ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಳ್ಳು ಜಾಹೀರಾತು ಆರೋಪ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾಮೀನು

Published 7 ಜೂನ್ 2024, 5:59 IST
Last Updated 7 ಜೂನ್ 2024, 5:59 IST
ಅಕ್ಷರ ಗಾತ್ರ

ಬೆಂಗಳೂರು: ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಸ್ಥಳೀಯ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ಶುಕ್ರವಾರ ಬೆಳಗ್ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್‌.ಕೇಶವಪ್ರಸಾದ್‌ ಸಲ್ಲಿಸಿರುವ ಖಾಸಗಿ ದೂರನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ (42ನೇ ಎಸಿಎಂಎಂ ಕೋರ್ಟ್‌) ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಶುಕ್ರವಾರ ವಿಚಾರಣೆ ನಡೆಸಿದರು.

ಆರೋಪಿ ರಾಹುಲ್‌ ಗಾಂಧಿಯ ಖುದ್ದು ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ₹50 ಸಾವಿರ ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದರು. ಮಾಜಿ ಸಂಸದ ಡಿ.ಕೆ.ಸುರೇಶ್‌ ಹಾಜರಿದ್ದು ಆಸ್ತಿ ಭದ್ರತೆ ನೀಡಿದರು. ಪ್ರಕರಣದ ಆರೋಪವನ್ನು ಆರೋಪಿಗೆ ಅರುಹಿ, ಇದಕ್ಕೆ ಅವರ ಉತ್ತರವನ್ನು ದಾಖಲಿಸಿಕೊಳ್ಳುವ ಸಲುವಾಗಿ (ಪ್ಲೀ ರೆಕಾರ್ಡಿಂಗ್‌) ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಲಾಗಿದೆ.

ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ (ಕೆಪಿಸಿಸಿ) ಮೊದಲ ಆರೋಪಿ. ಎರಡನೇ ಆರೋಪಿ ಡಿ.ಕೆ.ಶಿವಕುಮಾರ್. ಮೂರನೇ ಆರೋಪಿ ಸಿದ್ದರಾಮಯ್ಯ ಹಾಗೂ ನಾಲ್ಕನೇ ಆರೋಪಿಯಾಗಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಇದ್ದಾರೆ. ಕಳೆದ ವಿಚಾರಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಜಾಮೀನು‌ ಪಡೆದಿದ್ದರು. ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಆರೋಪಿಗಳೂ ಶುಕ್ರವಾರ ಹಾಜರಿದ್ದರು. ರಾಹುಲ್‌ ಗಾಂಧಿಗೆ ಈ ಮೊದಲು ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಖುದ್ದು ಹಾಜರಿಯಿಂದ ವಿನಾಯ್ತಿ ಪಡೆದಿದ್ದರು.

ರಾಹುಲ್ ಗಾಂಧಿ ಪರ ಹೈಕೋರ್ಟ್ ವಕೀಲ ನಿಶಿತ್ ಶೆಟ್ಟಿ, ಸಿದ್ದರಾಮಯ್ಯ ಪರ ಸೂರ್ಯ ಮುಕುಂದರಾಜ್‌ ಹಾಗೂ ಡಿ.ಕೆ.ಶಿವಕುಮಾರ್ ಪರ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌.ಎ.ಅಹಮದ್‌ ಹಾಗೂ, ಫಿರ್ಯಾದುದಾರರ ಪರ ಹೈಕೋರ್ಟ್ ವಕೀಲ ಎಂ.ವಿನೋದ್ ಕುಮಾರ್ ಹಾಜರಿದ್ದರು.

ಪ್ರಕರಣವೇನು?: ‘2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷವು ರಾಷ್ಟ್ರೀಯ ಮತ್ತು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ 2023ರ ಮೇ 5ರಂದು ಜಾಹೀರಾತು ನೀಡಿತ್ತು. ಆಡಳಿತಾರೂಢ ರಾಜ್ಯ ಬಿಜೆಪಿ ಸರ್ಕಾರ ಶೇ 40ರಷ್ಟು ಕಮಿಷನ್‌ ಸರ್ಕಾರ. ಇದು ಕಳೆದ ನಾಲ್ಕು ವರ್ಷಗಳಲ್ಲಿ ₹1.50 ಲಕ್ಷ ಕೋಟಿ ಲೂಟಿ ಹೊಡೆದಿರುವ ಭ್ರಷ್ಟ ಸರ್ಕಾರ’ ಎಂದು ಆರೋಪಿಸಿದ್ದರು.

‘ಜಾಹೀರಾತುಗಳ ಮೂಲಕ ಕಾಂಗ್ರೆಸ್ ಪಕ್ಷ ಮಾಡಿರುವ ಈ ಆರೋಪಕ್ಕೆ ಫಿರ್ಯಾದುದಾರರೇ ಇಲ್ಲ. ಇದು ರಾಷ್ಟ್ರೀಯ ಪಕ್ಷವೊಂದರ ವಿರುದ್ಧ ಮಾಡಲಾಗಿರುವ ಆಧಾರ ರಹಿತ, ಪೂರ್ವಗ್ರಹ ಪೀಡಿತ ಮತ್ತು ಮಾನಹಾನಿಕರ ಆರೋಪ’ ಎಂದು ಬಿಜೆಪಿ ಖಾಸಗಿ ದೂರು ದಾಖಲಿಸಿದೆ.

ತೊಂದರೆ: ರಾಹುಲ್‌ ಗಾಂಧಿ ಕೋರ್ಟ್‌ಗೆ ಬಂದು ಹೋಗುವ ತನಕ ಸಿಟಿ ಸಿವಿಲ್‌ ಕೋರ್ಟ್ ಆವರಣದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದರಿಂದಾಗಿ ಕಚೇರಿಗಳಿಗೆ ಹಾಜರಾಗುವ ನೌಕರರು, ಸಿಬ್ಬಂದಿಗಳು, ವಕೀಲರು ಮತ್ತು ಸಾರ್ವಜನಿಕರು ಕೆಲಕಾಲ ವಾಹನ ದಟ್ಟಣೆಯಿಂದಾಗಿ ತೊಂದರೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT