ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನದ ಪಿಯು ಪರೀಕ್ಷೆ ಸುಗಮ: ಇಬ್ಬರು ಡಿಬಾರ್, 23,771 ವಿದ್ಯಾರ್ಥಿಗಳು ಗೈರು

Last Updated 9 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಕನ್ನಡ ಭಾಷಾ ವಿಷಯದ ಪರೀಕ್ಷೆ ರಾಜ್ಯದ 1,109 ಕೇಂದ್ರಗಳಲ್ಲಿ ಗುರುವಾರ ಸುಗಮವಾಗಿ ನಡೆಯಿತು. ಮೊದಲ ದಿನವೇ 23,771 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ಶೇ 95.55ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಬೆಳಗಾವಿ, ಯಾದಗಿರಿಯಲ್ಲಿ ನಕಲು ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಹಾಲ್‌ಟಿಕೆಟ್‌ ಇದ್ದರೂ ಹಾಜರಾತಿ ಕೊರತೆಯಿಂದ ಪರೀಕ್ಷಾ ಮಂಡಳಿ ಒಎಂಆರ್‌ ಶೀಟ್‌ ಕಳುಹಿಸದೆ ಹೊಸಪೇಟೆಯಲ್ಲಿ ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ. ಇತರೆ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಲ್ಲದೆ ಬೆಳಿಗ್ಗೆ 10.15ಕ್ಕೆ ಆರಂಭವಾದ ಮೊದಲ ದಿನದ ಪರೀಕ್ಷೆ 1.30ಕ್ಕೆ ಸುಗಮವಾಗಿ ಮುಗಿದವು.

ಒಎಂಆರ್‌ ಶೀಟ್‌ ಇಲ್ಲದೇ ಪರೀಕ್ಷೆ ಬರೆಯಲು ಸಾಧ್ಯವಾಗದ ವಿಷಯವನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಗಮನಕ್ಕೆ ಅಧಿಕಾರಿಗಳು ತಂದಿದ್ದು, ಮರು ಪರೀಕ್ಷೆಗೆ ಅವಕಾಶ ನೀಡುವ ಭರವಸೆ ದೊರೆತಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ಬಂದು ಪರೀಕ್ಷೆ ಬರೆದರು. ಹಿಂದಿನ ವರ್ಷದಂತೆ ಹಿಜಾಬ್‌ಗೆ ಆಗ್ರಹಿಸಿ ಎಲ್ಲೂ ಪ್ರತಿಭಟನೆಗಳು ನಡೆದ ವರದಿಯಾಗಿಲ್ಲ.

ಪರೀಕ್ಷೆಗಳು ಸುಗಮವಾಗಿ ನಡೆಯಲು, ನಕಲು ತಡೆಯಲು ರಚಿಸಲಾಗಿದ್ದ 64 ಜಿಲ್ಲಾ ಜಾಗೃತ ದಳ ಸೇರಿದಂತೆ ಒಟ್ಟು 2,962 ಜಾಗೃತ ದಳಗಳು ಪರೀಕ್ಷಾ ಕೇಂದ್ರಗಳಿಗೆ ನಿರಂತರ ಭೇಟಿ ನೀಡಿ, ಅವಲೋಕನ ನಡೆಸಿದವು.

ಹಾಸಿಗೆ ಮೇಲೆ ಕುಳಿತು ಪರೀಕ್ಷೆ ಬರೆದ ಗಾಯಾಳು
ತಾವರಗೇರಾ (ಕೊಪ್ಪಳ ಜಿಲ್ಲೆ):
ಅಪಘಾತದಲ್ಲಿ ಎಡಗಾಲು ಮುರಿದುಕೊಂಡಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚಂದ್ರಶೇಖರ ಮೆಣದಾಳ ಗುರುವಾರ ತಾವರಗೇರಾ ಕೇಂದ್ರದಲ್ಲಿ ಹಾಸಿಗೆ ಮೇಲೆ ಕೂತುಕೊಂಡೆ ಕನ್ನಡ ವಿಷಯ ಪರೀಕ್ಷೆ ಬರೆದರು.

ತಾಲ್ಲೂಕಿನ ನಂದಾಪುರದ ಚಂದ್ರಶೇಖರಗೆ ಕಾಲು ಮಡಚಲು ಆಗುವುದಿಲ್ಲ. ಹೀಗಾಗಿ ಟಂಟಂ ವಾಹನದಲ್ಲಿ ಹಾಸಿಗೆ ಮತ್ತು ದಿಂಬು ಸಮೇತ ಕಾಲು ಚಾಚಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದರು. ಸಹಾಯಕರ ನೆರವಿನೊಂದಿಗೆ ಪರೀಕ್ಷಾ ಕೊಠಡಿಗೆ ತೆರಳಿ, ಅಲ್ಲಿ ಹಾಸಿಗೆ ಮೇಲೆ ಕೂತು ಪರೀಕ್ಷೆ ಬರೆದರು.

‘ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಮಹತ್ವದ ಘಟ್ಟ. ಅನಿರೀಕ್ಷಿತವಾಗಿ ಅಪಘಾತವಾಗಿದೆ. ಇದೊಂದು ಕಾರಣಕ್ಕೆ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುವುದು ಇಷ್ಟವಿರಲಿಲ್ಲ’ ಎಂದು ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.

ಪರೀಕ್ಷಾ ಕೇಂದ್ರದವರು ವಿದ್ಯಾರ್ಥಿಗೆ ನೆರವಾದರು.

ಮೇ ಮೊದಲ ವಾರ ಫಲಿತಾಂಶ
ತುಮಕೂರು:
‘ಮೇ ತಿಂಗಳ ಮೊದಲ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಪ್ರಯತ್ನಿಸಲಾಗುವುದು’ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ತಿಪಟೂರಿನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಪ್ರವೇಶ ಪತ್ರ ಇದ್ದರೂ ದೊರೆಯದ ಅವಕಾಶ
ಹರಪನಹಳ್ಳಿ (ವಿಜಯನಗರ ಜಿಲ್ಲೆ):
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಬಂದಿದ್ದ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಹಾಜರಾತಿ ಶೇ 75ಕ್ಕಿಂತ ಕಡಿಮೆ ಇದ್ದಿದ್ದರಿಂದ ಪಿಯು ಮಂಡಳಿಯು ಅವರ ಹೆಸರಿನ ಒಎಂಆರ್ ಶೀಟ್ ಕಳುಹಿಸದ ಕಾರಣ ಗುರುವಾರ ಅವರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.

‘ಪಟ್ಟಣದ ಎಚ್.ಪಿ.ಎಸ್. ಪಿಯು ಕಾಲೇಜಿನ ಒಟ್ಟು 39 ವಿದ್ಯಾರ್ಥಿಗಳ ಹಾಜರಾತಿ ಶೇ 75ಕ್ಕಿಂತ ಕಡಿಮೆ ಇತ್ತು. ಅದರಲ್ಲಿ 30 ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಪತ್ರಗಳು ಬಂದಿವೆ. ಆದರೆ, ಒಎಂಆರ್ ಶೀಟ್‌ನಲ್ಲಿ ಇವರ ಹೆಸರುಗಳಿಲ್ಲ. ಹೀಗಾಗಿ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಲ್ಲ’ ಎಂದು ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳ ಹಾಜರಾತಿ ಶೇ 75ಕ್ಕಿಂತ ಕಡಿಮೆಯಿದ್ದ ಕಾರಣ ಪರೀಕ್ಷೆಗೆ ಅವಕಾಶ ಕಲ್ಪಿಸಿಲ್ಲ.‌ ಈ ವಿಷಯ ಅಧಿಕಾರಿಗಳ‌ ಗಮನಕ್ಕೆ ತರಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಉಪನಿರ್ದೇಶಕ ಎಚ್.ಸುಗೇಂದ್ರ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT