ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ | ಬಿಜೆಪಿ–ಕಾಂಗ್ರೆಸ್‌ ಗೆಲುವಿನ ಓಟಕ್ಕೆ ‘ಬಂಡಾಯ’ದ ತಡೆ

Published 28 ಮೇ 2024, 23:50 IST
Last Updated 28 ಮೇ 2024, 23:50 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಶಿವಮೊಗ್ಗ ಸೇರಿ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ ವಿಧಾನಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ ರಂಗೇರಿದೆ. ಈ ಬಾರಿ ಬಂಡಾಯದ ಬಿಸಿ ಕಾಂಗ್ರೆಸ್‌– ಬಿಜೆಪಿ ಎರಡೂ ಪಕ್ಷಗಳನ್ನು ಸುಡುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ಪದವೀಧರರ ಶ್ರೀರಕ್ಷೆ ಕೋರಿ ಮನೆ ಮನೆಗೆ ಎಡತಾಕುತ್ತಿದ್ದಾರೆ.

ನೈರುತ್ಯ ಪದವೀಧರ ಕ್ಷೇತ್ರ ಕಳೆದ 42 ವರ್ಷಗಳಿಂದಲೂ ಬಿಜೆಪಿಯ ಭದ್ರಕೋಟೆ. ಹಿಂದಿನ ಏಳು ಚುನಾವಣೆ ಗಳಲ್ಲೂ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ವಿಜಯದ ಓಟ ಮುಂದುವರಿಸುವ ಇರಾದೆ ಬಿಜೆಪಿ ಪಾಳಯದಲ್ಲಿದೆ. ಇನ್ನೊಂದೆಡೆ ಕಾಂಗ್ರೆಸ್‌ಗೆ ನಾಲ್ಕು ದಶಕಗಳ ಸೋಲಿನ ಸರಪಳಿ ಕಳಚಿಕೊಳ್ಳುವ ಧಾವಂತ. ಆದರೆ, ಎರಡೂ ಪಕ್ಷಗಳಲ್ಲಿನ ಬಂಡಾಯದ ಬೇಗೆ ಈ ಬಾರಿಯ ಪರಿಸ್ಥಿತಿಯನ್ನು ಭಿನ್ನವಾಗಿಸಿದೆ.

ಕ್ಷೇತ್ರವನ್ನು ಈ ಹಿಂದೆ ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಆರು ಬಾರಿ ಪ್ರತಿನಿಧಿಸಿದ್ದಾರೆ. ಹಾಲಿ ಕ್ಷೇತ್ರ ಪ್ರತಿನಿಧಿ ಸುತ್ತಿದ್ದ ಆಯನೂರು ಮಂಜುನಾಥ್ ಕೂಡ ಬಿಜೆಪಿಯಿಂದಲೇ ಗೆಲುವು ಸಾಧಿಸಿದ್ದರು. ಬದಲಾದ ಸನ್ನಿವೇಶದಲ್ಲಿ ಈ ಬಾರಿ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಆಯನೂರು ವಿರುದ್ಧ ಸೋಲು ಕಂಡಿದ್ದ ಕಾಂಗ್ರೆಸ್‌ನ ಎಸ್‌.ಪಿ. ದಿನೇಶ್, ಟಿಕೆಟ್‌ ಕೈತಪ್ಪಿದ್ದರಿಂದ ಬಂಡಾಯ ಸಾರಿ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ತಪ್ಪಿದ್ದರಿಂದ, ಉಡುಪಿಯ ರಘುಪತಿ ಭಟ್ ವಿಧಾನ ಪರಿಷತ್‌ನ ಈ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಅದಕ್ಕೂ ಬಿಜೆಪಿ ಹೈಕಮಾಂಡ್‌ ಮನ್ನಣೆ ನೀಡದೆ ಶಿವಮೊಗ್ಗದ ವೈದ್ಯ ಡಾ.ಧನಂಜಯ ಸರ್ಜಿ ಅವರಿಗೆ ಮಣೆ ಹಾಕಿದೆ. ರಘುಪತಿ ಭಟ್ ಮುನಿಸಿಕೊಂಡು ಬಂಡಾಯವೆದ್ದು ಸ್ಪರ್ಧಿಸಿದ್ದಾರೆ.

ಎರಡೂ ಪಕ್ಷಗಳಲ್ಲಿ ಪ್ರಭಾವಿಗಳೇ ಭಿನ್ನ ಹಾದಿ ತುಳಿದಿರುವುದರಿಂದ ಈ ಬಾರಿಯ ಚುನಾವಣಾ ಕಣ ರಂಗೇರಿದೆ.

ಆಯನೂರು ಬೆನ್ನಿಗೆ ಕಾಂಗ್ರೆಸ್ ಬಲ: ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ವೈಯಕ್ತಿಕ ವರ್ಚಸ್ಸು, ಹಿಂದೆ ಮಾಡಿರುವ ಕೆಲಸಗಳ ಕಾರ್ಡ್ ಹಿಡಿದು ಆಯನೂರು ಮಂಜುನಾಥ್ ಮತದಾರರ ಮನಗೆಲ್ಲಲು ಹೊರಟಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಿನ ಕಡೆ ಪಕ್ಷದ ಶಾಸಕರೇ ಇರುವುದು ಅವರ ಉತ್ಸಾಹ ಹೆಚ್ಚಿಸಿದೆ. ಸಚಿವ ಮಧು ಬಂಗಾರಪ್ಪ ಆಯನೂರು ಬೆನ್ನಿಗೆ ನಿಂತಿದ್ದಾರೆ.

ಅನುಕಂಪದ ಹಾದಿ, ಅತೃಪ್ತರ ಬೆಂಬಲ: ಸತತ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿರುವುದರಿಂದ ಮತದಾರರಲ್ಲಿ ತಮ್ಮ ಬಗ್ಗೆ ಅನುಕಂಪ ಇದೆ. ಅದು ಕೈ ಹಿಡಿಯಲಿದೆ ಎಂಬ ವಿಶ್ವಾಸ ಎಸ್.ಪಿ. ದಿನೇಶ್ ಅವರದ್ದು. ಆಯನೂರು ಮಂಜುನಾಥ್ ಅವರ ವಿರೋಧಿಗಳ ಬೆಂಬಲ ಕ್ರೋಡೀಕರಿಸುವ ಪ್ರಯತ್ನ ನಡೆಸಿದ್ದಾರೆ. ಪದವೀಧರರ ಸಹಕಾರ ಸಂಘದ ಮೂಲಕ ಮತದಾರರೊಂದಿಗಿನ ನಿರಂತರ ಸಂಪರ್ಕ ತಮ್ಮ ಗೆಲುವಿಗೆ ನೆರವಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. 

‍ಪಕ್ಷದ ಬಲ, ಸಾಮಾಜಿಕ ಕಾರ್ಯ: ಶಿವಮೊಗ್ಗದಲ್ಲಿ ಸರ್ಜಿ ಫೌಂಡೇಷನ್ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಡಾ.ಧನಂಜಯ ಸರ್ಜಿ, ಬಿಜೆಪಿಯ ಸಂಘಟನಾ ಬಲವನ್ನೇ ಹೆಚ್ಚು ನಂಬಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದವೀಧರರ ನೆರವಿಗೆ ತಂದಿರುವ ಯೋಜನೆಗಳ ಬಗ್ಗೆ ಮತದಾರ ರಿಗೆ ಮನವರಿಕೆ ಮಾಡುವ ಜೊತೆಗೆ, ‘ಪಕ್ಷಕ್ಕೆ ನಾನು ಹೊಸಬನಲ್ಲ’ ಎಂದು ಒತ್ತಿ ಹೇಳುತ್ತಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಶಾಸಕರು ಇವರ ಬೆನ್ನಿಗಿದ್ದಾರೆ.

ರಾಷ್ಟ್ರಭಕ್ತರ ಬಳಗ, ಮಿತ್ರರ ಒಲವು: ನೈರುತ್ಯ ಪದವೀಧರ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಕರಾವಳಿ–ಮಲೆನಾಡು ಭಾಗದ ಮತದಾರರು ತಮ್ಮ ಕೈ ಬಿಡುವುದಿಲ್ಲ ಎಂಬ ಉತ್ಸಾಹ ದಲ್ಲಿ ರಘುಪತಿ ಭಟ್‌ ಇದ್ದಾರೆ. ರಘುಪತಿ ಭಟ್ ಅವರಿಗೆ ಕೆ.ಎಸ್. ಈಶ್ವರಪ್ಪ ತಮ್ಮ ರಾಷ್ಟ್ರಭಕ್ತ ಬಳಗದಿಂದ ಬೆಂಬಲ ಘೋಷಿಸಿ ಪ್ರಚಾರ ಕೂಡ ನಡೆಸಿದ್ದಾರೆ.

ಪದವೀಧರ ಸರ್ಕಾರಿ ನೌಕರರನ್ನು ಮತದಾರರ ಪಟ್ಟಿಗೆ ಕಡ್ಡಾಯವಾಗಿ ಸೇರ್ಪಡೆಗೊಳಿಸಿರುವ ಕಾರಣ ಈ ಬಾರಿ ಕ್ಷೇತ್ರದಲ್ಲಿ 33,000 ಮತದಾರರ ಸಂಖ್ಯೆ ಹೆಚ್ಚಳಗೊಂಡಿದೆ. ಅವರ ಮನಗೆಲ್ಲಲು ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೊಳಿಸಲು ಶ್ರಮಿಸುವುದಾಗಿ ಅಭ್ಯರ್ಥಿಗಳು ಒತ್ತಿ ಹೇಳುತ್ತಿದ್ದಾರೆ.

ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ–ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇರುತ್ತಿತ್ತು. ಈಗ ನಾಲ್ವರ ನಡುವೆ ಪೈಪೋಟಿ ಒಡಮೂಡಿದೆ. ಜಾತಿ ಸಮೀಕರಣಕ್ಕಿಂತ ಪದವೀಧರರ ಒಲವು ವಿಜಯಕ್ಕೆ ಬಲ ಕೊಡುತ್ತದೆ. ಜಯದ ನಗೆ ಯಾರದ್ದು ಎಂಬ ಗುಟ್ಟುಮಾತ್ರ ಮತದಾರ ಬಿಟ್ಟುಕೊಡುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT