ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಕಿಯರಿಗೆ ಸಲಾಂ: ಸೊಸೆ ತಂದ ಸೌಭಾಗ್ಯ; ಬದುಕು ಬಂಗಾರವಾಗಿಸಿದ ಶಿವಮ್ಮ

Last Updated 15 ಅಕ್ಟೋಬರ್ 2018, 1:49 IST
ಅಕ್ಷರ ಗಾತ್ರ

ಕೋಲಾರ:ಕೋಲಾರಜಿಲ್ಲೆಶ್ರೀನಿವಾಸಪುರ ತಾಲ್ಲೂಕು ದಿಂಬಾಲ ಗ್ರಾಮದ ರೈತ ಮಹಿಳೆ ಕೆ.ಎನ್‌.ಶಿವಮ್ಮ ಸಾವಯವ ಕೃಷಿ ಪದ್ಧತಿ ಅನುಸರಿಸಿ ಅಧಿಕ ಇಳುವರಿ ಪಡೆಯುವ ಮೂಲಕ ಕೃಷಿಕ ಸಮುದಾಯದ ಗಮನ ಸೆಳೆದಿದ್ದಾರೆ. ಹಿಂದಿನ ವರ್ಷ ಗುಣಿ ಪದ್ಧತಿಯಲ್ಲಿ ಎಕರೆಗೆ 34 ಕ್ವಿಂಟಾಲ್‌ ರಾಗಿ ಬೆಳೆದು ಜಿಲ್ಲಾ ಮಟ್ಟದ ‘ಉತ್ತಮ ಕೃಷಿಕ ಮಹಿಳೆ’ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಕೃಷಿಕರಿಗೆ ಮಾದರಿಯಾಗಿದ್ದಾರೆ.

ಪಿಯುಸಿ ಓದಿರುವ ಶಿವಮ್ಮ 13 ವರ್ಷಗಳ ಹಿಂದೆ ದಿಂಬಾಲ ಗ್ರಾಮದ ಅವಿಭಕ್ತ ರೈತ ಕುಟುಂಬಕ್ಕೆ ಸೊಸೆಯಾಗಿ ಬಂದಾಗ ಸಾಂಪ್ರದಾಯಿಕ ಕೃಷಿ ಚಾಲ್ತಿಯಲ್ಲಿತ್ತು. 25 ಎಕರೆಯಲ್ಲಿ ಮನೆ ಮಂದಿಯೆಲ್ಲಾ ದುಡಿದರೂ ಇಳುವರಿ ಹೇಳಿಕೊಳ್ಳುವಂತೆ ಇರಲಿಲ್ಲ. ಟೊಮೆಟೊ ಪ್ರಮುಖ ಬೆಳೆಯಾಗಿತ್ತು. ಬೆಲೆ ಏರಿಳಿತದ ನಡುವೆ ಕುಟುಂಬದ ಆರ್ಥಿಕ ಸ್ಥಿತಿ ಕುಂಟುತ್ತಾ ಸಾಗಿತ್ತು.

ಕುಟುಂಬದ ಕೃಷಿ ಪದ್ಧತಿ ಅವಲೋಕಿಸಿದ ಶಿವಮ್ಮ, ಪತಿ ಡಿ.ಎನ್‌.ರವಿ ಹಾಗೂ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಬೆಳೆ ಪದ್ಧತಿ ಬದಲಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಕೃಷಿ ನಿರ್ವಹಣೆ ಮಾಡಲು ನಿರ್ಧರಿಸಿದರು. ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಜೋತು ಬಿದ್ದಿದ್ದ ಕುಟುಂಬದಲ್ಲಿ ವೈಜ್ಞಾನಿಕ ಚಿಂತನೆಯ ಗಾಳಿ ಬೀಸಿತು.

ಮೊದಲು ದುಬಾರಿ ಬೆಲೆಯ ರಾಸಾಯನಿಕ ಗೊಬ್ಬರಗಳ ಬಳಕೆ ತಗ್ಗಿಸಿ ಸಾವಯವ ಗೊಬ್ಬರದ ಬಳಕೆ ಹೆಚ್ಚಿಸಿದರು. ಗೊಬ್ಬರಕ್ಕಾಗಿ ಹಸು, ಎಮ್ಮೆ, ಕುರಿ ಸಾಕ ತೊಡಗಿದರು. ಟೊಮೆಟೊ ಜತೆಗೆ ಇತರ ತರಕಾರಿ ಬೆಳೆದರು. ಬಹುಬೆಳೆ ಪದ್ಧತಿ ಅನುಸರಿಸಿದರು. ಹೀಗಾಗಿ ಬೆಲೆ ಕುಸಿತದ ಭೂತದಿಂದ ಮುಕ್ತಿ ಸಿಕ್ಕಿತು. ಒಂದು ಬೆಳೆಯ ಬೆಲೆ ಕುಸಿದರೂ ಇತರ ಬೆಳೆಗಳು ಲಾಭ ತಂದುಕೊಟ್ಟವು.

ನೀರಿನ ಸದ್ಬಳಕೆ: ಕೃಷಿ ಹೊಂಡ ನಿರ್ಮಿಸಿ ಮಳೆ ನೀರಿನ ಜತೆಗೆ ಕೊಳವೆ ಬಾವಿ ನೀರು ಶೇಖರಿಸಿ, ಹನಿ ನೀರಾವರಿ ಹಾಗೂ ರೈನ್‌ ಟ್ಯೂಬ್‌ ಮೂಲಕ ಬೆಳೆಗಳಿಗೆ ನೀರುಣಿಸ ತೊಡಗಿದರು. ಇದರಿಂದ ನೀರು ಪೋಲಾಗುವುದು ತಪ್ಪಿತು ಮತ್ತು ಲಭ್ಯ ನೀರಿನಲ್ಲಿ ಹೆಚ್ಚು ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಯಿತು. ಹನಿ ನೀರಾವರಿಯಲ್ಲಿ ಆಲೂಗಡ್ಡೆ ಬೆಳೆದು ಗ್ರಾಮದ ರೈತರು ಹುಬ್ಬೇರಿಸುವಂತೆ ಮಾಡಿದರು.

ಕೀಟಬಾಧೆಗೆ ಮಾರ್ಗೋಪಾಯ: ಬೆಳೆಗಳಲ್ಲಿ ಕೀಟಬಾಧೆ ತಡೆಗೆ ಬೇವಿನ ಎಣ್ಣೆ ಬಳಸುವ ಮೂಲಕ ದುಬಾರಿ ಬೆಲೆಯ ಕಂಪನಿ ಕೀಟನಾಶಕಗಳನ್ನು ದೂರವಿಟ್ಟಿದ್ದಾರೆ. ಊಜಿ ನೊಣದ ಹಾವಳಿ ತಡೆಗೆ ಮೋಹಕ ಬಲೆ ಬಳಸುತ್ತಿದ್ದಾರೆ. ಟೊಮೆಟೊ, ಹೀರೇಕಾಯಿ ಬೆಳೆ ನಡುವೆ ಚೆಂಡು ಹೂ ಬೆಳೆದು ಹುಳು ಬಾಧೆ ತಡೆಗೆ ಮಾರ್ಗೋಪಾಯ ಕಂಡುಕೊಂಡಿದ್ದಾರೆ.

ಕಳೆ ಗಿಡಗಳನ್ನು ಕತ್ತರಿಸಿ ಮಣ್ಣಿಗೆ ಸೇರಿಸಿ, ಭೂಮಿಯ ಫಲವತ್ತತೆ ಹೆಚ್ಚಿಸಲಾಗುತ್ತಿದೆ. ಟೊಮೆಟೊ, ಕೋಸು, ಕ್ಯಾರೆಟ್‌ ಬೆಳೆಗಳನ್ನು ಬೇರೆ ಬೇರೆ ತಾಕುಗಳಲ್ಲಿ ಬೆಳೆಯಲಾಗುತ್ತಿದೆ. ಆದ್ಯತೆ ಮೇರೆಗೆ ಪಪ್ಪಾಯ ಬೆಳೆದಿದ್ದಾರೆ. ಪಪ್ಪಾಯ ಮರಗಳ ನಡುವೆ ಅವರೆ, ಆಲೂಗಡ್ಡೆ ತೋಟದಲ್ಲಿ ಪಪ್ಪಾಯ, ಮಾವಿನ ಗಿಡಗಳ ಮಧ್ಯೆ ಹಲವು ಬೆಳೆ ಬೆಳೆದು ಲಾಭ ಪಡೆಯುತ್ತಿದ್ದಾರೆ.

ಸಾಗಣೆ ಶ್ರಮವಿಲ್ಲ: ಇವರ ತೋಟದ ಹೂವು, ಹಣ್ಣು ಹಾಗೂ ತರಕಾರಿ ಗುಣಮಟ್ಟ ಚೆನ್ನಾಗಿರುವ ಕಾರಣ ಸಗಟು ವ್ಯಾಪಾರಿಗಳು ತೋಟಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಾರೆ. ಇದರಿಂದ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸುವ ಶ್ರಮ ತಪ್ಪಿದೆ ಮತ್ತು ಸಾಗಣೆ ವೆಚ್ಚ ಸಹ ಉಳಿಯುತ್ತಿದೆ. ವಿದ್ಯುತ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೊಳವೆ ಬಾವಿ ಪಂಪ್‌ಸೆಟ್‌ಗೆ ಸೌರ ವಿದ್ಯುತ್‌ ಬಳಸಲು ಯೋಜಿಸಿದ್ದಾರೆ. ಕೃಷಿ ಸಮಸ್ಯೆ ಹೊತ್ತು ಬರುವ ಸಹ ಕೃಷಿಕರಿಗೆ ಶಿವಮ್ಮ ಸಲಹೆ, ಸೂಚನೆ ನೀಡುತ್ತಾರೆ.

ಗೆಲುವಿನ ಗುಟ್ಟು: ‘ಕಾಲಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು. ಬೆಳೆಯನ್ನು ಕಣ್ಣಿಟ್ಟು ಕಾಯಬೇಕು. ಹಾಗೆ ಮಾಡಿದ್ದರಿಂದಲೇ ನಾವು ಕೃಷಿಯಲ್ಲಿ ನಷ್ಟ ಅನುಭವಿಸಿಲ್ಲ. ಸಾಲ ಮಾಡುವ ಸಂದರ್ಭ ಬಂದಿಲ್ಲ’ ಎನ್ನುತ್ತಾರೆ ಶಿವಮ್ಮ.

‘ಮನೆ ಗಂಡಸರು ವಿನಾಕಾರಣ ಪೇಟೆ ಸುತ್ತಲು ಹೋಗದೆ, ಮನೆ ಮಂದಿ ಬದುವಿನ ಮೇಲೆ ಕೂರದೆ ಕೃಷಿ ಕಾರ್ಮಿಕರ ಜತೆ ಶ್ರಮ ವಹಿಸಿ ದುಡಿಯುವುದು ನಮ್ಮ ಕೃಷಿಯ ಗೆಲುವಿನ ಗುಟ್ಟು’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಶಿವಮ್ಮ ಸೊಸೆಯಾಗಿ ಬಂದ ಮೇಲೆ ‘ಹಸಿರು ಹೊನ್ನು’ ಪದದ ನಿಜವಾದ ಅರ್ಥ ತಿಳಿಯಿತು, ನಮ್ಮ ಬದುಕು ಬಂಗಾರವಾಯಿತು‘ ಎನ್ನುತ್ತಾರೆ ಮಾವ ಶಿವಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT