ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಎಸ್-ಡಿಪ್ಲೊಮಾ: ವೈದ್ಯ ವೃತ್ತಿಗೆ ಅನರ್ಹ

ಖಾಸಗಿ ಕ್ಲಿನಿಕ್‌ ಆರಂಭಿಸುವ ಮುನ್ನ ನೋಂದಣಿ ಕಡ್ಡಾಯ: ರಾಜ್ಯ ಸರ್ಕಾರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್‌
Published 2 ಜನವರಿ 2024, 0:36 IST
Last Updated 2 ಜನವರಿ 2024, 0:36 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮುದಾಯ ವೈದ್ಯಕೀಯ ಸೇವೆ ಮತ್ತು ಅವಶ್ಯಕ ಔಷಧಿಗಳು (ಸಿಎಂಎಸ್-ಇಡಿ) ವಿಷಯದಲ್ಲಿ ಡಿಪ್ಲೊಮಾ ಪಡೆದವರನ್ನು ವೈದ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂಬ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌, ‘ಅರ್ಹತೆ ಇಲ್ಲದೇ ಇದ್ದರೂ, ವೈದ್ಯರು ಎಂದು ಹೇಳಿಕೊಂಡು ಗ್ರಾಮೀಣ ಭಾಗಗಳಲ್ಲಿ ಜನರನ್ನು ವಂಚಿಸುತ್ತಿರುವವರ ಪ್ರವೃತ್ತಿಗೆ ಅಂತ್ಯ ಹಾಡಬೇಕಿದೆ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಸಂಬಂಧ ಕೋಲಾರ ಜಿಲ್ಲೆಯ ಕೆಜಿಎಫ್‌ನ ಅಣ್ಣಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಅರ್ಜಿದಾರರ ವಿದ್ಯಾಭ್ಯಾಸವು ಕೆಪಿಎಂಎ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥಾಪನಾ ಕಾಯ್ದೆ) ಕಲಂ 2(ಕೆ)ಗೆ ಅನ್ವಯ ಆಗುವುದಿಲ್ಲ. ಹೀಗಾಗಿ, ಅರ್ಜಿದಾರರು ವೈದರಲ್ಲ. ಆದ್ದರಿಂದ, ಅವರು ವೈದ್ಯಕೀಯ ಸೇವೆ ಸಲ್ಲಿಸಲು ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿರುವ ಸರ್ಕಾರದ ನಿರ್ಧಾರ ಸಮಂಜಸವಾಗಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಪ್ರಕರಣವೇನು?: ಅರ್ಜಿದಾರರು ಸಿಎಂಎಸ್-ಇಡಿ ಪೂರ್ಣಗೊಳಿಸಿ, ನವದೆಹಲಿಯಲ್ಲಿ ಅರೆ ವೈದ್ಯಕೀಯ ಕೋರ್ಸ್ ತರಬೇತಿ ಪಡೆದಿದ್ದು, ಮುಂಬೈನಲ್ಲಿರುವ ಅರೆ ವೈದ್ಯಕೀಯ ಶಿಕ್ಷಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಪ್ರಮಾಣ ಪತ್ರದ ಆಧಾರದಡಿ ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್‌ನ ಮಿನಿ ಇಬ್ರಾಹಿಂ ರಸ್ತೆಯಲ್ಲಿ ‘ಸಂಗೀತಾ ಕ್ಲಿನಿಕ್‘ ಹೆಸರಿನಲ್ಲಿ ಕ್ಲಿನಿಕ್ ಆರಂಭಿಸಿ ಹಲವು ವರ್ಷಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.

‘ಖಾಸಗಿಯಾಗಿ ವೈದ್ಯಕೀಯ ಸೇವೆ ಸಲ್ಲಿಸುವವರು ರಾಜ್ಯದಲ್ಲಿ 2008ರ ಜನವರಿ 23ರಿಂದ ಜಾರಿಗೆ ಬಂದಿರುವ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ–2007ರ ಅನುಸಾರ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಂಡ ಬಳಿಕವೇ ಸೇವೆ ಮುಂದುವರೆಸಬೇಕು‘ ಎಂದು ಸರ್ಕಾರ ಪ್ರಕಟಿಸಿತ್ತು. ಇದರನ್ವಯ ಅರ್ಜಿದಾರರು ತಮ್ಮ ಕ್ಲಿನಿಕ್‌ ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಕ್ಷಮ ಪ್ರಾಧಿಕಾರ ಈ ಅರ್ಜಿಯನ್ನು ತಿರಸ್ಕರಿಸಿ ಹಿಂಬರಹ ನೀಡಿತ್ತು. ಈ ಹಿಂಬರಹ ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT