ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿಗಣತಿ ವರದಿ ಮಂಡನೆಗೆ ವಿರೋಧ

ಒಕ್ಕಲಿಗ–ಲಿಂಗಾಯತ ಸಮುದಾಯಗಳ ಆಕ್ಷೇಪ
Published 13 ಜೂನ್ 2023, 19:30 IST
Last Updated 13 ಜೂನ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ(ಜಾತಿಗಣತಿ) ಮಂಡನೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರದ ಬಗ್ಗೆ ವೀರಶೈವ– ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ದಲಿತ ಮತ್ತು ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಸಭೆಯಲ್ಲಿ ಈ ವರದಿಯನ್ನು ಮಂಡಿಸುವುದಾಗಿ ಹೇಳಿದ್ದರು.

ಇದರ ಬೆನ್ನಲ್ಲೇ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ. ‘ಈ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಯಾವುದೇ ಕಾರಣಕ್ಕೂ ಮಂಡಿಸಬಾರದು’ ಎಂದು ಸರ್ಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಿವೆ. ಈ ಸಂಬಂಧ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ಕೆಲವು ಪದಾಧಿಕಾರಿಗಳು ಈಗಾಗಲೇ ಪ್ರಾಥಮಿಕ ಹಂತದ ಸಭೆ ನಡೆಸಿದ್ದಾರೆ. ಇನ್ನೊಂದು ಸಭೆಯನ್ನು ಒಕ್ಕಲಿಗರ ಸಮುದಾಯದ ನಾಯಕರ ಜತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಲ್ಲದೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇತ್ತೀಚೆಗೆ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಕೂಡ ‘ಯಾವುದೇ ಕಾರಣಕ್ಕೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಮಂಡನೆಗೆ ಒಪ್ಪಬಾರದು ಎಂದು ಸೂಚಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಒಕ್ಕಲಿಗ ಸಮುದಾಯದ ಮುಖಂಡರ ಜತೆ ಈ ಸಂಬಂಧ ಸದ್ಯವೇ ಮಾತುಕತೆ ನಡೆಸಿ ಮುಂದಿನ ನಡೆಯನ್ನು ತೀರ್ಮಾನಿಸಲಾಗುವುದು. ಈ ಬಾರಿ ಕಾಂಗ್ರೆಸ್‌ ಸರ್ಕಾರದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಶಾಸಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ (ಲಿಂಗಾಯತ 39, ಒಕ್ಕಲಿಗ 21 ಶಾಸಕರು) ಗೆದ್ದಿದ್ದಾರೆ. ಈ ಸಮುದಾಯದವರ ವಾದವನ್ನುಕಡೆಗಣಿಸುವಂತಿಲ್ಲ’ ಎಂದು ಅಖಿಲ ಭಾರತ ವೀರಶೈವ– ಲಿಂಗಾಯತ ಮಹಾಸಭಾದ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಕ್ಕಲಿಗ– ಲಿಂಗಾಯತರ ಆಕ್ಷೇಪವೇನು:

ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಗಣತಿ ನಡೆಸಿದ್ದು, ಇದು ವೈಜ್ಞಾನಿಕವಾಗಿ ನಡೆದಿಲ್ಲ. ಈ ಸಮೀಕ್ಷೆಯಲ್ಲಿ ವೀರಶೈವ–ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಅಲ್ಲದೇ, ವರದಿ ಮಂಡಿಸುವುದಕ್ಕೂ ಮೊದಲೇ ಸೋರಿಕೆ ಮಾಡಲಾಗಿದೆ.

‘ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ವೀರಶೈವ– ಲಿಂಗಾಯತರ ಸಂಖ್ಯೆ 59 ಲಕ್ಷ ಮತ್ತು  ಒಕ್ಕಲಿಗರ ಸಂಖ್ಯೆ 43 ಲಕ್ಷ ತೋರಿಸಲಾಗಿದೆ. ಇದು ದೋಷಪೂರಿತ ವರದಿ. ಅಹಿಂದ ವರ್ಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇತರ ಸಮುದಾಯಗಳಿಗೆ ಅನ್ಯಾಯ ಮಾಡಬಾರದು. ಅಹಿಂದ ವರ್ಗಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ನಮ್ಮ ಆಕ್ಷೇಪವಿಲ್ಲ’ ಎಂಬುದು ಎರಡು ಸಮುದಾಯದ ಪ್ರಮುಖರ ಪ್ರತಿಪಾದನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT