ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಪರೀಕ್ಷಾ ಅಕ್ರಮ: ಹೆಚ್ಚಿನ ತನಿಖೆಗೆ ಎಸ್‌ಐಟಿ ರಚಿಸಲು ಸರ್ಕಾರ ತೀರ್ಮಾನ

ಸಂಪುಟ ಸಭೆಯಲ್ಲಿ ತೀರ್ಮಾನ
Published 14 ಮಾರ್ಚ್ 2024, 16:17 IST
Last Updated 14 ಮಾರ್ಚ್ 2024, 16:17 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ನೇಮಕಾತಿ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ನ್ಯಾ.ಬಿ.ವೀರಪ್ಪ ಆಯೋಗದ ವರದಿಯ ಶಿಫಾರಸಿನ ಅನ್ವಯ ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸರ್ಕಾರ ತೀರ್ಮಾನಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು  ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.‘ಎಸ್‌ಐಟಿಗೆ ಹೆಚ್ಚಿನ ಅಧಿಕಾರ ಇರುತ್ತದೆ. ಇನ್ನು ಆಳವಾದ ತನಿಖೆ ನಡೆಸಲು ಸಾಧ್ಯವಾಗುತ್ತದೆ’ ಎಂದು ಅವರು ಹೇಳಿದರು.

ಪರೀಕ್ಷಾ ಅಕ್ರಮದಲ್ಲಿ ಮಧ್ಯವರ್ತಿಗಳು, ಸರ್ಕಾರದ ಅಧಿಕಾರಿಗಳೂ ಸೇರಿ 113 ಜನ ಇದ್ದಾರೆ ಎಂದು ಸಮಿತಿ ಗುರುತಿಸಿದೆ. ಕೆಲವರಿಗೆ ಸಮನ್ಸ್‌ ನೀಡಲಾಗಿದೆ. ಆದರೆ, ಅವರು ಬಂದು ಮಾಹಿತಿ ನೀಡಿಲ್ಲ. ಅವರನ್ನು ಕರೆಸಿ ವಿಚಾರಣೆ ಮಾಡಲು ಆಯೋಗಕ್ಕೂ ಅಧಿಕಾರ ಇಲ್ಲ. ಇಂತಹವರಿಂದ ಮಾಹಿತಿ ಪಡೆಯಲು ಎಸ್‌ಐಟಿಯೇ ಸೂಕ್ತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಕೂಡ ತನಿಖೆ ನಡೆಸುತ್ತಿದೆ. ಅದನ್ನು ನಿಲ್ಲಿಸಲು ಆಗುವುದಿಲ್ಲ ಎಂದರು.

17 ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಖಾಸಗಿ ವ್ಯಕ್ತಿಗಳ ತನಿಖೆಗೆ ಎಸ್‌ಐಟಿ ಸೂಕ್ತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಅವರು ತಿಳಿಸಿದರು.

ಆಸ್ಪತ್ರೆಗಳ ಮೇಲ್ದರ್ಜೆಗೆ ₹132 ಕೋಟಿ:

*ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ₹38.84 ಕೋಟಿ ವೆಚ್ಚದಲ್ಲಿ ಆಧುನಿಕ ಉಪಕರಣಗಳನ್ನು ಒದಗಿಸಿ, ಮೇಲ್ದರ್ಜೆಗೇರಿಸಲು ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ ಏಳು ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕಾಗಿ ₹132 ಕೋಟಿ ನೀಡಲು ಒಪ್ಪಿಗೆ

*ದಕ್ಷಿಣ ಕನ್ನಡ ಕಡಬದಲ್ಲಿರುವ ಪಶುಸಂಗೋಪನೆ ಕಾಲೇಜಿಗೆ ಗ್ರಂಥಾಲಯ, ಸಿಬ್ಬಂದಿ ವಸತಿ ನಿಲಯ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್‌ಗಾಗಿ ₹163 ಕೋಟಿ, ಅಥಣಿ ಕಾಲೇಜಿನಲ್ಲಿ ಬಾಕಿ ಉಳಿದಿರುವ ಹಾಸ್ಟೆಲ್‌ ಕೆಲಸಕ್ಕೆ ₹82.55 ಕೋಟಿಗೆ ಒಪ್ಪಿಗೆ.

*ಮೈಸೂರಿನ ಮಹಾರಾಣಿ ಕಲಾ, ವಿಜ್ಞಾನ ಕಾಲೇಜು ಇದ್ದು, ಹೊಸ ಹಾಸ್ಟೆಲ್‌ ನಿರ್ಮಿಸಲು ₹170 ಕೋಟಿ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

*ಕೃಷಿ ನವೋದ್ಯಮ– ಬಯೋಟೆಕ್‌ ಕಂಪನಿಗೆ ಪ್ರೋತ್ಸಾಹಿಸಲು ಬೆಂಗಳೂರಿನಲ್ಲಿ ಅಗ್ರಿ ಇನ್ನೋವೇಷನ್ ಕೇಂದ್ರ ಸ್ಥಾಪಿಸಲಾಗುವುದು. ಇದಕ್ಕೆ ₹67.5 ಕೋಟಿ ನೀಡಲಾಗುವುದು. 

* ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಎಂದು ಮರು ನಾಮಕರಣ ಮಾಡಲು ಸಮ್ಮತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT