ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಭಾಪುರಿಶ್ರೀ ಎದುರು ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಧರ್ಮ ವಿಭಜನೆ ಕುರಿತ ಹೇಳಿಕೆ
Last Updated 21 ಆಗಸ್ಟ್ 2022, 4:56 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾಮೀಜಿ ಎದುರು ಯಾವ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ. ಆಗ ಏನೇನು ನಡೆಯಿತು ಎಂಬುದನ್ನಷ್ಟೇ ಹೇಳಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಹಿಂದೂ ಧರ್ಮ ಒಡೆಯುವ ಪ್ರಯತ್ನ ನಡೆಸಿದ್ದಕ್ಕಾಗಿ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದರು’ ಎಂಬ ರಂಭಾಪುರಿ ಮಠದ ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, ‘ಧರ್ಮ ಒಡೆಯುವ ಉದ್ದೇಶ ನಮಗೆ ಇರಲಿಲ್ಲ. ಶಾಮನೂರು ಶಿವಶಂಕರಪ್ಪ, ಮಾತೆ ಮಹಾದೇವಿ ಪತ್ರ ನೀಡಿ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಕೋರಿದ್ದರು. ಆ ಬಳಿಕ ಏನೇನು ಆಯಿತು ಎಂಬುದನ್ನು ಸ್ವಾಮೀಜಿಗೆ ವಿವರಿಸಿದ್ದೆ ಅಷ್ಟೆ’ ಎಂದರು.

ನಾಗಮೋಹನದಾಸ್‌ ಸಮಿತಿ ವರದಿ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದ ವಿಚಾರದ ಹಿಂದೆ ಯಾವ ಧರ್ಮ ಒಡೆಯುವ ಉದ್ದೇಶವೂ ಇರಲಿಲ್ಲ ಎಂಬುದನ್ನು ಅವರಿಗೆ ತಿಳಿಸಲಾಗಿದೆ. ನೋವು ತೋಡಿಕೊಂಡಿದ್ದು, ಪಶ್ಚಾತ್ತಾಪ ವ್ಯಕ್ತಪಡಿಸಿದ್ದು ಏನೂ ಆಗಿಲ್ಲ ಎಂದು ಹೇಳಿದರು.

‘ಪಶ್ಚಾತ್ತಾಪದ ಕುರಿತ ಸ್ವಾಮೀಜಿ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಇದರಲ್ಲಿ ಯಾವ ವಿವಾದವೂ ಇಲ್ಲ. ನೀವೇ ವಿವಾದ ಸೃಷ್ಟಿಸುತ್ತಿದ್ದೀರಿ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಸ್ವಾಮೀಜಿ ಹೇಳಿಕೆ ಬಳಿಕ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ. ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಆದರೆ, ಆ ಸಂದರ್ಭದಲ್ಲಿ ಏನು ನಡೆಯಿತು ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಸಿದ್ದರಾಮಯ್ಯ ಕುರಿತ ಸ್ವಾಮೀಜಿ ಹೇಳಿಕೆ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಅವರ ಸ್ವಭಾವ ಏನು ಎಂಬುದು ಎಲ್ಲರಿಗೂ ಗೊತ್ತಿದೆ.

- ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಶಾಸಕ

ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾದ 12 ಗಂಟೆಗಳ ಒಳಗೆ ಸಿದ್ದರಾಮಯ್ಯ ‘ಯೂ ಟರ್ನ್‌’ ಹೊಡೆದಿದ್ದಾರೆ. ಮುಂದೆ ಯಾವ ‘ಟರ್ನ್‌’ ಹೊಡೆಯುತ್ತಾರೋ ಕಾದು ನೋಡಬೇಕಿದೆ.

- ಸಿ.ಸಿ. ಪಾಟೀಲ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT