ಮಡಿಕೇರಿ: ‘ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬುದು ನಮ್ಮ ಹಿಂದಿನ ತೀರ್ಮಾನ. ಈಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಚರ್ಚಿಸಿ ಮತ್ತೊಮ್ಮೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ಕೊಡಗು ಜಿಲ್ಲೆಯಲ್ಲಿ ನಮ್ಮ ಸರ್ಕಾರ ಭೂಪರಿವರ್ತನೆ ಮಾಡಿಲ್ಲ. ಯಾವುದೇ ಕಾರಣಕ್ಕೂ ಪ್ರಕೃತಿ ವಿಕೋಪಗಳನ್ನು ನಿರ್ಲಕ್ಷ್ಯ ಮಾಡುವುದಿಲ್ಲ’ ಎಂದು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.
‘ಬಿಜೆಪಿ– ಜೆಡಿಎಸ್ ಪಾದಯಾತ್ರೆಗೆ ನಮ್ಮ ತಕರಾರಿಲ್ಲ. ಆದರೆ, ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿರುವುದರಿಂದ, ಬೆಂಗಳೂರು ಕಮಿಷನರ್ ಅನುಮತಿ ಕೊಡುವುದಿಲ್ಲ’ ಎಂದರು.
‘ಮುಡಾ ನಿವೇಶನ ಹಂಚಿಕೆಯ ಕುರಿತ ದೂರಿನ ಸಂಬಂಧ ನೀಡಿರುವ ನೋಟಿಸ್ ಅನ್ನು ರಾಜ್ಯಪಾಲರು ವಾಪಸ್ ಪಡೆಯುತ್ತಾರೆ ಎಂದು ನಂಬಿಕೆ ಇದೆ’ ಎಂದರು.