ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ: ಇಂದಿನಿಂದ ಕೌನ್ಸೆಲಿಂಗ್‌

Published 21 ಅಕ್ಟೋಬರ್ 2023, 4:19 IST
Last Updated 21 ಅಕ್ಟೋಬರ್ 2023, 4:19 IST
ಅಕ್ಷರ ಗಾತ್ರ

ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಅ.21ರಿಂದಲೇ ಸ್ಥಳ ಆಯ್ಕೆಗೆ ಕೌನ್ಸೆಲಿಂಗ್‌ ನಡೆಯಲಿದೆ.

‘ಸ್ಥಗಿತಗೊಂಡಿದ್ದ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಕ್ಷಣ ಮುಂದುವರಿಸುವಂತೆ ಅ.12ರಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಹಾಗಾಗಿ, ಮೊದಲ ತಾತ್ಕಲಿಕ ಪಟ್ಟಿಯಲ್ಲಿ ಕೈಬಿಟ್ಟಿದ್ದ 451 ಅಭ್ಯರ್ಥಿಗಳು ಹಾಗೂ ಎರಡನೇ ಆಯ್ಕೆ ಪಟ್ಟಿಯಲ್ಲಿ ಸೇರಿಸಿದ್ದ ಅಷ್ಟೇ ಸಂಖ್ಯೆಯ ಅಭ್ಯರ್ಥಿಗಳನ್ನು ಹೊರಗಿಟ್ಟು ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಅಂತಿಮ ಆದೇಶದ ನಂತರ  ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಇಲಾಖೆ ನಿರ್ಧರಿಸಿದೆ. 

ವಿವಾಹಿತ ಮಹಿಳೆಯರು ಪತಿಯ ಆದಾಯದ ಆಧಾರದಡಿ ತಮ್ಮ ಆದಾಯ ಪ್ರಮಾಣ ಪತ್ರವನ್ನು ನೇಮಕಾತಿ ವೇಳೆ ಸಲ್ಲಿಸಬೇಕಿತ್ತು. ಅದರ ಬದಲು, ತಂದೆಯ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದಾರೆ ಎಂಬ ಕಾರಣ ನೀಡಿ 451 ಅಭ್ಯರ್ಥಿಗಳನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ, ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಏಕಸದಸ್ಯ ನ್ಯಾಯಪೀಠದ ಆದೇಶದ ನಂತರ ಅವರನ್ನು ಪಟ್ಟಿಗೆ ಸೇರಿಸಿ, ಮೊದಲ ಆಯ್ಕೆಪಟ್ಟಿಯಲ್ಲಿದ್ದ ಅಷ್ಟೆ ಸಂಖ್ಯೆಯ ಅಭ್ಯರ್ಥಿಗಳನ್ನು ಕೈಬಿಟ್ಟು ಎರಡನೇ ಪಟ್ಟಿ ಪ್ರಕಟಿಸಲಾಗಿತ್ತು.

2022ರ ಮಾರ್ಚ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಸೂಚನೆ ಹೊರಡಿಸಿತ್ತು. 68,849 ಅಭ್ಯರ್ಥಿಗಳು ಸಿಇಟಿ ಬರೆದಿದ್ದರು. ಕಳೆದ ನವೆಂಬರ್‌ನಲ್ಲೇ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. 

ಅಭ್ಯರ್ಥಿಗಳು ಜಿಲ್ಲಾವಾರು ಪಟ್ಟಿಯ ಪ್ರಕಾರ ಆಯಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಕೌನ್ಸೆಲಿಂಗ್‌ಗೆ ಭಾಗವಹಿಸಬೇಕು. ಗ್ರಾಮೀಣ ಸಿ ವಲಯವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಕೋರ್ಟ್‌ನಲ್ಲಿ ಯಾವುದೇ ಪ್ರಕರಣ ದಾಖಲಿಸಿಲಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು. ನೇಮಕಾತಿ ಆದೇಶ ಪಡೆದ 15 ದಿನಗಳ ಒಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆ ಹಾಗೂ 371 (ಜೆ) ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಹೊರತುಪಡಿಸಿ ಕೌನ್ಸೆಲಿಂಗ್‌ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT