ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜು ಕರಗಿಸದ ಪೊಲೀಸರ ಎತ್ತಂಗಡಿ

ರಾಜ್ಯದ ಪೊಲೀಸ್‌ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ಜಾರಿ
Published 4 ಮೇ 2024, 0:57 IST
Last Updated 4 ಮೇ 2024, 0:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪೊಲೀಸ್‌ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೊಜ್ಜು ಕರಗಿಸದ ಕಾರಣಕ್ಕೆ ದಿಢೀರ್ ಎತ್ತಂಗಡಿ ಮಾಡಲಾಗಿದೆ. 

ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌) ಪ್ರಮಾಣ ಶೇ 29ಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಒಂದು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಮತ್ತೊಂದು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ.

ಕಲಬುರಗಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯ, ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ, ಕಡೂರು, ಐಮಂಗಲ, ಖಾನಾಪುರ, ಮೈಸೂರು, ಬೆಂಗಳೂರು, ಧಾರವಾಡ, ಥಣಿಸಂದ್ರ, ಯಲಹಂಕ, ಹಾಸನದ ಪೊಲೀಸ್‌ ತರಬೇತಿ ಶಾಲೆಗಳ ಪ್ರಾಂಶುಪಾಲರು, ತರಬೇತಿ ಅಧಿಕಾರಿಗಳು ಹಾಗೂ ಇತರೆ ಪೊಲೀಸ್‌ ಸಿಬ್ಬಂದಿಯನ್ನು ಪರಸ್ಪರ ವರ್ಗಾವಣೆ ಮಾಡಲಾಗಿದೆ.

ಪೊಲೀಸ್‌ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಕುಮಾರ್ ಅಧ್ಯಕ್ಷತೆಯಲ್ಲಿ ಏ.30ರಂದು ನಡೆದ ಸಭೆಯ ನಿರ್ಧಾರದಂತೆ ಮೇ 2ರಂದು ಸಿಬ್ಬಂದಿ ಎತ್ತಂಗಡಿಗೆ ಲಿಖಿತ ನಿರ್ದೇಶನ ನೀಡಲಾಗಿದೆ. ನಿಯೋಜಿಸಿದ ಮತ್ತೊಂದು ತರಬೇತಿ ಕೇಂದ್ರದಲ್ಲಿ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ದೇಹದ ತೂಕ ಹಾಗೂ ಸ್ಥೂಲಕಾಯ ಕಡಿಮೆ ಮಾಡಿಕೊಂಡ ಪ್ರಮಾಣಪತ್ರ ಒದಗಿಸಿದ ನಂತರ ಮರಳಿ ಮೂಲ ಸ್ಥಳಕ್ಕೆ ಹಾಜರಾಗಲು ಈ ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿದೆ.

‘ಬಿಎಂಐ ಪ್ರಮಾಣ ತಗ್ಗಿಸುವುದು ಆರೋಗ್ಯಕ್ಕೆ ಒಳ್ಳೆಯದೇ ಆದರೂ ದಿಢೀರ್‌ ಇಳಿಕೆ ಮಾಡುವುದು ಜೀವಕ್ಕೆ ಅಪಾಯ. ಸ್ಥೂಲಕಾಯ ಎನ್ನುವುದು ಜೀವನಶೈಲಿಯ ಬದಲಾವಣೆ, ಆಹಾರ ಸೇವನೆಯ ಹವ್ಯಾಸದಿಂದಷ್ಟೇ ಬರುವುದಿಲ್ಲ. ಅನುವಂಶಿಕವಾಗಿಯೂ ಬರುತ್ತದೆ. ಸದಾ ಕೆಲಸದ ಒತ್ತಡ, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದ, ಆಹಾರ ಸೇವಿಸದ  ಪೊಲೀಸರಲ್ಲಿ ಬಿಎಂಐ ಪ್ರಮಾಣ ಏರಿಳಿತ ಸಹಜವಾಗಿರುತ್ತದೆ. ಇಂತಹ ವಿಷಯಗಳಲ್ಲಿ ಮಾರ್ಗದರ್ಶನ ನೀಡಲು ವೈದ್ಯರನ್ನು ನೇಮಕ ಮಾಡಬೇಕು. ಅವರ ಸೂಚನೆಯಂತೆ ಕಡಿಮೆ ಮಾಡಿಕೊಳ್ಳಲು ಸಹಕಾರ ನೀಡಬೇಕು. ಅದು ಬಿಟ್ಟು ದಿಢೀರ್ ವರ್ಗಾವಣೆ ಶಿಕ್ಷೆ ನೀಡಿದರೆ ಓದುವ ಮಕ್ಕಳು, ಸಂಸಾರ ಬಿಟ್ಟು ಹೇಗೆ ದೂರದ ಊರಿಗೆ ಹೋಗಬೇಕು’ ಎನ್ನುತ್ತಾರೆ ತರಬೇತಿ ಕೇಂದ್ರವೊಂದರ ಹೆಸರು ಹೇಳಲು ಇಚ್ಛಿಸದ ಮಹಿಳಾ ಸಿಬ್ಬಂದಿ. 

‘ಪೊಲೀಸ್‌ ನಿಯಮಗಳು ಎಲ್ಲಾ ಪೊಲೀಸರಿಗೂ ಅನ್ವಯವಾಗಬೇಕು. ಆದರೆ, ತರಬೇತಿ ಕೇಂದ್ರಗಳ ಅದಿಕಾರಿಗಳು, ಸಿಬ್ಬಂದಿಗಷ್ಟೇ ಇಂತಹ ನಿಯಮ ಜಾರಿ ಏಕೆ? ಶೇ 70ಕ್ಕಿಂತ ಹೆಚ್ಚು ಪೊಲೀಸರಲ್ಲಿ ಬಿಐಎಂ ಪ್ರಮಾಣ 30ಕ್ಕಿಂತ ಹೆಚ್ಚಿದೆ. ಐಪಿಎಸ್‌ ಅಧಿಕಾರಿಗಳೂ  ಇದ್ದಾರೆ. ಚುನಾವಣಾ ಕೆಲಸದಲ್ಲಿರುವಾಗಲೇ ಇಂತಹ ಸೂಚನೆ ಬೇಸರ ತರಿಸಿದೆ’ ಎನ್ನುತ್ತಾರೆ ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ.

ಪೊಲೀಸ್ ಸಿಬ್ಬಂದಿಯಲ್ಲಿ ಆರೋಗ್ಯಕರ ಜೀವನಶೈಲಿ ಪ್ರೋತ್ಸಾಹಿಸಲು ಇಂತಹ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಠಾಣೆಯಲ್ಲೂ ಯೋಗ ತಜ್ಞರಿಂದ ತರಬೇತಿ ಕೊಡಿಸಲು ಸೂಚಿಸಲಾಗಿದೆ
ಅಲೋಕ್‌ಕುಮಾರ್, ಎಡಿಜಿಪಿ, ಪೊಲೀಸ್‌ ತರಬೇತಿ

ಏನಿದು ಸ್ಥೂಲಕಾಯ? 

ಮನುಷ್ಯನ ದೇಹದಲ್ಲಿ ಸಾಮಾನ್ಯ ಎನಿಸುವುದಕ್ಕಿಂತ ಹೆಚ್ಚಿನ ಹಾಗೂ ಅತಿಯಾದ ಕೊಬ್ಬು ಸಂಗ್ರಹವಾಗಿ ದೇಹ ದಪ್ಪಗಾಗುವುದೇ ಸ್ಥೂಲಕಾಯ.

ಬದಲಾದ ಜೀವನ ಶೈಲಿ, ಆನುವಂಶೀಯತೆ, ಶಾರೀರಿಕ ಸಮಸ್ಯೆ, ಅತಿಯಾದ ಮಾತ್ರೆ, ಔಷಧಗಳ ಸೇವನೆ, ಧೂಮಪಾನ ಮತ್ತಿತರ ಕಾರಣಗಳಿಂದ ತೂಕ ಹೆಚ್ಚುತ್ತದೆ. ಇದರಿಂದ ಹೃದಯರೋಗ, ರಕ್ತದೊತ್ತಡ, ಮಧುಮೇಹ, ನಿದ್ರಾಹೀನತೆ, ಕ್ಯಾನ್ಸರ್‌ ಬರುತ್ತದೆ.

ಪೊಲೀಸರು ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು, ಆರೋಗ್ಯವಾಗಿರಬೇಕು ಎನ್ನುವ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಸರ್ಕಾರ ಬೊಜ್ಜು ಕರಗಿಸುವುದನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT