ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 100 ಫಲಿತಾಂಶಕ್ಕಾಗಿ ಮುಚ್ಚಳಿಕೆ ಪತ್ರ

ಉಪ ನಿರ್ದೇಶಕ‌ರ ಕ್ರಮಕ್ಕೆ ಪಿಯು ಪ್ರಾಂಶುಪಾಲರು, ಉಪನ್ಯಾಸಕರ ವಿರೋಧ
Published 3 ಜನವರಿ 2024, 23:48 IST
Last Updated 3 ಜನವರಿ 2024, 23:48 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಸಕ್ತ ವರ್ಷದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ನೀಡುತ್ತೇವೆ. ಕಳಪೆ ಫಲಿತಾಂಶ ಬಂದರೆ ಶಿಸ್ತುಕ್ರಮಕ್ಕೆ ಬದ್ಧರಾಗಿರುತ್ತೇವೆ’.

–ಇದು ಪಿಯು ಕಾಲೇಜುಗಳ ಪ್ರಾಂಶುಪಾಲರು ಮತ್ತು ವಿಷಯವಾರು ಉಪನ್ಯಾಸಕರಿಂದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಬರೆಸಿಕೊಳ್ಳುತ್ತಿರುವ ಲಿಖಿತ ಮುಚ್ಚಳಿಕೆ ವಿಧಾನ.

ಜಿಲ್ಲಾವಾರು ಫಲಿತಾಂಶದಲ್ಲಿ ತಮ್ಮದೇ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯಬೇಕು. ಎಲ್ಲ ಕಾಲೇಜುಗಳು ಶೇ 100ರಷ್ಟು ಫಲಿತಾಂಶ ದಾಖಲಿಸಬೇಕು ಎಂಬ ಕಾರಣಕ್ಕೆ ಕೆಲ ಉಪ ನಿರ್ದೇಶಕರು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಈ ನಡೆಗೆ ಉಪನ್ಯಾಸಕರ ವಲಯ ಹಾಗೂ ಉಪನ್ಯಾಸಕರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ಪ್ರಾಂಶುಪಾಲರು ಹಾಗೂ ವಿಷಯವಾರು ಉಪನ್ಯಾಸಕರಿಂದ ಪ್ರತ್ಯೇಕ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತಿದೆ. ‘2023–24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ನೀಡುತ್ತೇವೆ. ಒಂದು ವೇಳೆ ಕಳಪೆ ಫಲಿತಾಂಶ ಬಂದರೆ ಶಿಸ್ತುಕ್ರಮಕ್ಕೆ ಒಳಗಾಗುತ್ತೇವೆ. ಅಲ್ಲದೇ, ವಿಷಯ ಉಪನ್ಯಾಸಕರಿಂದ ಪ್ರಮಾಣೀಕೃತ ಲಿಖಿತ ಹೇಳಿಕೆ ದಾಖಲಿಸಿಕೊಳ್ಳುತ್ತೇವೆ’ ಎಂದು ಪ್ರಾಂಶುಪಾಲರಿಗೆ, ’ತಮ್ಮ ವಿಷಯಗಳಲ್ಲಿ ಕಾಲೇಜಿನ ಪ್ರತಿ ವಿದ್ಯಾರ್ಥಿಯೂ ಉತ್ತೀರ್ಣರಾಗುವಂತೆ ಕ್ರಮ ವಹಿಸುತ್ತೇವೆ. ಶೇ 100ರಷ್ಟು ಫಲಿತಾಂಶ ನೀಡುತ್ತೇವೆ. ವಿಫಲರಾದರೆ ಶಿಸ್ತುಕ್ರಮಕ್ಕೆ ಒಳಗಾಗುತ್ತೇವೆ’ ಎಂದು ಬರೆದುಕೊಡಲು ಉಪನ್ಯಾಸಕರಿಗೆ ಸೂಚಿಸಲಾಗಿದೆ. 

ಮುಚ್ಚಳಿಕೆ ಪತ್ರವನ್ನೂ ಉಪ ನಿರ್ದೇಶಕರ ಕಚೇರಿಯಿಂದಲೇ ಮುದ್ರಿಸಿ, ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ರವಾನಿಸಲಾಗಿದೆ. ಕೆಲ ಕಾಲೇಜುಗಳು ಈಗಾಗಲೇ ಮುಚ್ಚಳಿಕೆ ಪತ್ರ ಬರೆದು ಕೊಟ್ಟಿದ್ದಾರೆ. ಹಲವರು ವಿರೋಧಿಸಿದ್ದಾರೆ.

2021–22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 61.88 ಫಲಿತಾಂಶ ಬಂದಿತ್ತು. ಫಲಿತಾಂಶ ಸುಧಾರಣೆಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಇದರ ಫಲವಾಗಿ 2022-23ನೇ ಸಾಲಿನ ಫಲಿತಾಂಶ ಶೇ 74.67ಕ್ಕೆ ಏರಿಕೆಯಾಗಿತ್ತು. ಜಿಲ್ಲಾವಾರು ಫಲಿತಾಂಶದಲ್ಲಿ ಹಲವು ಜಿಲ್ಲೆಗಳು ಅಚ್ಚರಿಯ ಫಲಿತಾಂಶ ನೀಡಿದ್ದವು. ಈ ಬಾರಿ ತಮ್ಮ ಜಿಲ್ಲೆ ಮೊದಲ ಸ್ಥಾನ ಪಡೆಯಬೇಕು ಎಂಬ ಧೋರಣೆಗಳೇ ಇಂತಹ ನಿರ್ಧಾರಗಳಿಗೆ ದಾರಿ ಮಾಡಿಕೊಡುತ್ತಿವೆ ಎನ್ನುತ್ತಾರೆ ಪಿಯು ಕಾಲೇಜು ಉಪನ್ಯಾಸಕರು.

‘ರಾಜ್ಯದ ಪದವಿಪೂರ್ವ ಶಿಕ್ಷಣ ಗುಣಮಟ್ಟದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಉಪನ್ಯಾಸಕರ ಶ್ರಮವೇ ಕಾರಣ. ಆದರೆ, ಒಂದು ಕಾಲೇಜಿಗೂ ಮತ್ತೊಂದಕ್ಕೂ, ಒಂದು ಭಾಗದ ವಿದ್ಯಾರ್ಥಿಗಳಿಗೂ ಮತ್ತೊಂದು ಭಾಗಕ್ಕೂ ಸಾಕಷ್ಟು ಭಿನ್ನತೆ ಇರುತ್ತದೆ. ಶೇ 100ರಷ್ಟು ಫಲಿತಾಂಶ ಕಡ್ಡಾಯವಾಗಿ ಹೇರುವುದು ಅನೈತಿಕ ಪೈಪೋಟಿಗೆ ದಾರಿ ಮಾಡಿಕೊಡುತ್ತದೆ’ ಎನ್ನುತ್ತಾರೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್.

‘ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡ ಕಡಿಮೆ ಮಾಡಲು ದ್ವಿತೀಯ ಪಿಯುಗೆ ಈಗಾಗಲೇ ಮೂರು ವಾರ್ಷಿಕ ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಆದರೂ, ಶೇ 100ರಷ್ಟು ಫಲಿತಾಂಶ ಪಡೆಯಬೇಕು ಎನ್ನುವ ಕ್ರಮ ಮೂರು ಪರೀಕ್ಷೆ ಪರಿಚಿಸಿದ ಆಶಯಕ್ಕೆ ವಿರುದ್ಧವಾಗಿದೆ ಎನ್ನುತ್ತಾರೆ’ ಉಪನ್ಯಾಸಕ ರವಿಕುಮಾರ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT