪ್ತಿ ತಂದಿದೆ. ಪ್ರಾಮಾಣಿಕ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂದಿರಲ್ಲಿ ಭಾನುವಾರ ಅಖಿಲ ಭಾರತ ಪಂಚಮಸಾಲಿ ಮಹಸಭಾ ಪಂಚಮಸಾಲಿ ಟ್ರಸ್ಟ್ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಪಂಚಮಸಾಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ಶಿವಕುಮಾರ್ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಪ್ರವರ್ಗ 2ಎ ಮೀಸಲಾತಿಯಲ್ಲಿ ಸಿಗುವ ಎಲ್ಲಾ ಸವತ್ತುಗಳೂ ಪ್ರವರ್ಗ 2ಡಿ ಮೀಸಲಾತಿಯಲ್ಲಿ ದೊರೆಯುತ್ತವೆ. ರಾಜ್ಯದಲ್ಲಿ ಎರಡೂವರೆ ವರ್ಷದ ಹೋರಾಟದ ಪ್ರತಿಫಲವಾಗಿ ಮೈಸೂರಿನಲ್ಲಿ ಲಿಂಗಾಯತಗೌಡ, ಮಲೆನಾಡಿನಲ್ಲಿ ಮಲೆಗೌಡ, ಕಲ್ಯಾಣ ರಾಜ್ಯದಲ್ಲಿ ಧೀಕ್ಷ ಲಿಂಗಾಯತರಾಗಿ ಇದ್ದ ಸಮಾಜ ಈಗ ಒಂದಾಗಿದೆ. ಸಮಾಜ ಜಾಗೃತಗೊಂಡಿದೆ ಎಂದರು.

‘ನಮ್ಮ ಹೋರಾಟದ ಪ್ರತಿಫಲವಾಗಿ 32 ಒಳ ಪಂಗಡಗಳಿಗೆ 2ಡಿ ಮೀಸಲಾತಿ ದೊರೆತಿದೆ. ಪಂಚಮಸಾಲಿಗಳನ್ನು ಹಿಂದೆ ಗಣನೆಗೆ ತೆಗೆದುಕೊಳ್ಳದೆ, ಮೀಸಲಾತಿ ವಿಚಾರವಾಗಿ ಅನ್ಯಾಯ ಆಗುತ್ತಲೇ ಇತ್ತು. ಇದರ ಪರಿಣಾಮದಿಂದ ಸಮಾಜದಲ್ಲಿ ಅನೇಕ ಸವಾಲುಗಳು ತಲೆದೂರಿದ್ದವು. ಡಿ.ದೇವರಾಜ್ ಅರಸ್ ಅವರು ಮುಖ್ಯಮಂತ್ರಿ ಆಗಿದ್ದಾಗ ಲಿಂಗಾಯತ ಎಂಬುದನ್ನು ಬಿಟ್ಟು ಬಂದರೆ ಮಾತ್ರ ಮೀಸಲಾತಿ ಎಂದು ಹೇಳಿದ್ದರು. ಆದ್ದರಿಂದ ಮಕ್ಕಳ ಭವಿಷ್ಯಕ್ಕಾಗಿ ಸಮಾಜದ ಬಡವರು, ವಿಭೂತಿ, ಲಿಂಗವನ್ನು ಗೂಟಕ್ಕೆ ಸಿಕ್ಕಿಸಿ ಮೀಸಲಾತಿಯ ಹಿಂದೆ ಹೋಗಿದ್ದರು. ಮೀಸಲಾತಿ ಎಂದರೆ ಲಿಂಗಾಯತರಗೆ ಊಹೆಗೂ ನಿಲುಕದ ಆಕಾಶದಂತಿತ್ತು’ ಎಂದು ಹೇಳಿದರು.

‘ಮಲೆಗೌಡ ಲಿಂಗಾಯತರು ಹಾಗೂ ಪಂಚಮಸಾಲಿಗಳು ಬೇರೆ ಅಲ್ಲ. ಲಿಂಗಾಯತರು ಎಂದರೆ, ದಾಸೋಹಿಗಳು ಎಂದು ಕಾಣಲಾಗುತ್ತಿತ್ತು. ಪ್ರಸ್ತುತ ಮೂರು ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣಾ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆಗೊಳಿಸಿವೆ. ಅದರಲ್ಲಿ ಶೇ 70ರಷ್ಟು ಪಂಚಮಸಾಲಿಗಳಿಗೆ ಟಿಕೆಟ್ ನೀಡಲಾಗಿದೆ. ಮೀಸಲಾತಿ ಹೋರಾಟ ಜನಾಂಗಿಯವಾಗಿ ಮಾತ್ರ ಬಡಿದೆಬ್ಬಿಸದೆ, ರಾಜಕೀಯವಾಗಿಯೂ ಚುರುಕು ಮುಟ್ಟಿಸಿದೆ’ ಎಂದ ಅವರು, ‘ಮೀಸಲಾತಿ ಹೋರಾಟದಿಂದ ಪಂಚಮಸಾಲಿಗಳು ಬೆಳಕಿಗೆ ಬಂದರು’ ಎಂದರು.

‘ಹಿಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷದಿಂದ ಪಂಚಮಸಾಲಿಗಳಿಗೆ 5 ಸೀಟು ನೀಡುವುದು ಕಷ್ಟ ಇತ್ತು. ಪ್ರಸ್ತುತ 15 ಸೀಟುಗಳ‌ನ್ನು ಪ್ರಕಟ ಮಾಡಿದೆ. ಬಿಜೆಪಿಯಲ್ಲಿ 16 ಸೀಟು ಕೊಟ್ಟಿದೆ. ಜೆಡಿಎಸ್ ಬಹುತೇಕ ಪಂಚಮಸಾಲಿ ಪರ ನಿಂತಿದೆ. ರಾಜ್ಯದಲ್ಲಿ ಮೀಸಲಾತಿ ಪಡೆಯುವಲ್ಲಿ ಗೆದ್ದಿದ್ದೇವೆ. ಚುನಾವಣೆ ನಂತರ ಮೀಸಲಾತಿ ವಿಚಾರದಲ್ಲಿ ಕೇಂದ್ರದ ಕಡೆ ಮುಖ ಮಾಡೋಣ’ ಎಂದು ಕರೆ ನೀಡಿದರು.

‘ಪಂಚಮಸಾಲಿಗಳು ಯಾರಿಗೂತೊಂದರೆ ಆಗುವಂತೆ ನಡೆದುಕೊಳ್ಳುವರಲ್ಲ. ಅವರು ಸ್ನೇಹ ಜೀವಿಗಳು. ಆದರೆ ಅವರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಸಮುದಾಯದಲ್ಲಿ ಯುವಕರಿಗೆ ಸರಿಯಾದ ಉದ್ಯೋಗ ಇಲ್ಲ. ಈಗ ದೊರೆತಿರುವ ಮೀಸಲಾತಿಯಿಂದ ನಾವೆಲ್ಲರೂ ಒಟ್ಟಾಗಿ, ಸಿಗಬೇಕಿರುವ ಸವಲತ್ತುಗಳನ್ನು ಪಡೆದುಕೊಳ್ಳೋಣ. ಮುಂದಿನ ದಿನದಲ್ಲಿ ಸಂಘಟಿತಾಗಿ ಸಮಾಜವನ್ನು ಮುನ್ನಡೆಸೋಣ’ ಎಂದು ಪಂಚಮಸಾಲಿ ಜಿಲ್ಲಾ ಅಧ್ಯಕ್ಷ ಬಿ.ಎಸ್.ಶಿವಕುಮಾರ್ ಸಲಹೆ ನೀಡಿದರು.

‘ಪಂಚಮಸಾಲಿಗಳಿಗೆ ಭದ್ರತೆ ಮತ್ತು ಅಸ್ತಿತ್ವ ಬರಬೇಕಿದ್ದರೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದುವರಿಯಬೇಕು. ಅವರಲ್ಲಿ ರಾಜಕೀಯ ಶಕ್ತಿ ಹುಟ್ಟಬೇಕು. ಅದು ಹೋರಾಟದ ಪ್ರತಿಫಲವಾಗಿ ಗುರುಗಳಿಂದ ಆಗಿದೆ. ಅದನ್ನು ಮುಂದುವರೆಸಿಕೊಂಡು ಹೊಗಬೇಕಿದೆ. ಮೀಸಲಾತಿಯಿಂದ ಈಗ ಶಕ್ತಿ ಬಂದಿದೆ’ ಎಂದು ಸಮಾಜದ ಹಿರಿಯ ಮುಖಂಡ ಎಂ.ಎನ್ ಹೆಗ್ದೆ ಹೇಳಿದರು.

ಪ್ರಮುಖರಾದ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಜಯ ಕುಮಾರ್, ಗಂಗಾಧರ ಮಂಡೇನಕೊಪ್ಪ, ಎಚ್.ವಿ. ಮಹೇಶ್ವರಪ್ಪ, ಎನ್.ಎಸ್ ಕುಮಾರ್, ಸತೀಶ್, ಟಿ.ಎನ್ ಕುಮಾರ್, ಹಾವೇರಿ ಲಿಂಗಪ್ಪ, ಗೀತಾ ರವೀಂದ್ರ, ಸರಳಾ ಕರಿಬಸವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT