ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ನಿಧಿ; ಶೇ 40ರಷ್ಟು ಇಲಾಖೆ ಮೂಲಕ ವೆಚ್ಚ: ಸಚಿವ ಮಹದೇವಪ್ಪ

ಏಕಗವಾಕ್ಷಿ ಮೂಲಕ ನೇರವಾಗಿ ಖರ್ಚು: ಮಹದೇವಪ್ಪ
Published 21 ಫೆಬ್ರುವರಿ 2024, 16:05 IST
Last Updated 21 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆ (ಟಿಎಸ್‌ಪಿ) ನಿಗದಿಪಡಿಸಿರುವ ₹ 39,121 ಕೋಟಿಯಲ್ಲಿ ಶೇಕಡ 40ರಷ್ಟನ್ನು ಸಮಾಜ ಕಲ್ಯಾಣ ಇಲಾಖೆಯ ಏಕಗವಾಕ್ಷಿ ಮೂಲಕ ನೇರವಾಗಿ ವೆಚ್ಚ ಮಾಡಲು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ತಿಳಿಸಿದರು.

ಕಾಂಗ್ರೆಸ್‌ನ ರೂಪಕಲಾ ಎಂ. ಅವರ ಪ್ರಶ್ನೆಗೆ ವಿಧಾನಸಭೆಯಲ್ಲಿ ಬುಧವಾರ ಉತ್ತರಿಸಿದ ಸಚಿವರು, ‘ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಒದಗಿಸಿರುವ ಮೊತ್ತ 36 ಇಲಾಖೆಗಳಿಗೆ ಹಂಚಿಕೆಯಾಗುತ್ತದೆ. ನೇರವಾಗಿ ಪರಿಶಿಷ್ಟರ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ’ ಎಂದರು.

‘ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಶೇ 60ರಷ್ಟನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ, ಶೇ 40ರಷ್ಟನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನೇರವಾಗಿ ವೆಚ್ಚ ಮಾಡಲು ಅನುಮತಿ ಕೋರಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಅನುಮತಿ ಸಿಕ್ಕರೆ, ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಏಕಗವಾಕ್ಷಿ ಮೂಲಕ ಅನುಷ್ಠಾನಕ್ಕೆ ತರುತ್ತೇವೆ.’ ಎಂದು ತಿಳಿಸಿದರು.

‘ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು 2019–20 ಮತ್ತು 2020–21ನೇ ಸಾಲಿನಲ್ಲಿ ಆಯ್ಕೆಮಾಡಿದ್ದ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ. ನಂತರ ಆಯ್ಕೆಯಾದ ಫಲಾನುಭವಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ’ ಎಂದು ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.

‘ಗುತ್ತಿಗೆದಾರರ ಆಯ್ಕೆ ಪ್ರಕ್ರಿಯೆಯಲ್ಲಿನ ಲೋಪಗಳ ಕಾರಣದಿಂದ ವಿಳಂಬವಾಗಿದೆ. ಈಗ ಅದೇ ಗುತ್ತಿಗೆದಾರರು ಕೆಲಸ ಮುಂದುವರಿಸಲು ಹೈಕೋರ್ಟ್‌ ಆದೇಶಿಸಿದೆ. ಶೀಘ್ರದಲ್ಲಿ ಎಲ್ಲ ಫಲಾನುಭವಿಗಳ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಲಾಗುವುದು’ ಎಂದು ಮಹದೇವಪ್ಪ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT