ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌–ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

Published 26 ಮೇ 2024, 23:53 IST
Last Updated 26 ಮೇ 2024, 23:53 IST
ಅಕ್ಷರ ಗಾತ್ರ

ಮಂಗಳೂರು: ನೈರುತ್ಯ ಶಿಕ್ಷಕರ ವಿಧಾನ ಪರಿಷತ್‌ ಕ್ಷೇತ್ರವು ಕರಾವಳಿ, ಮಲೆನಾಡು, ಬಯಲು ಸೀಮೆಯನ್ನು ಒಳಗೊಂಡಿರುವ ವಿಶಾಲ ಕ್ಷೇತ್ರ. ಶಾಲೆಗಳಿಗೆ ರಜೆ ಕಾರಣ ಮತದಾರರ ಖುದ್ದು ಭೇಟಿಯೇ ಎಲ್ಲ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜೆಡಿಎಸ್‌– ಬಿಜೆಪಿ ಮೈತ್ರಿ ಇಲ್ಲಿಯೂ ಮುಂದುವರೆದಿದೆ. ವಿಧಾನ ಪರಿಷತ್‌ ಹಾಲಿ ಸದಸ್ಯ ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕೆ.ಕೆ. ಮಂಜುನಾಥ ಕುಮಾರ್‌ ಕಾಂಗ್ರೆಸ್‌ನಿಂದ ಎರಡನೇ ಬಾರಿ ಸ್ಪರ್ಧಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಾಗೂ ‘ಸಹಕಾರ ಭಾರತಿ’ಯಲ್ಲಿ ಕೆಲಸ ಮಾಡಿರುವ ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ನ ಮಾಜಿ ಸದಸ್ಯ ಎಸ್‌.ಆರ್‌. ಹರೀಶ್‌ ಆಚಾರ್‌ ಇಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಬಿ.ಆರ್‌. ನಂಜೇಶ್‌ ಅವರನ್ನು ಆ ಪಕ್ಷ ಉಚ್ಚಾಟನೆ ಮಾಡಿದೆ.

1988ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಫರ್ನಾಂಡಿಸ್‌ ಗೆಲುವು ಸಾಧಿಸಿದ್ದರು. ಆ ನಂತರ ಈ ಕ್ಷೇತ್ರ ಬಿಜೆಪಿ ತೆಕ್ಕೆಗೆ ಜಾರಿತ್ತು. ಬಾಲಕೃಷ್ಣ ಭಟ್ ಮತ್ತು ಕ್ಯಾ.ಗಣೇಶ್‌ ಕಾರ್ಣಿಕ್ ಕ್ರಮವಾಗಿ ತಲಾ ಎರಡು ಬಾರಿ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ.ಗಣೇಶ್‌ ಕಾರ್ಣಿಕ್‌ ಅವರನ್ನು ಮಣಿಸಿ, ಜೆಡಿಎಸ್‌ ಇಲ್ಲಿ ಮೊದಲ ಬಾರಿ ವಿಜಯ ಸಾಧಿಸಿತು.

ಚಿಕ್ಕಮಗಳೂರಿನ ಭೋಜೇಗೌಡ, ಕೊಡಗಿನ ಮಂಜುನಾಥ್‌ ಕುಮಾರ್‌ ಇಬ್ಬರೂ ಒಕ್ಕಲಿಗರು. ಮಂಗಳೂರಿನ ಹರೀಶ್‌ ಆಚಾರ್ಯ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರು. ಅರ್ಧಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಉಡುಪಿ–ದಕ್ಷಿಣ ಕನ್ನಡ ಜಿಲ್ಲೆಗಳ (ಶೇ 52) ಮತದಾರರೇ ನಿರ್ಣಾಯಕ. ಕ್ಷೇತ್ರದಲ್ಲಿ ಶಾಸಕರ ಬಲಾಬಲದ ಲೆಕ್ಕ ನೋಡುವುದಾದರೆ ಜೆಡಿಎಸ್‌–1, ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 14 ಶಾಸಕರನ್ನು ಹೊಂದಿವೆ.

ಕೊಡಗಿನ ಕೂಡ್ಲೂರು ಗ್ರಾಮದ ಕೆ.ಕೆ. ಮಂಜುನಾಥ ಕುಮಾರ್‌, ಪ್ರೌಢಶಾಲಾ ಶಿಕ್ಷಕರಾಗಿದ್ದರು. ಶಿಕ್ಷಕರ ಸಂಘಟನೆ, ಸರ್ಕಾರಿ ನೌಕರರ ಸಂಘಟನೆಯಲ್ಲಿ ತೊಡಗಿದ್ದವರು. 2012ರ ಚುನಾವಣೆ ಯಲ್ಲಿ ಪಕ್ಷೇತರರಾಗಿ, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಪರಿಷತ್‌ ಚುನಾವಣೆ ಮೇಲೆ ಕಣ್ಣಿಟ್ಟು ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಅವರ ಬಲ ಹೆಚ್ಚಿಸಿದೆ.

ಎಸ್‌.ಎಲ್‌. ಭೋಜೇಗೌಡ 2012ರಲ್ಲಿ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2018ರ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಉಭಯ ಪಕ್ಷಗಳು ಆಗಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಹೀಗಾಗಿ ಈ ಚುನಾವಣೆಯಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮಧ್ಯೆ ಮೈತ್ರಿ ಇರಲಿಲ್ಲ. ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ಬಲದಿಂದಾಗಿ ಭೋಜೇಗೌಡ ಗೆದ್ದಿದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನು ಭೋಜೇಗೌಡರು ಹಠಕ್ಕೆ ಬಿದ್ದು ಸೋಲಿಸಿರುವ ಒಳಬೇಗುದಿ ಆ ಜಿಲ್ಲೆಯಲ್ಲಿದೆ. ಕರಾವಳಿ ಭಾಗದವರಿಗೆ ಈ ಬಾರಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮೇಲಾಗಿ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರನ್ನು ಸೋಲಿಸಿರುವ ಅಸಮಾಧಾನವೂ ಬಿಜೆಪಿಗರಲ್ಲಿದೆ. ಹೀಗಾಗಿ ಬಿಜೆಪಿ ಬೆಂಬಲಿಗರು ಜೆಡಿಎಸ್‌ಗೆ ಮತ ನೀಡಲಿಕ್ಕಿಲ್ಲ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ. ಆದರೆ, ಈ ವಾದವನ್ನು ಭೋಜೇಗೌಡ ಒಪ್ಪುವುದಿಲ್ಲ; ವಿಧಾನಸಭೆ ಚುನಾವಣೆಯೇ ಬೇರೆ. ಇದೇ ಬೇರೆ. ‘ಸಿ.ಟಿ.ರವಿ ಅವರಿಗೂ ನನ್ನ ಚುನಾವಣೆಯ ಜವಾಬ್ದಾರಿಯನ್ನು ಬಿಜೆಪಿ ನೀಡಿದೆ. ಅದನ್ನು ಅವರು ಹೇಗೆ ನಿರ್ವಹಿಸದೇ ಇರಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ. ಇನ್ನು ಹರೀಶ್‌ ಆಚಾರ್ಯ ಕರಾವಳಿ ಮತದಾರರನ್ನೇ ನೆಚ್ಚಿಕೊಂಡಿದ್ದಾರೆ.

ಕಣದಲ್ಲಿ ಎಂಟು ಅಭ್ಯರ್ಥಿಗಳಿದ್ದರೂ, ಮೇಲ್ನೋಟಕ್ಕೆ ಮೈತ್ರಿ ಅಭ್ಯರ್ಥಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಕಂಡುಬರುತ್ತಿದೆ. ಬಿಜೆಪಿ ಬೆಂಬಲ ಸಿಕ್ಕರೆ ಭೋಜೇಗೌಡರ ಹಾದಿ ಸುಗಮವಾಗಬಹುದು. ಒಳಏಟು ಬಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ಮೊದಲ ಬಾರಿಗೆ ವಿಜಯ ದಕ್ಕಬಹುದು.

ಕಣದಲ್ಲಿರುವ ಇತರೆ ಅಭ್ಯರ್ಥಿಗಳು: ಭಾಸ್ಕರ್‌ ಶೆಟ್ಟಿ, ನರೇಶ್ ಹೆಗಡೆ, ಅರುಣ್ ಎಚ್‌.ಡಿ., ಬಿ.ಆರ್. ನಂಜೇಶ್, ಮಂಜುನಾಥ್‌ ಕೆ.ಕೆ. (ಎಲ್ಲರೂ ಪಕ್ಷೇತರ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT