ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲ ನ್ಯಾಯಮಂಡಳಿಗೆ ನೇಮಕಕ್ಕೆ ತಡೆ

Published : 17 ಸೆಪ್ಟೆಂಬರ್ 2024, 23:51 IST
Last Updated : 17 ಸೆಪ್ಟೆಂಬರ್ 2024, 23:51 IST
ಫಾಲೋ ಮಾಡಿ
Comments

ಚಿತ್ರದುರ್ಗ: ಬಾಲ ನ್ಯಾಯ ಮಂಡಳಿ (ಜೆಜೆಬಿ) ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯಲ್ಲಿ ಗಂಭೀರ ಲೋಪವಾಗಿರುವ ಆರೋಪ ಕೇಳಿಬಂದಿದ್ದು, ಆಯ್ಕೆ ಪಟ್ಟಿ ಪ್ರಕಟಿಸಿದ ಮೂರೇ ದಿನದಲ್ಲಿ ಸರ್ಕಾರ ಈ ಕುರಿತ ಅಧಿಸೂಚನೆಗೆ ತಡೆ ನೀಡಿದೆ.

ಸೆ.9ರಂದು ಸರ್ಕಾರ ಪ್ರಕಟಿಸಿದ್ದ ಆಯ್ಕೆ ಪಟ್ಟಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪತಿ–ಪತ್ನಿ ಸೇರಿ ಕುಟುಂಬ ಸದಸ್ಯರು, ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡದೇ ಇರುವವರನ್ನು, ಅರ್ಜಿಯನ್ನೇ ಹಾಕದವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಸಮಿತಿ ಹಾಗೂ ಮಂಡಳಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಸದಸ್ಯರೇ ಹೆಚ್ಚು ಮಂದಿ ಸ್ಥಾನ ಪಡೆದಿದ್ದಾರೆ ಎಂದುಆರೋಪಿಸಲಾಗಿತ್ತು.

ಈ ಬಗ್ಗೆ ಜಾಲತಾಣದಲ್ಲೂ ಆಕ್ಷೇಪ,ಚರ್ಚೆ ನಡೆದಿದ್ದವು. ಎಚ್ಚೆತ್ತುಕೊಂಡ ಸರ್ಕಾರ, ಸೆ.12ರಂದು ‘ಗಂಭೀರ ಸ್ವರೂಪದ ದೂರುಗಳು ಸ್ವೀಕೃತವಾದ ಕಾರಣ ಆಡಳಿತಾತ್ಮಕ ದೃಷ್ಟಿಯಿಂದ ಮುಂದಿನ ಆದೇಶದವರೆಗೂ ನೇಮಕಾತಿಗೆ ತಡೆ ನೀಡಲಾಗಿದೆ’ ಎಂದಿದೆ.

ಮಕ್ಕಳ ಪಾಲನೆ, ಪೋಷಣೆ, ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಕಾರ್ಯ ನಿರ್ವಹಿಸುತ್ತದೆ. ಒಬ್ಬರು ಅಧ್ಯಕ್ಷರು, ನಾಲ್ವರು ಸದಸ್ಯರು ಸಮಿತಿಯಲ್ಲಿ ಇರುತ್ತಾರೆ. ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳ ರಕ್ಷಣೆಗಾಗಿ ಬಾಲ ನ್ಯಾಯ ಮಂಡಳಿ ಕರ್ತವ್ಯ ನಿರ್ವಹಿಸಲಿದ್ದು ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ. ಮಂಡಳಿಗೆ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಎರಡೂ ಅರೆ ನ್ಯಾಯಿಕ ಸಂಸ್ಥೆಗಳಾಗಿದ್ದು ಮಕ್ಕಳ ಹಕ್ಕುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನೇ ಆಯ್ಕೆಮಾಡಲಾಗುತ್ತದೆ. ಸಮಾಜ ಸೇವೆ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ 7 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಬೇಕು ಎಂಬ ನಿಯಮಗಳಿವೆ. ಆದರೆ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರನ್ನು ಆಯ್ಕೆ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ.

6 ವರ್ಷದ ನಂತರ ನೇಮಕಾತಿ

ಬಾಲ ನ್ಯಾಯ ಕಾಯ್ದೆ ಅನುಸಾರ ಜೆಜೆಬಿ, ಸಿಡಬ್ಲ್ಯುಸಿ ಅಧ್ಯಕ್ಷ, ಸದಸ್ಯರ ಅವಧಿ 3 ವರ್ಷ ಇದೆ. ಆದರೆ ಹಿಂದಿನ ಎರಡೂ ಸರ್ಕಾರಗಳು ಒಂದೇ ಆಡಳಿತ ಮಂಡಳಿಯನ್ನು ‌2 ಬಾರಿ ಮುಂದೂಡಿದ್ದ ಕಾರಣ ಪದಾಧಿಕಾರಿಗಳ ಅಧಿಕಾರಾವಧಿ 6 ವರ್ಷ ಪೂರ್ಣಗೊಂಡು 7ನೇ ವರ್ಷಕ್ಕೆ ಕಾಲಿಟ್ಟಿತ್ತು.

‘6 ವರ್ಷಗಳ ನಂತರ ನಡೆದ ನೇಮಕಾತಿಯೂ ನಿಯಮಾನುಸಾರ ನಡೆಯದಿರುವುದು ದುರದೃಷ್ಟಕರ. ಎರಡೂ ಸಂಸ್ಥೆಗಳಿಗೂ ರಾಜಕೀಯ ಕಾರ್ಯಕರ್ತರನ್ನು ನೇಮಿಸಿ ಅಲ್ಲಿಯ ವಾತಾವರಣವನ್ನು

ಕಲುಷಿತಗೊಳಿಸಲಾಗಿದೆ’ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಭಾರತಿ ಆರೋಪಿಸಿದರು.

ದೂರುದಾರರ ಆಕ್ಷೇಪಗಳೇನು?

ಚಿತ್ರದುರ್ಗ ಜಿಲ್ಲೆಯಲ್ಲಿ ಸಿಡಬ್ಲ್ಯುಸಿಗೆ ಆಯ್ಕೆಯಾಗಿರುವ ಐವರೂ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಅಧ್ಯಕ್ಷೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆಯೂ ಆಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಪತಿ ಜೆಜೆಬಿಯಲ್ಲಿ ಸದಸ್ಯರಾಗಿದ್ದರೆ ಪತ್ನಿ ಸಿಡಬ್ಲ್ಯುಸಿ ಸದಸ್ಯೆಯಾಗಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮುಖಂಡರೊಬ್ಬರು ಬೆಂಗಳೂರು ಹಾಗೂ ರಾಮನಗರ ಎರಡೂ ಜಿಲ್ಲೆಗೆ ಅರ್ಜಿ ಸಲ್ಲಿಸಿ ಅಂತಿಮವಾಗಿ ರಾಮನಗರ ಸಿಡಬ್ಲ್ಯುಸಿ ಸದಸ್ಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಬಿಜೆಪಿ ಮುಖಂಡರೇ ಸಿಡಬ್ಲ್ಯುಸಿ ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಲಾಗಿದೆ. ನೇಮಕಾತಿ ಪಟ್ಟಿ ಪ್ರಕಟವಾಗುವ ಮೊದಲೇ ಕೆಲವರು ತಮ್ಮ ಆಯ್ಕೆ ಕುರಿತ ಮಾಹಿತಿ ಸೋರಿಕೆ ಮಾಡಿದ್ದಾರೆ. ಇದರ ವಿರುದ್ಧ ಹಲವರು ಮಕ್ಕಳ ರಕ್ಷಣಾ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ.

‘ಆಯ್ಕೆ ಸಮಿತಿ ಸದಸ್ಯರಾಗಿರುವ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿರುವ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಸರ್ಕಾರದ ಗಮನಕ್ಕೆ ತಾರದೆ ಇವರು ತಮಗೆ ಬೇಕಾದವರನ್ನು ಸಮಿತಿ, ಮಂಡಳಿಗೆ ನೇಮಿಸಿದ್ದಾರೆ. ಕೆಲವರಿಂದ ಹಣ ವಸೂಲಿ ಮಾಡಿದ ಮಾಹಿತಿಗಳೂ ಇವೆ’ ಎಂದು ಸಿಡಬ್ಲ್ಯುಸಿ ಮಾಜಿ ಅಧ್ಯಕ್ಷ ರವಿಕುಮಾರ್‌ ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯುಕ್ತ ಸಿದ್ದೇಶ್ವರ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಕೆ.ಹಲಿಮಾ ಅವರನ್ನು ಸಂಪರ್ಕಿಸಿದಾಗ ‘ವಿಷಯ ನನಗೆ ಗೊತ್ತಿಲ್ಲ’ ಎಂದು ಕರೆ ಸ್ಥಗಿತಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT