ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ‘ಪೇಮೆಂಟ್ ಸೀಟುಗಳು’ ಕೇವಲ ಸಿಎಂ ಕುರ್ಚಿಗಷ್ಟೇ ಸೀಮಿತವಲ್ಲ: ಸಿದ್ದರಾಮಯ್ಯ

ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯ ‘ಪೇಮೆಂಟ್ ಸೀಟುಗಳು’ ಕೇವಲ ಮುಖ್ಯಮಂತ್ರಿ ಕುರ್ಚಿಗಷ್ಟೇ ಸೀಮಿತವಲ್ಲ. ಸಚಿವ ಸ್ಥಾನಗಳನ್ನೂ ಇದೇ ರೀತಿ ಹರಾಜು ಕೂಗಲಾಗಿದೆ ಎನ್ನುವ ಆರೋಪ ಇದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

‘ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ₹2,500 ಕೋಟಿಗೆ ಬೇಡಿಕೆ ಇಟ್ಟಿದ್ದರು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫೇಸ್‌ಬುಕ್ ಪುಟದಲ್ಲಿಯೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

‘ತಮ್ಮನ್ನು ಮುಖ್ಯಮಂತ್ರಿ ಮಾಡಲು ದೆಹಲಿಯವರು ₹2,500 ಕೋಟಿ ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಸೂಕ್ತ ತನಿಖೆಯಿಂದ ಮಾತ್ರ ಇದರ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲು ಸಾಧ್ಯ. ಯತ್ನಾಳ್ ಆರೋಪದ ಬಗ್ಗೆ ತನಿಖೆ ನಡೆಸದೇ ಇದ್ದರೆ ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ರೂಪಾಯಿ ತೆತ್ತು ಮುಖ್ಯಮಂತ್ರಿಯಾಗಿರುವುದನ್ನು ಬಸವರಾಜ ಬೊಮ್ಮಾಯಿ ಅವರೇ ಒಪ್ಪಿಕೊಂಡಂತಾಗುತ್ತದೆ. ಅದರ ನಂತರ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವ ಯಾವ ನೈತಿಕತೆ ಇರುವುದಿಲ್ಲ’ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

‘ಯತ್ನಾಳ ಅವರು ಮಾತನಾಡುತ್ತಿರುವುದನ್ನು ಕೇಳಿದರೆ ಅವರ ಬಳಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅಗಾಧವಾದ ಮಾಹಿತಿ ಇದ್ದಂತೆ ಕಾಣುತ್ತಿದೆ. ಅವರನ್ನು ವಿಚಾರಣೆ ನಡೆಸಿ ಆ ಮಾಹಿತಿಯನ್ನು ಪಡೆದರೆ ತನಿಖೆಯೂ ಸಲೀಸಾಗುತ್ತದೆ, ಸತ್ಯವೂ ಹೊರಬರುತ್ತದೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಆಯ್ಕೆ ಮಾಡುತ್ತದೆ ಎಂದು ಜನ ತಿಳಿದುಕೊಂಡಿದ್ದರು. ಇದು ಹರಾಜಿನ ಮೂಲಕ ಮಾರಾಟವಾಗುವ ‘ಪೇಮೆಂಟ್ ಸೀಟು’ ಎನ್ನುವುದು ಶಾಸಕ ಯತ್ನಾಳ ಆರೋಪದಿಂದ ಬಯಲಾಗಿದೆ. ಈ ಸೀಟಿಗಾಗಿ ಹಿಂದಿನ ಮತ್ತು ಈಗಿನ ಮುಖ್ಯಮಂತ್ರಿಗಳು ಎಷ್ಟು ದುಡ್ಡು ಕೊಟ್ಟಿದ್ದಾರೆ ಎನ್ನುವುದೂ ಬಹಿರಂಗವಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಈ ‘ಪೇಮೆಂಟ್ ಸೀಟುಗಳು’ ಕೇವಲ ಮುಖ್ಯಮಂತ್ರಿ ಕುರ್ಚಿಗೆ ಸೀಮಿತವಾಗಿಲ್ಲ, ಸಚಿವ ಸ್ಥಾನಗಳನ್ನೂ ಈ ರೀತಿ ಹರಾಜು ಕೂಗಲಾಗಿದೆ ಎನ್ನುವ ಆರೋಪ ಇದೆ. ಬಿಜೆಪಿಗೆ ಪಕ್ಷಾಂತರ ಮಾಡಿದ ಶಾಸಕರು ಯಾರಿಗೆ ಮತ್ತು ಎಷ್ಟು ದುಡ್ಡು ಸಂದಾಯ ಮಾಡಿದ್ದಾರೆ ಎನ್ನುವುದೂ ತನಿಖೆಯಾಗಬೇಕು. ಗುತ್ತಿಗೆದಾರರಿಂದ ಶೇ 40 ಕಮಿಷನ್ ವಸೂಲಿ, ಪಿಎಸ್ಐ ಮತ್ತಿತರ ಹುದ್ದೆಗಳ ನೇಮಕದ ಅಕ್ರಮ ವ್ಯವಹಾರ, ಆರೋಗ್ಯ ಇಲಾಖೆಯ ಭ್ರಷ್ಟಾಚಾರವೂ ಸೇರಿದಂತೆ ಎಲ್ಲ ಹಗರಣಗಳಿಗೂ ಯತ್ನಾಳ್‌ ಮಾಡಿರುವ ಆರೋಪಕ್ಕೂ ನೇರವಾದ ಸಂಬಂಧ ಇದೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಮುಖ್ಯಮಂತ್ರಿ ಮತ್ತು ಸಚಿವರಾಗಲು ಪೇಮೆಂಟ್ ಮಾಡಿದವರು ಅದರ ವಸೂಲಿಗಾಗಿಯೇ ಈಗ ಕಮಿಷನ್ ದಂಧೆ ಮತ್ತು ಅಕ್ರಮ ವ್ಯವಹಾರಕ್ಕೆ ಇಳಿದಿದ್ದಾರೆ. ಇದರಿಂದ ಒಬ್ಬ ಅಮಾಯಕ ಗುತ್ತಿಗೆದಾರ ಜೀವ ಕಳೆದುಕೊಂಡ, ಸಾವಿರಾರು ಅಮಾಯಕ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳು ಭವಿಷ್ಯ ಕಳೆದುಕೊಂಡರು. ಬಸವನಗೌಡ ಪಾಟೀಲ್ ಯತ್ನಾಳ ಆರೋಪ ಹೊಸದೇನಲ್ಲ. ಕಳೆದ ಎರಡು ವರ್ಷಗಳಿಂದ ಇವರು ತಮ್ಮದೇ ಪಕ್ಷದ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮೌನವಾಗಿರುವುದು ಸಮ್ಮತಿಯ ಸೂಚನೆಯೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT