ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇ 29ರಿಂದ ರಾಜ್ಯದಲ್ಲಿ ಶಾಲೆಗಳ ಪುನರಾರಂಭ

ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ; 31ರಂದು ಮಕ್ಕಳಿಗೆ ಪ್ರಾರಂಭೋತ್ಸವದ ಸಿಹಿಯೂಟ
Published 28 ಮೇ 2024, 1:17 IST
Last Updated 28 ಮೇ 2024, 1:17 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮೇ 29 ರಿಂದ ಪುನರಾರಂಭವಾಗುತ್ತಿದ್ದು, 31ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ.

2024–25 ನೇ ಸಾಲಿನ ಶಿಕ್ಷಣವನ್ನು ‘ಶೈಕ್ಷಣಿಕ ಬಲವರ್ಧನೆ’ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷ ವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ಸೂಚಿಸಿದೆ. 

ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಶಾಲೆ ಆರಂಭಕ್ಕೂ ಎರಡು ದಿನಗಳ ಮೊದಲೇ ಕೆಲಸಕ್ಕೆ ಹಾಜರಾಗಿದ್ದು, ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಶಾಲೆಯ ಅಂಗಳ ಹಾಗೂ ಶಾಲಾ ಕೊಠಡಿ, ಶೌಚಾಲಯಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ.
ಬಹುತೇಕ ಕಡೆ ಸಣ್ಣಪುಟ್ಟ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದೆ. 31ರ ಪ್ರಾರಂಭೋತ್ಸವಕ್ಕೆ ಮಾವಿನ ತೋರಣ, ಬಾಳೆಕಂದು ಕಟ್ಟಿ, ರಂಗೋಲಿ ಬಿಡಿಸಿ ಶಾಲೆಗಳನ್ನು ಸಿಂಗಾರಗೊಳಿಸಲಾಗುತ್ತಿದ್ದು, ಅಂದು ಒಂದು ರೀತಿ ಹಬ್ಬದ ಸಂಭ್ರಮವಿರಲಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಕೇಸರಿಬಾತ್, ಹೆಸರುಬೇಳೆ ಪಾಯಸ ಇಲ್ಲವೆ ಯಾವುದಾದರೂ ಒಂದು ಸಿಹಿ ತಿನಿಸು ನೀಡಲಾಗುತ್ತದೆ. ಈಗಾಗಲೇ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲಾಗಿದೆ. 

ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ:

ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ ಶಾಲಾ ಆರಂಭಕ್ಕೂ ಮೊದಲೇ ಎಲ್ಲ ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಿವೆ. ಒಂದೇ ಬಾರಿಗೆ ಎರಡೂ ಜತೆ ಸಮವಸ್ತ್ರ ನೀಡಲಾಗುತ್ತಿದೆ.  

ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಶಿಕ್ಷಕರ ಕೊರತೆ ಇರುವ ಎಲ್ಲ ಶಾಲೆಗಳಿಗೂ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಸಚಿವ

6 ವರ್ಷ ಕಡ್ಡಾಯ ಈ ಬಾರಿ ಇಲ್ಲ

ಒಂದನೇ ತರಗತಿಗೆ ಸೇರುವ ಮಕ್ಕಳಿಗೆ ಜೂನ್‌ 1ಕ್ಕೆ 6 ವರ್ಷ ಪೂರ್ಣಗೊಂಡಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಆದರೆ, ಈ ನಿಯಮ 2024–25ನೇ ಶೈಕ್ಷಣಿಕ ಸಾಲಿಗೆ ಅನ್ವಯಿಸುವುದಿಲ್ಲ. ಮುಂದಿನ ವರ್ಷದಿಂದ ಶಾಲೆಗೆ ಸೇರಿಸುವ ಮಕ್ಕಳಿಗೆ ಈ ನಿಯಮ
ಕಡ್ಡಾಯ.

ಶಾಲೆಗೆ ಮಕ್ಕಳನ್ನು ಸೇರಿಸುವಾಗ ಜನನ ಪ್ರಮಾಣಪತ್ರ, ಆಸ್ಪತ್ರೆ ದಾಖಲೆ, ಅಂಗನವಾಡಿ, ಆರೋಗ್ಯ ಸಹಾಯಕಿಯರ ದೃಢೀಕರಣ, ಇಲ್ಲವೇ, ಪೋಷಕರು ನೀಡುವ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರ  ಸೇರಿದಂತೆ ಯಾವುದಾದರೂ ಒಂದು ದಾಖಲೆ ಸಲ್ಲಿಸಬೇಕು.

ಶೌಚಾಲಯ ಸ್ವಚ್ಛತೆಗೆ ಮಕ್ಕಳ ಬಳಕೆ ನಿಷಿದ್ಧ

ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಕೆಲ ಶಾಲೆಗಳಲ್ಲಿ ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸಿದ್ದು ವಿವಾದವಾಗಿತ್ತು. ಹಾಗಾಗಿ, ಈ ಶೈಕ್ಷಣಿಕ ಸಾಲಿನಲ್ಲಿ ಅಂತಹ ಘಟನೆಗಳು ನಡೆಯದಂತೆ ಜಾಗ್ರತೆ ವಹಿಸಲು ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರಿಗೆ ಸೂಚಿಸಲಾಗಿದೆ. ಮಕ್ಕಳನ್ನು ಶೌಚಾಲಯ ಸ್ವಚ್ಛತಾ ಕಾರ್ಯಗಳಿಗೆ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಆಹ್ವಾನಕ್ಕೆ ಕಾದಿರುವ ‘ಅತಿಥಿ’ಗಳು

ಮಂಗಳೂರು: ಬೇಸಿಗೆ ರಜೆ ಕಳೆದು ಹೊಸ ಶೈಕ್ಷಣಿಕ ವರ್ಷ ಆರಂಭಿಸಲು ಶಾಲೆಗಳು ಸಜ್ಜಾಗಿವೆ. ಇದೇ 29ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಈ ನಡುವೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗಾಗಿ ಆಹ್ವಾನವನ್ನು ನಿರೀಕ್ಷಿಸುತ್ತ ಸಾವಿರಾರು ಅತಿಥಿ ಶಿಕ್ಷಕರು ಕಾಯುತ್ತಿದ್ದಾರೆ.

ಪ್ರತಿ ವರ್ಷ ಶಾಲೆ ಆರಂಭವಾಗುವ ಸಂದರ್ಭದಲ್ಲಿ ಶಿಕ್ಷಕರ ಕೊರತೆಯ ಲೆಕ್ಕಹಾಕಿ ಪ್ರತಿ ಶೈಕ್ಷಣಿಕ ಜಿಲ್ಲೆಯಿಂದ ಶಿಕ್ಷಣ ಇಲಾಖೆಗೆ ಮಾಹಿತಿ ರವಾನಿಸಲಾಗುತ್ತಿದೆ. ಈ ಬಾರಿ ಈಗಾಗಲೇ ಮಾಹಿತಿ ಸಿಕ್ಕಿದ್ದರೂ ‘ಅತಿಥಿ’ ಶಿಕ್ಷಕರ ನೇಮಕಾತಿ ವಿಳಂಬ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ಬಾರಿ ತಡವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಪ್ರತಿ ವರ್ಷ ಒಂದಿಲ್ಲ ಒಂದು ಕಾರಣ ಹೇಳಿ ‘ಅತಿಥಿಗಳ ಆಹ್ವಾನ’ ವಿಳಂಬ ಮಾಡಲಾಗುತ್ತದೆ ಎಂಬುದು ಅತಿಥಿ ಶಿಕ್ಷಕರ ದೂರು.

‘ಕಳೆದ ಬಾರಿ ಎರಡು ತಿಂಗಳು ತಡವಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಎರಡು ತಿಂಗಳ ಬೇಸಿಗೆ ರಜೆಯೂ ಸೇರಿ ಒಟ್ಟು ನಾಲ್ಕು ತಿಂಗಳು ಸಂಪಾದನೆ ಇಲ್ಲದೇ ಕಾಲ ಕಳೆಯಬೇಕಾಯಿತು’ ಎಂದು ಕಳೆದ ವರ್ಷ ಅತಿಥಿ ಶಿಕ್ಷಕಿಯಾಗಿದ್ದವರೊಬ್ಬರು ಹೇಳಿದರು.

‘ನಮಗೆ ನೇಮಕಾತಿ ಪತ್ರ ಕೊಡುವುದಿಲ್ಲ. ಎರಡು–ಮೂರು ತಿಂಗಳಿಗೊಮ್ಮೆ ಸಂಭಾವನೆ ಕೊಡುತ್ತಾರೆ. ಬಿಡುವಿನ ಸಂದರ್ಭದಲ್ಲಿ ಬೇರೇನು ಕೆಲಸ ಮಾಡುವುದಕ್ಕೂ ಅವಕಾಶ ಇಲ್ಲ. ಶಾಲೆಯಲ್ಲೇ ಕುಳಿತಿರಬೇಕು ಎಂದು ಹೇಳುತ್ತಾರೆ. ಮುಂದಿನ ವರ್ಷ ಕೆಲಸ ಸಿಗುತ್ತದೆಯೋ ಇಲ್ಲವೋ ಎಂಬುದು ಖಾತರಿ ಇಲ್ಲ’ ಎಂದು ಆಹ್ವಾನಕ್ಕಾಗಿ ಕಾಯುತ್ತಿರುವ ಮತ್ತೊಬ್ಬರು ಹೇಳಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ 6ರಿಂದ 8ನೇ ತರಗತಿವರೆಗೆ ಖಾಲಿ ಇದ್ದ ಹುದ್ದೆಗಳ ಪೈಕಿ 413 ಶಿಕ್ಷಕರ ಹುದ್ದೆಗಳನ್ನು ಕಳೆದ ಬಾರಿ ಭರ್ತಿ ಮಾಡಲಾಗಿದೆ. ಈ ವರ್ಷ ಪ್ರಾಥಮಿಕ ಹಂತಕ್ಕೆ 1,079 ಮತ್ತು ಹೈಸ್ಕೂಲ್ ವಿಭಾಗದಲ್ಲಿ 249 ಶಿಕ್ಷಕರ ಅಗತ್ಯವಿದೆ’ ಎಂದು ಡಿಡಿಪಿಐ ವೆಂಕಟೇಶ್ ಪಟಗಾರ ತಿಳಿಸಿದರು.

ಮುಖ್ಯಾಂಶಗಳು:

  • ಬೇರೊಂದು ಶಾಲೆಗೆ ಸೇರುವ ಮಕ್ಕಳಿಗೆ ಒಂದು ವಾರದ ಒಳಗೆ ವರ್ಗಾವಣೆ ಪತ್ರ

  • ಖಾಸಗಿ ಶಾಲೆ ತೊರೆದು ಸರ್ಕಾರಿ, ಅನುದಾನಿತ ಶಾಲೆಗೆ ಸೇರುವ ಮಕ್ಕಳಿಗೆ ಸರ್ಕಾರದ ಅಭಯ 

  • ಹೊಸ ಪೋಷಕರನ್ನು ಒಳಗೊಂಡ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪುನರ್‌ರಚನೆಗೆ ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT