ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ತಡೆದರೆ ದಂಧೆಕೋರರ ಗೂಂಡಾಗಿರಿ

Last Updated 3 ನವೆಂಬರ್ 2018, 20:04 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮರಳು ಮಾಫಿಯಾ ಎಷ್ಟು ಬಲಿಷ್ಠವಾಗಿದೆ ಎಂದರೆ ತಡೆಯಲು ಬಂದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ, ಹತ್ಯೆಗೆ ಯತ್ನಿಸಿದ ನಿದರ್ಶನಗಳು ಸಾಕಷ್ಟಿವೆ.

2014ರಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಡಿವೈಎಸ್‌ಪಿ ಸವಿತಾ ಕೊಲೆಗೆ ಯತ್ನ, 2017ರಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹತ್ಯೆಗೆ ಯತ್ನ ನಡೆದಿವೆ. ಎಸಿ, ತಹಸೀಲ್ದಾರ್ ಮಟ್ಟದ ಅಧಿಕಾರಿಗಳ ಮೇಲೆ ಲಾರಿ ಹತ್ತಿಸಲು ಯತ್ನಗಳೂ ನಡೆದಿವೆ. ದಾಖಲಾದ ಮುಂದಿನ ಪ್ರಕರಣಗಳನ್ನು ಗಮನಿಸಿದರೆ ಜಾಲದ ಆಳ ಅಗಲದ ಅಂದಾಜು ಸಿಗುತ್ತದೆ.

ಗದಗ

ಮರಳು ಲಾರಿ ಚಾಲಕನೊಬ್ಬ ಪೊಲೀಸ್‌ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾನೆಂದು ಆರೋಪಿಸಿ ಉದ್ರಿಕ್ತ ಗ್ರಾಮಸ್ಥರು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಘಟನೆ 2017ರ ಫೆಬ್ರುವರಿ 5ರಂದು ಲಕ್ಷ್ಮೇಶ್ವರದಲ್ಲಿ ನಡೆದಿತ್ತು. ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮದ ಶಿವಪ್ಪ ದುಂಡಪ್ಪ ಭದ್ರಾಪುರ (23), 2017ರ ಫೆ.4ರಂದು ಮಧ್ಯರಾತ್ರಿ ಲಾರಿಯಲ್ಲಿ ಮರಳು ತುಂಬಿಕೊಂಡು ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಕಡೆ ಹೊರಟಿದ್ದರು. ಪೊಲೀಸರು ತಪಾಸಣೆಗೆ ಮುಂದಾದಾಗ ಲಾರಿ ನಿಲ್ಲಿಸದೆ ಪಾರಾಗಲು ಯತ್ನಿಸಿದ್ದರು. ಲಾರಿ ತಡೆದ ಪೊಲೀಸರು ಆತನನ್ನು ವಶಕ್ಕೆ ಪಡೆದು ಥಳಿಸಿದ್ದರು. ಅಸ್ವಸ್ಥಗೊಂಡ ಶಿವಪ್ಪ, ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲಿಯೇ ಮೃತಪಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಜನರು ಮರುದಿನ ಬೆಳಿಗ್ಗೆ ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. 200ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 2017ರಲ್ಲಿ ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಉಡುಪಿ

ಕುಂದಾಪುರ ತಾಲ್ಲೂಕಿನ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ಏಪ್ರಿಲ್‌ 2ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಅಂದಿನ ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರ ಮೇಲೆ ಮರಳು ದಂಧೆಕೋರರು ಹಲ್ಲೆ ನಡೆಸಿದ್ದರು.

ಭಾರಿ ಸಂಖ್ಯೆಯಲ್ಲಿದ್ದ ದಂಧೆಕೋರರು ಅಧಿಕಾರಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಹಲ್ಲೆ ನಡೆಸಿದ್ದರು. ಪರಿಸ್ಥಿತಿಯ ಗಂಭೀರತೆ ಅರಿತ ಅಧಿಕಾರಿಗಳು ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ, ಕಾರಿನ ಮೇಲೆಯೂ ದಾಳಿ ನಡೆಸಲಾಯಿತು ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಎ.ಸಿ ಉಡುಪಿ ನಗರ ಠಾಣೆಗೆ ಬಂದು ದೂರು ನೀಡಿದರು. ಕೊಲೆಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ ಪ್ರಕಣಗಳನ್ನು ದಾಖಲಿಸಲಾಯಿತ ಈ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣ ತನಿಖಾ ಹಂತದಲ್ಲಿದೆ.

ಹೂವಿನಹಡಗಲಿ

ತುಂಗಭದ್ರಾ ನದಿಯ ಎಡ, ಬಲ ದಂಡೆಗಳಲ್ಲಿ ಅಕ್ರಮ ಸಾಗಣೆ ತಡೆಯಲು ಮುಂದಾದ ತಹಶೀಲ್ದಾರರು, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಸಿಬ್ಬಂದಿ, ಪೊಲೀಸರ ಮೇಲೆ ಮರಳು ದಂಧೆಕೋರರು ಹಲ್ಲೆಗೆ ಯತ್ನಿಸಿರುವ ಪ್ರಕರಣಗಳು ನಡೆದಿವೆ.

2014ರಲ್ಲಿ ಮೈಲಾರ ಸೇತುವೆ ಬಳಿ ಮರಳು ತುಂಬಿದ ಲಾರಿಯನ್ನು ತಡೆದಿದ್ದ ಗೃಹ ರಕ್ಷಕ ಸಿಬ್ಬಂದಿಯ ಮೇಲೆ ದಂಧೆಕೋರರು ಗಂಭೀರವಾಗಿ ಹಲ್ಲೆ ನಡೆಸಿದ್ದರು. 2015ರ ಮಾರ್ಚ್‌ 17ರಂದು ಇಲ್ಲಿ ತಹಶೀಲ್ದಾರರಾಗಿದ್ದ ಎಚ್.ವಿಶ್ವನಾಥ ಮರಳು ದಂಧೆಕೋರರ ದೌರ್ಜನ್ಯಕ್ಕೆ ಗುರಿಯಾಗಿದ್ದರು. ತುಂಗಭದ್ರಾ ನದಿ ತೀರದ ಬ್ಯಾಲಹುಣ್ಸಿ ಬಳಿ ಮರಳು ತುಂಬಿದ್ದ ಲಾರಿಯನ್ನು ಅವರು ತಡೆಯಲು ಯತ್ನಿಸಿದಾಗ ಲಾರಿಯ ಚಾಲಕ ತಹಶೀಲ್ದಾರ್ ಜೀಪಿನ ಮೇಲೆ ಲಾರಿ ಹರಿಸಲು ಯತ್ನಿಸಿದ್ದ. ಜೀಪ್‌ ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಹಶೀಲ್ದಾರರು ಮತ್ತು ಅವರ ಜತೆಗಿದ್ದ ಕಂದಾಯ ಇಲಾಖೆ ಸಿಬ್ಬಂದಿ ಪಾರಾಗಿದ್ದರು. 2016ರ ಜೂನ್‌ 3ರಂದು ತಾಲ್ಲೂಕಿನ ಬ್ಯಾಲಹುಣ್ಸಿ ಬಳಿ ಹಾವೇರಿ ಜಿಲ್ಲೆಯ ತರೇದಾಳದ ಮರಳು ದಂಧೆಕೋರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಹರಿಯುವ ನದಿಯಲ್ಲೇ ತೆಪ್ಪಗಳ ಮೂಲಕ ಮರಳು ಸಾಗಿಸುತ್ತಿದ್ದವರನ್ನು ಹಿಡಿಯಲು ಹೋಗಿದ್ದ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಹಿರೇಹಡಗಲಿ ಠಾಣೆಯ ಪೇದೆಗಳಾದ ಸತೀಶ, ಲಕ್ಷ್ಮಣ, ಉಮೇಶ ಗಾಯಗೊಂಡಿದ್ದರು.

ಹಾವೇರಿ

ಮರಳು ಅಕ್ರಮ ಸಾಗಣೆ ತಡೆಯಲು ಯತ್ನಿಸಿದ್ದ ಉಪ ವಿಭಾಗಾಧಿಕಾರಿ ಪಿ.ಶಿವರಾಜ್ ಹಾಗೂ ತಹಶೀ
ಲ್ದಾರ್ ಪಂಪನಗೌಡ ಮೇಲ್ಸೀಮೆ ಅವರಿದ್ದ ಜೀಪಿಗೆ ಡಿಕ್ಕಿ ಹೊಡೆಯಲು ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕ ಯತ್ನಿಸಿದ್ದ ಘಟನೆ ತಾಲ್ಲೂಕಿನ ಹರಳಹಳ್ಳಿ ಬಳಿ 2015ರ ಮಾರ್ಚ್‌ 20ರಂದು ನಡೆದಿತ್ತು.

ತುಂಗಭದ್ರಾ ನದಿ ತೀರದಲ್ಲಿ ಮರಳು ಅಕ್ರಮ ಗಣಿಗಾರಿಕೆ ಮತ್ತು ಸಾಗಣೆ ವಿರುದ್ಧ ಶಿವರಾಜ್ ಮತ್ತು ಪಂಪನಗೌಡ ಮೇಲ್ಸೀಮೆ ದಾಳಿ ನಡೆಸಿ ಮರಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಟ್ರಾಕ್ಟರ್‌ ಅನ್ನು ನಿಲ್ಲಿಸಲು ಯತ್ನಿಸಿದ್ದರು. ಆಗ ಟ್ರಾಕ್ಟರ್‌ ಚಾಲಕ ಜೀಪಿಗೆ ಡಿಕ್ಕಿ ಹೊಡೆಯಲು ಹವಣಿಸಿದ್ದು, ಜೀಪ್‌ ಚಾಲಕನ ಸಮಯಪ್ರಜ್ಞೆಯಿಂದ ಅಧಿಕಾರಿಗಳು ಅಪಾಯದಿಂದ ಪಾರಾಗಿದ್ದರು.

ದಾವಣಗೆರೆ

ಹರಪನಹಳ್ಳಿ ತಾಲ್ಲೂಕು ಗರ್ಭಗುಡಿ ಗ್ರಾಮದಲ್ಲಿ 2015 ಮೇ 10ರಂದು ರಾತ್ರಿ 11 ಗಂಟೆ ಸುಮಾರಿಗೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಕುಬೇಂದ್ರ ನಾಯ್ಕ್ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಪನಹಳ್ಳಿ ತಾಲ್ಲೂಕು ತಿಪ್ಪನಾಯಕನಹಳ್ಳಿ ಗ್ರಾಮದಲ್ಲಿ 2015 ಜುಲೈ 3ರಂದು ರಾತ್ರಿ 10.30ರ ಸುಮಾರಿಗೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿದ ಗ್ರಾಮ ಲೆಕ್ಕಾಧಿಕಾರಿ ಸಂತೋಷ್ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರಪನಹಳ್ಳಿ ತಾಲ್ಲೂಕು ಮತ್ತಿಹಳ್ಳಿ ಗ್ರಾಮದಲ್ಲಿ 2017 ಜನವರಿ 1ರಂದು ರಾತ್ರಿ 11.30ರ ಸುಮಾರಿಗೆ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರೇವಣಸಿದ್ದಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ

ತಹಶೀಲ್ದಾರ್‌ ಆರ್‌.ವಿ. ಕಟ್ಟಿ ಪ್ರಯಾಣಿಸುತ್ತಿದ್ದ ಕಾರಿಗೆ ಮರಳು ಅಕ್ರಮ ಸಾಗಣೆದಾರರು ಟ್ರಾಕ್ಟರ್‌ನಿಂದ ಡಿಕ್ಕಿ ಹೊಡೆಸಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ವರದಿಯನ್ನು ಕಟ್ಟಿ ತಳ್ಳಿಹಾಕಿದರು. ಪ್ರಕರಣ ದಾಖಲಾಗಿರಲಿಲ್ಲ.

ರಾಮನಗರ

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತಟ್ಟೆಕೆರೆ ಗ್ರಾಮದಲ್ಲಿನ ಅಕ್ರಮ ಮರಳು ಫಿಲ್ಟರ್‌ ಘಟಕದ ಮೇಲೆ 2017ರ ಮಾ.1ರಂದು ದಾಳಿ ನಡೆದಾಗ ತಹಶೀಲ್ದಾರ್ ಯೋಗಾನಂದ್ ಇದ್ದ ಜೀಪಿಗೆ ಜೆಸಿಬಿಯಿಂದ ಡಿಕ್ಕಿ ಹೊಡೆದು ಹತ್ಯೆಗೆ ಯತ್ನಿಸಿದ ಚಾಲಕ. ಜೀಪ್‌ ಚಾಲಕನ ಸಮಯಪ್ರಜ್ಞೆಯಿಂದ ಅಧಿಕಾರಿ ಪಾರಾಗಿದ್ದರು. ಮಾಗಡಿ ತಾಲೂಕಿನ ಕುದೂರು ಹೋಬಳಿಯ ಚೀಲೂರು ಕೆರೆಯಲ್ಲಿ ಮರಳು ಫಿಲ್ಟರ್ ದಂಧೆಯಲ್ಲಿ ತೊಡಗಿದ್ದವರ ಮೇಲೆ 2017ರ ಸೆ. 2ರಂದು ದಾಳಿ ಮಾಡಿದ ಸಂದರ್ಭ ತಹಶೀಲ್ದಾರ್‌ ಲಕ್ಷ್ಮಿಸಾಗರ್‌ ಮೇಲೆ ಧನಂಜಯ ಎಂಬಾತನಿಂದ ಟ್ರ್ಯಾಕ್ಟರ್‌ನಿಂದ ಡಿಕ್ಕಿ ಹೊಡೆಸಿ ಹತ್ಯೆಗೆ ಯತ್ನ. ಪಕ್ಕದಲ್ಲಿದ್ದವರು ಕೂಡಲೇ ಎಳೆದುಕೊಂಡಿದ್ದರಿಂದ ಅಧಿಕಾರಿ ಪಾರಾಗಿದ್ದರು.

ವಿಜಯಪುರ

ಭೀಮಾ ತೀರದ ವಿವಿಧೆಡೆ ಮರಳನ್ನು ಅಕ್ರಮವಾಗಿ ತುಂಬುತ್ತಿದ್ದ ಅಡ್ಡೆ ಮೇಲೆ ಚಡಚಣ ಪೊಲೀಸ್‌ ವೃತ್ತದ ಸಿಪಿಐ ಎಲ್‌.ಟಿ.ಚಂದ್ರಕಾಂತ ನೇತೃತ್ವದ ತಂಡ ದಾಳಿ ನಡೆಸಲು ತೆರಳಿದ ಸಂದರ್ಭ ಮಹಾರಾಷ್ಟ್ರದ ತೆಲಗಾಂವ ಗ್ರಾಮದ ಸುನೀಲ ಶರಣ್ಣದಾಣೆ, ಗಣೇಶ ಕೋಳಿ ಎಂಬುವರ ನೇತೃತ್ವದ ತಂಡದವರು ಕಲ್ಲು ತೂರಾಟ ನಡೆಸಿ, ಹಲ್ಲೆ ನಡೆಸಿದರು. ಕಲ್ಲೇಟಿನಿಂದ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದವು.

ಚಡಚಣ ಪೊಲೀಸ್‌ ಠಾಣೆಯ ಪಿಎಸ್‌ಐ ಎಂ.ಕೆ.ದ್ಯಾಮಣ್ಣವರ ನೇತೃತ್ವದ ತಂಡ ಮರಳನ್ನು ಅಕ್ರಮವಾಗಿ ತುಂಬುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಲು ತೆರಳಿದ ಸಂದರ್ಭ ಮಹಾರಾಷ್ಟ್ರದ ತೆಲಗಾಂವ ಗ್ರಾಮದ ಧರೆಪ್ಪ ತುಕಾರಾಮ ಶಹೆಜಾಳೆ, ಮಲಕಾರಿ ಕುಂಬಾರ ಎಂಬುವರ ನೇತೃತ್ವದ ತಂಡದವರು ಕಲ್ಲು ತೂರಾಟ ನಡೆಸಿ, ಹಲ್ಲೆ ನಡೆಸಿದರು. ಪೊಲೀಸ್ ಸಿಬ್ಬಂದಿಗೆ ಕಲ್ಲೇಟು ತಗುಲಿ ಗಾಯಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT