ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಾವ್ಯಲೋಕದ ಸದಾಪು ಗಿಡ

Last Updated 7 ಆಗಸ್ಟ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ನಿನ್ನ ದಪ್ಪನೆಯ ಕೆಂಪು ಕೆಳದುಟಿಗಿಂತ ಸ್ವರ್ಗಲೋಕದ ಯಾವ ಅಪ್ಸರೆಯು ಬೇಡ... ಬಾರೆ, ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ’ ಎನ್ನುವ ‘ಉಲೂಪಿ’ ಕವಿತೆಯ ಸಾಲುಗಳು ಸುಮತೀಂದ್ರ ನಾಡಿಗರ ವ್ಯಕ್ತಿತ್ವಕ್ಕೂ ಹೊಂದುವಂತಹವು. ಕವಿತೆಯಲ್ಲಿನ ರಸಿಕತನ ನಾಡಿಗರ ಒಟ್ಟಾರೆ ವ್ಯಕ್ತಿತ್ವಕ್ಕೆ ಅನ್ವಯವಾದರೆ, ಸದಾಪು ಗಿಡದ (ನಾಗದಾಳಿ ಗಿಡದ) ವಾಸನೆ – ಚಿಕಿತ್ಸಕ ಗುಣ ಅವರ ಪ್ರಯೋಗಶೀಲತೆಯ ಅನನ್ಯತೆಗೆ ಸಂಬಂಧಿಸಿದ್ದು.

ಚಿಕ್ಕಮಗಳೂರು ಜಿಲ್ಲೆಯ ಕಳಸ ನಾಡಿಗರ ಊರು (ಜ: ಮೇ 14, 1935). ಹಿತ್ತಲಲ್ಲಿನ ಸದಾಪು ಗಿಡವನ್ನು ರೂಪಕವಾಗಿ ಬಳಸಿದರೂ ಅವರ ನೋಟ ಜಾಗತಿಕವಾದುದು. ‘ನ್ಯಾಷನಲ್‌ ಬುಕ್‌ ಟ್ರಸ್ಟ್‌’ ಅಧ್ಯಕ್ಷರಾಗಿದ್ದರು. ಪ್ರಾಧ್ಯಾಪಕರಾಗಿ ಬೆಳಗಾವಿ, ಗೋವಾ, ಬೆಂಗಳೂರು, ಅಮೆರಿಕಗಳಲ್ಲಿ ಪಾಠ ಹೇಳಿದ್ದರು. ಫಿಲಿಡೆಲ್ಪಿಯಾದ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಕನ್ನಡ ಲೇಖಕರ ಕೈ ಯಾವ ಇಂಗ್ಲಿಷ್‌ ಬರಹಗಾರನ ಜೇಬಲ್ಲಿದೆ ಎನ್ನುವುದನ್ನು ಪತ್ತೆಹಚ್ಚುವುದರಲ್ಲಿ ಪ್ರಸಿದ್ಧರಾಗಿದ್ದರು. ‘ಕನ್ನಡ ಸಾಂಸ್ಕೃತಿಕ ಲೋಕದ ಪತ್ತೇದಾರ’ ಎನ್ನುವುದು ಅವರ ಬಗ್ಗೆ ಚಾಲ್ತಿಯಲ್ಲಿದ್ದ ವಿಶೇಷಣಗಳಲ್ಲೊಂದು.

ಅಧ್ಯಾಪನ, ವಿಮರ್ಶೆ, ಸಾಂಸ್ಕೃತಿಕ ಪರಿಚಾರಿಕೆ – ಹೀಗೆ ನಾಡಿಗರ ವ್ಯಕ್ತಿತ್ವಕ್ಕೆ ಹಲವು ಚಾಚು. ಮೂಲತಃ ಅವರು ಕವಿ. ‘ಪಂಚಭೂತಗಳು’, ‘ದಾಂಪತ್ಯಗೀತ’, ‘ನಟರಾಜ ಕಂಡ ಕಾಮನಬಿಲ್ಲು’ ಅವರ ಪ್ರಸಿದ್ಧ ಕವನಸಂಕಲನಗಳು. ಹೆಣ್ಣುಮಕ್ಕಳ ಹೆಸರಿನಲ್ಲಿಯೂ ಕವಿತೆಗಳನ್ನು ಬರೆದ ‍ತುಂಟ ಪ್ರಯೋಗಶೀಲತೆ ಅವರದಾಗಿತ್ತು.

‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ ಅವರ ಪ್ರೌಢ ಪ್ರಬಂಧ. ಕುವೆಂಪು–ಕೆಎಸ್‌ನ ಕಾವ್ಯದ ಬಗ್ಗೆಯೂ ಅಧ್ಯಯನ ನಡೆಸಿದ್ದರು. ಅಡಿಗರ ನಿಕಟವರ್ತಿಯಾಗಿ, ಅವರ ಮಿತ್ರಮಂಡಲಿಯಲ್ಲಿ ಸ್ಥಾನಪಡೆದಿದ್ದ ನಾಡಿಗರು ಅಡಿಗರಂತೆಯೇ ಪ್ರಾಮಾಣಿಕತೆಗೆ, ಬಿಚ್ಚುಮಾತಿಗೆ ಹೆಸರಾಗಿದ್ದರು. ಆ ಕಾರಣದಿಂದಲೇ ವಿವಾದಗಳನ್ನೂ ಮೈಮೇಲೆ ಎಳೆದುಕೊಳ್ಳುತ್ತಿದ್ದರು. ಕುವೆಂಪು ಬಗ್ಗೆ ಅಪಾರ ಗೌರವ ಹೊಂದಿದ್ದೂ, ‘ಅವರು ಬರೆದುದೆಲ್ಲವೂ ಅತ್ಯುತ್ತಮವಾದುದಲ್ಲ’ ಎಂದು ಹೇಳಬಲ್ಲವರಾಗಿದ್ದರು.

ಬಾಲನೆರೆಯ ಕಾರಣದಿಂದಲೋ ಏನೋ ತಮ್ಮ ಓರಗೆಯ ಕವಿಗಳಿಗಿಂತ ಹಿರಿಯರಂತೆ ಕಾಣುತ್ತಿದ್ದ ಅವರು, ಮಾನಸಿಕವಾಗಿ ಹದಿನಾರರ ಹುಮ್ಮಸ್ಸು ಉಳಿಸಿಕೊಂಡಿದ್ದರು. ಅನಂತಮೂರ್ತಿ, ಲಂಕೇಶ್, ನಿಸಾರ್‌, ಎ.ಕೆ. ರಾಮಾನುಜನ್ ಸೇರಿದಂತೆ ತಮ್ಮ ಸಮಕಾಲೀನ ಕವಿಗಳೊಂದಿಗೆ ಸಲಿಗೆಯ ಸ್ನೇಹ ಹೊಂದಿದ್ದ ಅವರು, ಕನ್ನಡ ಲೇಖಕರ ಕುರಿತಂತೆ ಹಲವು ಕಥೆ–ದಂತಕಥೆಗಳ ಅಕ್ಷಯಪಾತ್ರೆಯಾಗಿದ್ದರು. ಬೆಂಗಳೂರಿನ ಗಾಂಧಿಬಜಾರಿನಲ್ಲಿ ನಾಡಿಗರು ಕೆಲವು ಕಾಲ ಪುಸ್ತಕದಂಗಡಿ ನಡೆಸಿದ್ದರು. ಆ ಮಳಿಗೆ ಪುಸ್ತಕ ಮಾರಾಟಕ್ಕೂ ಮಿಗಿಲಾಗಿ ಸಾಹಿತಿಗಳ ಚರ್ಚೆಗೆ ವೇದಿಕೆಯಾಗಿ ಪರಿಣಮಿಸಿದ್ದು ಗಾಂಧಿಬಜಾರಿನ ಸಾಂಸ್ಕೃತಿಕ ಚರಿತ್ರೆಯ ಭಾಗವಾಗಿದೆ.

ಅನುವಾದ ಕ್ಷೇತ್ರದಲ್ಲೂ ನಾಡಿಗರ ಸಾಧನೆ ದೊಡ್ಡದು. ಅಡಿಗರ ಕಾವ್ಯವನ್ನು ಇಂಗ್ಲಿಷ್‌ ಅನುವಾದಿಸಿದ ಖ್ಯಾತಿಯ ಅವರು, ವೀರಪ್ಪ ಮೊಯಿಲಿ ಅವರ ಗದ್ಯವನ್ನೂ ಅನುವಾದಿಸಿದ್ದರು. ಇದೆಲ್ಲಕ್ಕೂ ಮಿಗಿಲಾದುದು ಕನ್ನಡದ ಮಕ್ಕಳ ಕುರಿತ ಕಾಳಜಿ. ದಾಂಪತ್ಯದ ಬಗ್ಗೆ ಬರೆದಷ್ಟೇ ಉತ್ಸಾಹದಿಂದ ‘ಡಕ್ಕಣಕ್ಕ ಡಕ್ಕಣಕ್ಕ’ ಎಂದು ಚಿಣ್ಣರಿಗೆ ಬರೆದದ್ದು ಲೇಖಕರಾಗಿ ಅವರಿಗಿದ್ದ ಬದ್ಧತೆಗೆ ಉದಾಹರಣೆಯಂತಿತ್ತು.

ನಾಡಿಗರು ಇನ್ನಿಲ್ಲ. ಕಲ್ಲು ಕರಗುವ ಸಮಯದಲ್ಲಿ ಗೆಳೆಯರಿಗೆ ಫೋನ್‌ ಮಾಡಿ ಕವಿ–ಕಾವ್ಯದ ಬಗ್ಗೆ ಹರಟುತ್ತಿದ್ದ ಹಿರೀಕ ಇನ್ನಿಲ್ಲ. ಕವಿಯಾಗಿ, ಕಾವ್ಯಪ್ರೇಮಿಯಾಗಿ, ಅನುವಾದಕರಾಗಿ ನಾಡಿಗರ ಬರವಣಿಗೆಯ ಬೀಸು ಬಹುದೊಡ್ಡದು. ಆದರೆ, ಅವರ ಸಾಹಿತ್ಯಕ್ಕಿಂತಲೂ ಬಲಪಂಥೀಯ ನಿಲುವುಗಳು ಹೆಚ್ಚು ವಿಮರ್ಶೆಗೊಳಗಾಗಿರುವುದು ಕನ್ನಡ ಸಾಹಿತ್ಯ ವಸ್ತುನಿಷ್ಠವಾಗಿರುವುದರ ಬದಲು ವ್ಯಕ್ತಿನಿಷ್ಠವಾಗಿರುವುದನ್ನು ಸೂಚಿಸುವಂತಿದೆಯೇ?

ನಾಡಿಗರ ಪ್ರಮುಖ ಕೃತಿಗಳು

ಕವನಸಂಕಲನಗಳು: ಪಂಚಭೂತಗಳು, ನಟರಾಜ ಕಂಡ ಕಾಮನಬಿಲ್ಲು, ಕುಹೂ ಗೀತ, ತಮಾಷೆ ಪದ್ಯಗಳು, ಕಪ್ಪುದೇವತೆ, ಪ್ರೇಮಕುಮಾರಿಯ ಜಾತಕ.

ಕಥಾಸಂಕಲನಗಳು: ಗಿಳಿ ಮತ್ತು ದುಂಬಿ, ಕಾರ್ಕೋಟಕ, ಸ್ಥಿತಪ್ರಜ್ಞ.

ಮಕ್ಕಳ ಸಾಹಿತ್ಯ: ಡಕ್ಕಣಕ್ಕ ಡಕ್ಕಣಕ್ಕ, ಗೂಬೆಯ ಕಥೆ, ಇಲಿ ಮದುವೆ, ಗಾಳಿಪಟ.

ವಿಮರ್ಶೆ: ಅಡಿಗರು ಮತ್ತು ನವ್ಯಕಾವ್ಯ, ಮೌನದಾಚೆಯ ಮಾತು, ಮತ್ತೊಂದು ಸಾಹಿತ್ಯ ಚರಿತ್ರೆ, ವಿಮರ್ಶೆಯ ದಾರಿಯಲ್ಲಿ, ಇನ್ನೊಂದು ಸಾಹಿತ್ಯ ಚರಿತ್ರೆ.

ಅನುವಾದ: ಸೆಲೆಕ್ಟೆಡ್ ಪೊಯೆಮ್ಸ್ ಆಫ್ ಗೋಪಾಕೃಷ್ಣ ಅಡಿಗ (ಇಂಗ್ಲಿಷ್‌), ಬೊಕ್ಕತಲೆಯ ರಾಜಕುಮಾರಿ.

ಪುರಸ್ಕಾರ: ರಾಜ್ಯೋತ್ಸವ ಪ್ರಶಸ್ತಿ, ಜಿ.ಪಿ. ರಾಜರತ್ನಂ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ.

ಸುಮತೀಂದ್ರ ನಾಡಿಗ್‌ ನಿಧನ

ಬೆಂಗಳೂರು: ಹಿರಿಯ ಕವಿ ಸುಮತೀಂದ್ರ ನಾಡಿಗ್ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರಿಯರು ಮತ್ತು ಮಗನನ್ನು ನಾಡಿಗ್ ಅಗಲಿದ್ದಾರೆ.

ಉಸಿರಾಟದ ತೊಂದರೆಯಿಂದ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮಧ್ಯಾಹ್ನವೇ ಅವರ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT