ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಮಳೆ: ಸಿಡಿಲು ಬಡಿದು ನಾಲ್ಕು ಸಾವು

Last Updated 29 ಏಪ್ರಿಲ್ 2019, 17:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವು ಕಡೆ ಸೋಮವಾರ ಗುಡುಗು–ಸಿಡಿಲು ಸಹಿತ ಮಳೆಯಾಗಿದೆ. ಸಿಡಿಲು ಬಡಿದು ವಿದ್ಯಾರ್ಥಿ, ರೈತ ದಂಪತಿ ಹಾಗೂ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ತೇಗೂರು ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ರೈತ ಮಂಜುನಾಥ್‌ (48) ಹಾಗೂ ಭಾರತಿ (43) ದಂಪತಿ ಮೃತಪಟ್ಟಿದ್ದಾರೆ.

ಗ್ರಾಮದ ಬಪ್ಪನಕಟ್ಟೆ ಕೆರೆ ಏರಿ ಬಳಿಯ ಜಮೀನಿನಲ್ಲಿ ದಂಪತಿ ಕೆಲಸ ಮಾಡುವಾಗ ಸಂಜೆ 4.45ರ ಹೊತ್ತಿಗೆ ಅವಘಡ ಸಂಭವಿಸಿದೆ.

ಮಹಿಳೆ ಸಾವು: ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ಸಿಡಿಲು ಬಡಿದು ಶಾರದಮ್ಮ (45) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಸಂಜೆ ಸೌದೆಯನ್ನು ತೆಗೆದುಕೊಂಡು ಹೋಗಲು ಮನೆಯ ಮುಂದೆ ಹೋದಾಗ ಈ ಅವಘಡ ಸಂಭವಿಸಿದೆ.

ವಿದ್ಯಾರ್ಥಿ ಬಲಿ: ಬಳ್ಳಾರಿಯ ಗೌತಮನಗರದಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ವೆಂಕಟೇಶ್ (21) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಗೋಸುಬಾಳು ಗ್ರಾಮದವರಾದ ವೆಂಕಟೇಶ್ ಇಲ್ಲಿನ ಎಸ್‌ಜಿಟಿ ಕಾಲೇಜಿನಲ್ಲಿ ವಾಣಿಜ್ಯ ಪದವಿಯ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸಂಜೆ ವಿದ್ಯಾರ್ಥಿ ನಿಲಯದ ಸಮೀಪ ಸಿಡಿಲು ಬಡಿದಿದೆ.

ಬಿರುಸಿನ ಮಳೆ: ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಹದ ಮಳೆಯಾಯಿತು. ಸುಮಾರು ಮುಕ್ಕಾಲು ಗಂಟೆ ಮಳೆ ಸುರಿಯಿತು. ಬಿಸಿಲ ತಾಪದಿಂದ ಕಾದಿದ್ದ ಇಳೆಗೆ ತಂಪೆರೆಯಿತು.

ಮೂಡಿಗೆರೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಉತ್ತಮ ಮಳೆ ಸುರಿಯಿತು. ಪಟ್ಟಣ ಸೇರಿದಂತೆ ಹ್ಯಾಂಡ್ ಪೋಸ್ಟ್, ಬೀಜುವಳ್ಳಿ, ತತ್ಕೊಳ, ಕುಂದೂರು, ಬಿದರಹಳ್ಳಿ, ಹೊರಟ್ಟಿ ಮುಂತಾದ ಪ್ರದೇಶಗಳಲ್ಲಿ ಒಂದು ತಾಸಿಗೂ ಅಧಿಕ ಕಾಲ ಗುಡುಗು ಸಹಿತ ಧಾರಾಕಾರವಾಗಿ ಸುರಿಯಿತು. ತರೀಕೆರೆ ತಾಲ್ಲೂಕಿನ ವಿವಿದೆಢೆ ಆಲಿಕಲ್ಲು ಸಹಿತ ಮಳೆಯಾಗಿದೆ. ಕಳಸ, ಕೊಟ್ಟಿಗೆಗಾರ, ಬಣಕಲ್‌, ಆಲ್ದೂರಿನಲ್ಲೂ ಮಳೆ ಸುರಿದಿದೆ.

ಧರ್ಮಸ್ಥಳ, ಉಜಿರೆಯಲ್ಲಿ ಜಡಿಮಳೆ: ಧರ್ಮಸ್ಥಳ, ಉಜಿರೆ, ಮುಂಡಾಜೆ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು ಸಹಿತ ಜಡಿಮಳೆಯಾಗಿದ್ದು, ಬೇಸಿಗೆ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರದಿದೆ.

ಗಾಳಿ–ಮಳೆ: ವಾರದಿಂದ ಬಿಸಿಗಾಳಿಗೆ ಬಸವಳಿದಿದ್ದ ಬಳ್ಳಾರಿ ನಗರದ ಜನರಿಗೆ ಸುರಿದ ಗುಡುಗು ಸಹಿತ ಗಾಳಿ ಮಳೆ ತಂಪೆರೆಯಿತು. ಕೌಲ್‌ಬಜಾರ್‌ ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬೇವಿನ ಮರವೊಂದು ಉರುಳಿ ಕಾರು ಜಖಂಗೊಂಡಿತು.

20 ನಿಮಿಷಕ್ಕೂ ಹೆಚ್ಚು ಕಾಲ ಸುರಿದ ಮಳೆಯಲ್ಲಿ ಚಿಣ್ಣರು ನೆನೆದು ಕುಪ್ಪಳಿಸಿದರು. ರಸ್ತೆ ಅಕ್ಕಪಕ್ಕದಲ್ಲಿ ತುಂಬಿಕೊಂಡಿದ್ದ ಕಸಕಡ್ಡಿ, ಚರಂಡಿ ತ್ಯಾಜ್ಯ ಮಳೆ ನೀರಿನಲ್ಲಿ ತೇಲಿಬಂದು ರಸ್ತೆ ಮೇಲೆ ಹರಿಯಿತು.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮಳೆ ಸುರಿಯಿತು.

ಧಾರಾಕಾರ ಮಳೆ: ಹನೂರು ತಾಲ್ಲೂಕಿನ ಕೆಲವೆಡೆ ಸೋಮವಾರ ಸಂಜೆ ಧಾರಾಕಾರ ಮಳೆಯಾಗಿದೆ. ಕೌದಳ್ಳಿ ಸಮೀಪದ ಗುರುಸ್ವಾಮಿ ದೊಡ್ಡಿ ಗ್ರಾಮದಲ್ಲಿ ಸಿಡಿಲು ಬಡಿದು‌ ಹಸುವೊಂದು ಮೃತಪಟ್ಟಿದೆ.

ಗುಂಡ್ಲುಪೇಟೆ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ತಾಲ್ಲೂಕಿನ ಕುಂದಕೆರೆ, ಬೊಮ್ಮಲಾಪುರ, ಕೆಬ್ಬೇಪುರ, ಮಂಗಳ, ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಮಡಹಳ್ಳಿ ಭಾಗಗಳಲ್ಲಿ ಮಳೆಯಾಗಿದೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲು, ತಿತಿಮತಿ, ದೇವರಪುರ, ಕೋಣನಕಟ್ಟೆ ಭಾಗದಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಮಡಿಕೇರಿಯಲ್ಲಿ ತುಂತುರು ಮಳೆ ಆಗಿದೆ.

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಹೋಬಳಿಯ ಉಪ್ಪಾರಹಟ್ಟಿ, ಗೊಲ್ಲಹಳ್ಳಿ, ನೇಲಗೇತನಹಟ್ಟಿ, ಸರೊಜವ್ವನಹಳ್ಳಿ, ರಾಮದುರ್ಗ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಜೋರು
ಮಳೆಯಾಗಿದೆ. ತುರುವನೂರು ಹೋಬಳಿಯ ವಿವಿಧೆಡೆ ಸೋಮವಾರ ಸಂಜೆ ಸಾಧಾರಣ ಮಳೆ ಸುರಿದಿದೆ. ಹುಣಸೆಕಟ್ಟೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಬಂದ ಮಳೆಗೆ ವಾಸದ ಮನೆಗಳ ಶೀಟುಗಳು ಹಾರಿ ಹೋಗಿವೆ. ಹೋಬಳಿಯ ಕೆಲ ಗ್ರಾಮಗಳ ಹೊಲಗಳಿಗೂ ನೀರು ಹರಿದುಬಂದಿದೆ. ಗುಡುಗು, ಸಿಡಿಲು ಇದ್ದುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ಹರಪನಹಳ್ಳಿ ಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ. ಉಚ್ಚಂಗಿದುರ್ಗದಲ್ಲಿ ಭಾರಿ ಬಿರುಗಾಳಿ, ಮಳೆಯಾಗಿದ್ದು, ತೆಂಗಿನ ಮರಗಳು ಉರುಳಿವೆ. ಬೇವಿನ ಮರ ಬಿದ್ದು ಬೈಕ್‌ ಜಖಂಗೊಂಡಿದೆ. ದಾವಣಗೆರೆ ನಗರದಲ್ಲೂ ರಾತ್ರಿ 7 ಗಂಟೆಯ ಸುಮಾರಿಗೆ ಗುಡುಗು ಸಹಿತ ತುಂತುರು ಮಳೆಯಾಗಿದೆ.

ಕಲಬುರ್ಗಿ ನಗರದಲ್ಲಿ ಮತ್ತು ಜಿಲ್ಲೆಯ ಕೆಲವೆಡೆ ಸಂಜೆ ಮಳೆಯಾಯಿತು.ರಾಯಚೂರು ಜಿಲ್ಲೆ ಸಿರವಾರ ಹಾಗೂ ಕೊಪ್ಪಳದಲ್ಲಿಯೂ ಮಳೆ ಸುರಿಯಿತು. ಯಾದಗಿರಿ ಜಿಲ್ಲೆ ಲಿಂಗಸನಹಳ್ಳಿ ತಾಂಡಾದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT