ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೈರಪ್ಪ ಪಾಪಿನಾ? ‘ಪರ್ವ’ಕ್ಕಾಗಿ ಚಂದಾ ಎತ್ತುವೆ: ಸಿ.ಕಾರ್ಯಪ್ಪ

ಮೈಸೂರು ರಂಗಾಯಣ ನಿರ್ದೇಶಕ ಹೇಳಿಕೆ
Last Updated 28 ಡಿಸೆಂಬರ್ 2020, 20:36 IST
ಅಕ್ಷರ ಗಾತ್ರ

ಮೈಸೂರು: ‘ಮಲೆಗಳಲ್ಲಿ ಮದುಮಗಳು, ಶ್ರೀರಾಮಾಯಣ ದರ್ಶನಂ ಕಾದಂಬರಿಯನ್ನು ನಾಟಕವಾಗಿ ಪ್ರದರ್ಶಿಸಲು ಅನುದಾನ ಸಿಕ್ಕಿತ್ತು. ಆದರೆ, ಎಸ್‌.ಎಲ್‌.ಭೈರಪ್ಪ ರಚಿತ ಪರ್ವ ಕಾದಂಬರಿಯ ನಾಟಕಕ್ಕೆ ಸರ್ಕಾರ ದುಡ್ಡು ಕೊಡ್ತಿಲ್ಲ. ಭೈರಪ್ಪ ಏನು ಪಾಪಿಯಾ?’ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸೋಮವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘₹ 50 ಲಕ್ಷದ ಬಜೆಟ್‌ ರೂಪಿಸಿದ್ದೇವೆ. ರಂಗಾಯಣದ ಅನುದಾನದಲ್ಲೇ ₹ 10 ಲಕ್ಷ ತೆಗೆದಿಟ್ಟಿದ್ದೇವೆ. ತಾಲೀಮು ಬಿರುಸಿನಿಂದ ನಡೆದಿದೆ. ಫೆಬ್ರುವರಿ ಅಂತ್ಯದಲ್ಲಿ ‘ಪರ್ವ’ ರಂಗದಲ್ಲಿ ಪ್ರದರ್ಶನಗೊಳ್ಳಲಿದೆ. ಸರ್ಕಾರ ಅನುದಾನ ಕೊಡದಿದ್ದರೆ ಭೈರಪ್ಪಅವರ ಅಪಾರ ಅಭಿಮಾನಿ ಬಳಗದ ಬಳಿಯೇ ಚಂದಾ ಎತ್ತಿ, ನಾಟಕ ಪ್ರದರ್ಶಿಸುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

‘ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ವಾರಕ್ಕೆ ಮೂರು ಬಾರಿ, ದಿನ ಬಿಟ್ಟು ದಿನ ಪ್ರದರ್ಶನ ನೀಡಲಿದ್ದೇವೆ. ಹಗಲು ವೇಳೆಯೇ ಪ್ರದರ್ಶನದ ಚಿಂತನೆ ನಡೆದಿದೆ. 7 ಗಂಟೆಯ ಅವಧಿ ‘ಪರ್ವ’ ರಂಗದಲ್ಲಿ ಪ್ರದರ್ಶನಗೊಳ್ಳಲಿದ್ದು, ಇದರ ನಡುವೆ ಉಪಾಹಾರ ಹಾಗೂ ಚಹಾವಿರಾಮ ಇರಲಿದೆ’ ಎಂದು ಹೇಳಿದರು.

‘ಪರ್ವ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯು ರಷ್ಯನ್‌, ಚೀನಿ ಭಾಷೆಗೂ ಭಾಷಾಂತರಿಸಿದೆ. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಜನವರಿಯಲ್ಲಿ ಈ ಬಗ್ಗೆ ವಿಚಾರ ಸಂಕಿರಣ ನಡೆಸಲಾಗುವುದು. ಇದೇ ಸಂದರ್ಭದಲ್ಲಿಬಿಡುಗಡೆಗಾಗಿ ಚಂದ್ರಶೇಖರ ಕಂಬಾರ ಜೊತೆ ಚರ್ಚಿಸಲಾಗುವುದು’ ಎಂದು ಕಾರ್ಯಪ್ಪ ತಿಳಿಸಿದರು.

‘ಸರ್ಕಾರದೊಟ್ಟಿಗೆ ಸಂಘರ್ಷಕ್ಕೆ ಇಳಿಯಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋವಿಡ್‌ನಿಂದ ಈ ವರ್ಷ ಯಾವುದೇ ಚಟುವಟಿಕೆ ನಡೆಸಿಲ್ಲ. ಅನುದಾನವನ್ನು ಖಜಾನೆಗೆ ವಾಪಸ್‌ ಕಳುಹಿಸುವ ಬದಲು ನಮಗೆ ಕೊಡಲಿ ಎಂದು ಕೋರಿದ್ದೇವೆ. ಇಲಾಖೆ ಮನಸ್ಸು ಮಾಡಬೇಕಿದೆಯಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT