ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಗಾರುಪೂರ್ವ ಸಮೀಕ್ಷೆ: ರಾಜ್ಯದ ಅಣೆಕಟ್ಟೆಗಳು ಸುರಕ್ಷಿತ

ಮುಂಗಾರುಪೂರ್ವದಲ್ಲಿ ಅಣೆಕಟ್ಟೆಗಳ ಸಮೀಕ್ಷೆ
Published 23 ಜುಲೈ 2023, 0:30 IST
Last Updated 23 ಜುಲೈ 2023, 0:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ 100 ವರ್ಷಕ್ಕಿಂತ ಹಳೆಯ 15 ಅಣೆಕಟ್ಟೆಗಳಿವೆ. 50 ವರ್ಷದಿಂದ 100 ವರ್ಷಗಳ ನಡುವಿನ 72 ಅಣೆಕಟ್ಟೆಗಳಿವೆ. ಇವುಗಳು ಸೇರಿದಂತೆ ರಾಜ್ಯದ ಎಲ್ಲ ಅಣೆಕಟ್ಟೆಗಳು ಸುರಕ್ಷಿತವಾಗಿವೆ ಎಂದು ಜಲಶಕ್ತಿ ಸಚಿವಾಲಯದ ತಜ್ಞರ ತಂಡದ ಅಧ್ಯಯನದಿಂದ ಗೊತ್ತಾಗಿದೆ. 

ಅಣೆಕಟ್ಟೆಗಳ ವೈಫಲ್ಯ ತಡೆಗಟ್ಟಲು ದೇಶದ ಎಲ್ಲ ಅಣೆಕಟ್ಟೆಗಳ ಕಣ್ಗಾವಲು, ತಪಾಸಣೆ, ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ‘ಅಣೆಕಟ್ಟೆ ಸುರಕ್ಷತಾ ಕಾಯ್ದೆ–2021’ ಜಾರಿಗೆ ತಂದಿದೆ. ಅವುಗಳ ಸುರಕ್ಷಿತ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಲು ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರು ನಂತರದಲ್ಲಿ ತಪಾಸಣೆ ನಡೆಸಲಾಗುತ್ತದೆ. ನಿಯಮಿತ ‍ತಪಾಸಣೆಯ ಆಧಾರದಲ್ಲಿ ಅವುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಮೊದಲ ವರ್ಗದ ಅಣೆಕಟ್ಟೆಗಳು ಅಪಾಯಕಾರಿ. ತ್ವರಿತ ಪರಿಹಾರ ಕ್ರಮಗಳು ಅಗತ್ಯವಿರುವ ಅಣೆಕಟ್ಟೆಗಳನ್ನು ಎರಡನೇ ವರ್ಗದವು ಎಂದು ವಿಂಗಡಿಸಲಾಗಿದೆ. ಮೂರನೇ ವರ್ಗದವು ಸುರಕ್ಷಿತ.

2023–24ನೇ ಆರ್ಥಿಕ ವರ್ಷದಲ್ಲಿ ಸಚಿವಾಲಯದ ತಜ್ಞರ ತಂಡವು ಮುಂಗಾರು ಪೂರ್ವದಲ್ಲಿ (ಜುಲೈ 11ರ ವರೆಗೆ) ಅಣೆಕಟ್ಟೆಗಳ ತಪಾಸಣೆ ನಡೆಸಿದೆ. ನಾಲ್ಕು ಅಣೆಕಟ್ಟೆಗಳು ಅಪಾಯಕಾರಿ ಎಂದು ಗೊತ್ತಾಗಿದೆ. ಒಡಿಶಾದ ಎರಡು ಹಾಗೂ ಉತ್ತರ ಪ್ರದೇಶದ ಎರಡು ಈ ಪಟ್ಟಿಯಲ್ಲಿವೆ. ಎರಡನೇ ವರ್ಗದಲ್ಲಿ 169 ಜಲಾಶಯಗಳಿವೆ. ಈ ಪಟ್ಟಿಯಲ್ಲಿ, ಕರ್ನಾಟಕದ ಅಣೆಕಟ್ಟೆಗಳು ಇಲ್ಲ. ಇದರಲ್ಲಿ ಉತ್ತರ ಪ್ರದೇಶದ 16, ಒಡಿಶಾದ 29, ತೆಲಂಗಾಣದ 15, ಬಿಹಾರ ಹಾಗೂ ಹರಿಯಾಣದ ತಲಾ 1, ಪಂಜಾಬ್‌ನ 3, ಉತ್ತರಾಖಂಡ ಹಾಗೂ ಛತ್ತೀಸಗಢದ ತಲಾ 4, ಜಾರ್ಖಂಡ್‌ನ 12, ತಮಿಳುನಾಡಿನ 19, ಪಶ್ಚಿಮ ಬಂಗಾಳದ 5, ಮಧ್ಯಪ್ರದೇಶದ 41, ಕೇರಳದ 17 ಅಣೆಕಟ್ಟೆಗಳಿವೆ. ಇವುಗಳ ನಿರಂತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಲಸಂಪನ್ಮೂಲ ಇಲಾಖೆಗಳು ಹಾಗೂ ರಾಜ್ಯ ಅಣೆಕಟ್ಟೆ ಸುರಕ್ಷತಾ ಸಂಸ್ಥೆಗಳಿಗೆ ಜಲಶಕ್ತಿ ಸಚಿವಾಲಯ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT