ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಗ್ಗಟ್ಟಿನ ಹೋರಾಟವೇ ದಾರಿ: ಬಿ.ಆರ್. ಪಾಟೀಲ

Published 14 ಡಿಸೆಂಬರ್ 2023, 15:37 IST
Last Updated 14 ಡಿಸೆಂಬರ್ 2023, 15:37 IST
ಅಕ್ಷರ ಗಾತ್ರ

ವಿಧಾನಸಭೆ: ದಕ್ಷಿಣದ ಸಮಸ್ಯೆಗಳ ಬಂದಾಗ ಜನಪ್ರತಿನಿಧಿಗಳು, ಸಂಘಟನೆಗಳು ಒಗ್ಗಟ್ಟಿನ ಹೋರಾಟ ನಡೆಸುತ್ತಾರೆ. ಹೋರಾಟ ಮಾಡದೇ ನ್ಯಾಯ ಸಿಗುವುದಿಲ್ಲ. ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕಾದರೆ ಸಂಘಟಿತ ಹೋರಾಟವೊಂದೇ ದಾರಿ ಎಂದು ಕಾಂಗ್ರೆಸ್‌ನ ಬಿ.ಆರ್. ಪಾಟೀಲ ಪ್ರತಿಪಾದಿಸಿದರು.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಒಳಗೊಂಡಂತೆ ಉತ್ತರ ಕರ್ನಾಟಕ ಎದುರಿಸುತ್ತಿರುವ ಸಮಸ್ಯೆಗಳ ಮೇಲಿನ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡ ಅವರು, ಸರ್ಕಾರ ಎಂದರೆ ಆನೆ ಇದ್ದಂತೆ. ಮತದಾರರು ಹೋರಾಟವೆಂಬ ಅಂಕುಶ ಬಳಸಿ ತಿವಿದರೆ ಮಾತ್ರ ಆನೆ ಬಗ್ಗುತ್ತದೆ ಎಂದರು.

‘ಕಾಫಿ, ಅಡಿಕೆ, ತೆಂಗು, ಕಾವೇರಿ ನೀರಿಗೆ ಸಮಸ್ಯೆಗಳು ಎದುರಾದಾಗ ಎಲ್ಲರೂ ಒಟ್ಟಾಗಿ ಹೋರಾಡಿ ಸರ್ಕಾರವನ್ನು ಮಣಿಸುತ್ತಾರೆ. ಆದರೆ, ನಾವು ಒಂದೊಂದು ದಿಕ್ಕಿಗೆ ಇದ್ದೇವೆ. ಅವರು ಮಾಡಿದಂತೆ ನಾವೂ ಮಾಡಿದರೆ ಸಮಸ್ಯೆಗಳು ಬಗೆಹರಿಯಲಿವೆ’ ಎಂದರು.

‘ದಕ್ಷಿಣದ ಜಿಲ್ಲೆಯವರಿಗೆ ರಾಜಧಾನಿ ಹತ್ತಿರ. ಅಲ್ಲಿನ ಶಾಸಕರು ಬೆಳಿಗ್ಗೆ ಕ್ಷೇತ್ರದಿಂದ ಹೊರಟು, ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಸಂಜೆ ವಾಪಸ್ ಹೋಗಬಹುದು. ಈ ಭಾಗದವರು 10–12ಗಂಟೆ ಪ್ರಯಾಣಿಸಿ ಬೆಂಗಳೂರು ತಲುಪಬೇಕಿದೆ. ಅಷ್ಟೆಲ್ಲ ಮಾಡಿ ಹೋದರೂ ಸಚಿವಾಲಯದ ಅಧಿಕಾರಿಗಳಿಂದ ಹಿಡಿದು ಕಾರಕೂನರವರೆಗೆ ಯಾರೊಬ್ಬರೂ ಉತ್ತರದ ಜಿಲ್ಲೆಯವರು ಇಲ್ಲ. ನಮ್ಮನ್ನು ಗುರುತಿಸುವವರೂ ಇಲ್ಲ. ಇನ್ನು ನಮ್ಮ ಕೆಲಸ ಹೇಗೆ ಆಗಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಗೋದಾವರಿಯಿಂದ ಒಂದೇ ಹನಿ ನೀರು ನಮಗೆ ಸಿಗುತ್ತಿಲ್ಲ. ಭೀಮಾ ನದಿಯಿಂದ 17 ಟಿಎಂಸಿ ಅಡಿ ಸಿಗಬೇಕಿದೆ. ಅಮರ್ಜಾ, ಬೆಣ್ಣೆತೊರಾ ನೀರು ಸಿಗುತ್ತಿಲ್ಲ. ಇದು ಯಾಕೆ ಸಿಗುತ್ತಿಲ್ಲ ಎಂದು ಯಾರೂ ಹೇಳುತ್ತಿಲ್ಲ. ರಾಜ್ಯದ ಶೇ 60 ರಷ್ಟು ಭಾಗ ಕೃಷ್ಣಾ ಕಣಿವೆಯಡಿಯೇ ಬಂದರೂ ಇದರ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯ ಸಿದ್ದು ಸವದಿ ಮಾತನಾಡಿ, ‘ನಮ್ಮ ಭಾಗದಲ್ಲಿ ಹಲವು ಗ್ರಾಮಗಳು ಪ್ರವಾಹದಿಂದ ಪದೇ ಪದೇ ಮುಳುಗುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು. ಈ ಹಿಂದಿನ ಪ್ರವಾಹದ ಸಂದರ್ಭದಲ್ಲಿ ಹಾಳಾಗಿ ಹೋದ ಮನೆಗಳನ್ನು ಪುನರ್‌ ನಿರ್ಮಿಸಿಕೊಡುವ ಕೆಲಸ ಆಗಬೇಕು’ ಎಂದು ಹೇಳಿದರು.

ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

Quote - ಕಿತ್ತೂರು ಕರ್ನಾಟಕಕ್ಕೆ ನಂಜುಂಡಪ್ಪ ವರದಿಯಿಂದ ಅಲ್ಪಸ್ವಲ್ಪ ಅನುದಾನ ಬರುತ್ತಿತ್ತು. ಈಗ ಅನುದಾನವೇ ಬರುತ್ತಿಲ್ಲ ಎನ್‌.ಎಚ್‌. ಕೋನರಡ್ಡಿ ಕಾಂಗ್ರೆಸ್‌

Quote - ಬೆಂಗಳೂರು ಜಿಲ್ಲೆಯಲ್ಲಿ 7000 ಬೃಹತ್‌ ಕೈಗಾರಿಕೆಗಳಿವೆ ಹಾವೇರಿ ಜಿಲ್ಲೆಯಲ್ಲಿ ಕೇವಲ 7 ಉದ್ಯಮಗಳಿವೆ. ಈ ತಾರತಮ್ಯವೇಕೆ? ಉತ್ತರಕರ್ನಾಟಕಕ್ಕೂ ದಕ್ಷಿಣ ಕರ್ನಾಟಕ ಇರುವ ವ್ಯತ್ಯಾಸ ಪ್ರಕಾಶ್ ಕೋಳಿವಾಡ ಕಾಂಗ್ರೆಸ್‌

Quote - ತೊಗರಿ ಹೊಸತಳಿ ಸಂಶೋಧನೆ ಆಗಬೇಕು. ರೋಗ ನಿರೋಧಕತೆ ಕಳೆದುಕೊಂಡಿರುವ ತೊಗರಿ ನೆಟೆ ರೋಗಕ್ಕೆ ತುತ್ತಾಗಿ ನಾಶವಾಗಿದೆ ಅಲ್ಲಮ ಪ್ರಭು ಪಾಟೀಲ ಕಾಂಗ್ರೆಸ್‌

Cut-off box - ಮಹಾರಾಷ್ಟ್ರ ಅಣೆಕಟ್ಟಿನಿಂದ ರಾಜ್ಯಕ್ಕೆ ಸಮಸ್ಯೆ: ಲಕ್ಷ್ಮಣ ಸವದಿ ಮಹಾರಾಷ್ಟ್ರ ವೈಶಾಲ ಬಳಿ ಕೃಷ್ಣಾ ನದಿಗೆ ಅಣೆಕಟ್ಟು ನಿರ್ಮಿಸುತ್ತಿದ್ದು ಇನ್ನೊಂದು ವರ್ಷದಲ್ಲಿ ಅದು ಪೂರ್ಣಗೊಳ್ಳಲಿದೆ. ಇದರಿಂದ ಅಕ್ಟೋಬರ್‌ ತಿಂಗಳಿಂದ ರಾಜ್ಯಕ್ಕೆ ನೀರು ಹರಿದು ಬರುವುದು ನಿಲ್ಲುತ್ತದೆ ಎಂದು ಕಾಂಗ್ರೆಸ್‌ನ ಲಕ್ಷ್ಮಣ ಸವದಿ ಆತಂಕ ವ್ಯಕ್ತಪಡಿಸಿದರು. ಈ ವಿಚಾರವಾಗಿ ಜಲಸಂಪನ್ಮೂಲ ಸಚಿವರು ಗಮನಹರಿಸಬೇಕು. ಅವರ ಅಣೆಕಟ್ಟೆಯಿಂದ ರಾಜ್ಯದ ಸುಮಾರು 7000 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗಲಿದೆ. 60 ಲಕ್ಷ ಎಕರೆ ಕೃಷಿಗೆ ನೀರು ಸಿಗುವುದಿಲ್ಲ ಎಂದರು. ‘ಮಹಾರಾಷ್ಟ್ರದಲ್ಲಿ ದ್ರಾಕ್ಷಿ ದರ ಕುಸಿದಾಗ ಸರ್ಕಾರವೇ ಒಣ ದ್ರಾಕ್ಷಿಯನ್ನು ಖರೀದಿಸಿ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತದೆ. ನಮ್ಮಲ್ಲೂ ಅದೇ ಮಾದರಿ ಅನುಸರಿಸಬಹುದು. ಮಕ್ಕಳ ಪೌಷ್ಟಿಕತೆ ಹೆಚ್ಚುತ್ತದೆ ಬೆಳೆಗಾರರ ನೆರವಿಗೆ ಧಾವಿಸಿದಂತಾಗುತ್ತದೆ‘ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT