ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯವು ರಾಜ್ಯದಲ್ಲಿರುವ ಮಸೀದಿ, ದರ್ಗಾ, ಜೈನ ಬಸದಿ ಮತ್ತು ಗುರುದ್ವಾರಗಳಿಗೆಮಾರುಕಟ್ಟೆ ಬೆಲೆಗಿಂತಲೂ ದುಬಾರಿ ಬೆಲೆಯಲ್ಲಿ ವಾಟರ್ ಫಿಲ್ಟರ್‌ಗಳನ್ನು ಖರೀದಿಸಿ ಪೂರೈಕೆ ಮಾಡಿರುವುದು ‘ಸಂಶಯ’ಗಳಿಗೆ ಕಾರಣವಾಗಿದೆ.
‘ಮುಖ್ಯಮಂತ್ರಿಯವರ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆ’ಯಡಿ2019 ರಲ್ಲಿ ಒಟ್ಟು 5,200 ಫಿಲ್ಟರ್‌ಗಳನ್ನು ಖರೀದಿಸಲು ಇಲಾಖೆ ನಿರ್ಧರಿಸಿತ್ತು. ಪ್ರತಿ ಜಿಲ್ಲೆಗೆ ₹1ಕೋಟಿ ಮೀರದಂತೆ ಆಯಾ ಜಿಲ್ಲೆಗಳ ಬೇಡಿಕೆಗೆ ಅನುಗುಣವಾಗಿ ಖರೀದಿಸುವಂತೆ ಆದೇಶ ಹೊರಡಿಸಲಾಗಿತ್ತು.
ಕಿಯೋನಿಕ್ಸ್ ಸಂಸ್ಥೆಯ ಮೂಲಕ ಈ ಯೋಜನೆ ಅನುಷ್ಠಾನಗೊಳಿಸಲು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ 2019 ರ ಏಪ್ರಿಲ್ 31( ಅಧಿಸೂಚನೆ ಸಂಖ್ಯೆ ಎಂಡಬ್ಲ್ಯೂಡಿ 160 ಎಂಡಿಎಸ್ 2019 ) ಆದೇಶ ಹೊರಡಿಸಿತ್ತು. ಫಿಲ್ಟರ್‌ಗಳ ಖರೀದಿಗಾಗಿ ₹25 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಕಿಯೋನಿಕ್ಸ್ ಸಂಸ್ಥೆಯು ಪ್ರತಿ ಒಂದು ಫಿಲ್ಟರ್‌ಗೆ ₹1,49,919 (ಜಿ.ಎಸ್.ಟಿ ಮತ್ತು ಸಾಗಾಣಿಕೆ ವೆಚ್ಚ ಸೇರಿ) ದರ ನಿಗದಿ ಮಾಡಿರುವುದು ಆರ್‌ಟಿಐ ಮಾಹಿತಿಯಿಂದ ಗೊತ್ತಾಗಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಈ ಮಾಹಿತಿ ಪಡೆದಿದ್ದು, ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತಿಷ್ಠಿತ ಕಂಪನಿಗಳ ಸ್ಟೈನ್‌ಲೆಸ್ ಸ್ಟೀಲ್ ವಾಟರ್ ಫಿಲ್ಟರ್ ಮತ್ತು ಕೂಲರ್‌ಗಳ ಬೆಲೆ ಗರಿಷ್ಠ ಬೆಲೆ ₹30 ಸಾವಿರದಿಂದ ₹ 50 ಸಾವಿರವರೆಗೆ ಇದೆ. ಇಲ್ಲಿ ₹1.49 ಲಕ್ಷ ಬಿಲ್ ಮಾಡಲಾಗಿದೆ. ಇಷ್ಟೊಂದು ದುಬಾರಿ ಬೆಲೆಯಲ್ಲಿ ಖರೀದಿ ಮಾಡುವ ಅಗತ್ಯವೇನಿತ್ತು ಎಂದು ಆರ್‌ಟಿಐ ಕಾರ್ಯಕರ್ತ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವಬಿಜೆಪಿ ನಾಯಕ ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ‘ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಕಿಯೋನಿಕ್ಸ್‌ಗೆ ಪ್ರೆಸ್ಟೀಜ್ ಎಂಟರ್‌ಪ್ರೈಸಸ್ ಮೂಲಕ ವಾಟರ್ ಫಿಲ್ಟರ್‌ಗಳನ್ನು ಖರೀದಿಸಿದೆ. ಆ ಕಂಪನಿಯ ಮ್ಯಾನೇಜರ್ ಅವರು ಪ್ರತಿಯೊಂದು ಯುನಿಟ್‌ಗೆ ₹39 ಸಾವಿರದಂತೆ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿರುವ ಆಡಿಯೋ ದಾಖಲೆ ಇದೆ. ಈವರೆಗೆ ಒಟ್ಟು 1,603 ವಾಟರ್ ಫಿಲ್ಟರ್‌ಗಳಿಗೆ ₹24.03 ಕೋಟಿ ಪಾವತಿ ಮಾಡಲಾಗಿದೆ. ಒಂದು ಫಿಲ್ಟರ್‌ಗೆ ₹39 ಸಾವಿರ ಪಾವತಿ ಮಾಡಿದ್ದರೆ ₹6.25 ಕೋಟಿ ಆಗುತ್ತಿತ್ತು. ₹17.78 ಕೋಟಿ ವ್ಯತ್ಯಾಸ ಕಂಡು ಬಂದಿದೆ. ಈ ಹಣ ಯಾವ ಅಧಿಕಾರಿಯ ಜೇಬಿಗೆ ಹೋಗಿದೆ’ ಎಂದು ಪ್ರಶ್ನಿಸಿದ್ದಾರೆ.
‘ಖರೀದಿಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಯ ಉಲ್ಲಂಘನೆಯೂ ಆಗಿದೆ. ಪಾರದರ್ಶಕ ಕಾಯ್ದೆಯ 1999 ರ ಕಲಂ 4 (ಜಿ)ರಡಿ ಕಿಯೋನಿಕ್ಸ್‌ಗೆ ₹1ಕೋಟಿವರೆಗೆ ಮಾತ್ರ ಖರ್ಚು ಮಾಡುವ ಅಧಿಕಾರ ಇದೆ. ಆದರೆ, ಈ ಪ್ರಕರಣದಲ್ಲಿ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಇದರ ಉದ್ದೇಶವೇನು? ಇದಕ್ಕೆಲ್ಲ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಅವರೇ ನೇರ ಕಾರಣ. ಈ ಖರೀದಿಯ ಬಗ್ಗೆ ತನಿಖೆ ಆಗಬೇಕು’ ಎಂದು ಮಾಣಿಪ್ಪಾಡಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.