ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಠಾಣೆಯ ಕಾರ್ಯವ್ಯಾಪ್ತಿ ಬದಲು

ಸಂತ್ರಸ್ತರು, ಸಿಬ್ಬಂದಿಗೆ ತಪ್ಪಿದ ತಾಪತ್ರಯ * ತನಿಖೆಯ ಭಾರ ಇಳಿಕೆ
Last Updated 20 ಜನವರಿ 2019, 20:30 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ತನಿಖೆಗೆ ಸ್ಥಾಪಿಸಿದ ಮಹಿಳಾ ಪೊಲೀಸ್‌ ಠಾಣೆಗಳ ಕಾರ್ಯವ್ಯಾಪ್ತಿಯನ್ನು ಬದಲಿಸಿದ ಬಳಿಕ ಕೆಲಸ ಸುಗಮವಾಗಿದೆ. ಸಿಬ್ಬಂದಿ ಹಾಗೂ ಸಂತ್ರಸ್ತರಿಗೆ ಉಂಟಾಗುತ್ತಿದ್ದ ತಾಪತ್ರಯ ತಪ್ಪಿದೆ.

ಜಿಲ್ಲೆ ಹಾಗೂ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಗೆ ಒಂದರಂತೆ ಇರುವ ಠಾಣೆಗಳ ಕಾರ್ಯವ್ಯಾಪ್ತಿಯನ್ನು ಆಯಾ ನಗರ ಹಾಗೂ ತಾಲ್ಲೂಕಿಗೆ ನಿಗದಿಪಡಿಸಲಾಗಿದೆ. ಜಿಲ್ಲೆ ಹಾಗೂ ಮಹಾನಗರದ ಎಲ್ಲ ಪ್ರಕರಣಗಳ ವಿಚಾರಣೆ ಮತ್ತು ತನಿಖೆ ನಡೆಸುವ ಹೊರೆ ಇಳಿದಿದೆ.

ಜಿಲ್ಲೆಗೊಂದು ಮಹಿಳಾ ಠಾಣೆಯನ್ನು ಸ್ಥಾಪಿಸಿದ ರಾಜ್ಯ ಸರ್ಕಾರ, ಕಾರ್ಯವ್ಯಾಪ್ತಿಯನ್ನು ಇಡೀ ಜಿಲ್ಲೆಗೆ ವಿಸ್ತರಿಸಿ 2016ರಲ್ಲಿ ಆದೇಶ ಹೊರಡಿಸಿತ್ತು. ಜಿಲ್ಲಾ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಮಹಿಳಾ ಸಂಬಂಧಿ ಪ್ರಕರಣಗಳ ವಿಚಾರಣೆಯ ಹೊಣೆ ಈ ಠಾಣೆಯ ಮೇಲಿತ್ತು. ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕಿನ 25 ಪೊಲೀಸ್‌ ಠಾಣೆಗಳ ಮಹಿಳಾ ಸಂಬಂಧಿ ಪ್ರಕರಣಗಳ ತನಿಖೆ ನಡೆಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿತ್ತು.

‘ಆಂಧ್ರಪ್ರದೇಶದ ಗಡಿಯಲ್ಲಿರುವ ರಾಂಪುರ ಠಾಣೆ ಹಾಗೂ ಜಿಲ್ಲೆಯ ಕೊನೆ ಭಾಗದಲ್ಲಿರುವ ಶ್ರೀರಾಂಪುರ ಠಾಣೆ ಚಿತ್ರದುರ್ಗದಿಂದ 90 ಕಿ.ಮೀ ದೂರದಲ್ಲಿವೆ. ಇಲ್ಲಿ ದಾಖಲಾಗುವ ಮಹಿಳಾ ಸಂಬಂಧಿ ಪ್ರಕರಣಗಳನ್ನು ಚಿತ್ರದುರ್ಗದ ಠಾಣೆಗೆ ವರ್ಗಾವಣೆ ಮಾಡಿದರೆ ಸಂತ್ರಸ್ತರಿಗೂ ತೊಂದರೆಯಾಗುತ್ತಿತ್ತು. ಕೌನ್ಸೆಲಿಂಗ್‌ ಪಡೆಯಲು ಹಾಗೂ ಹೇಳಿಕೆ ದಾಖಲಿಸಲು ಅಲ್ಲಿಂದ ಬರುವುದು ಕೂಡ ಕಷ್ಟ. ಕಾರ್ಯವ್ಯಾಪ್ತಿ ಬದಲಾದ ಬಳಿಕ ಈ ಕೆಲಸ ಸುಲಭವಾಗಿದೆ’ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ಅರುಣ್‌.

ವಿವಾಹ ವಿಚ್ಛೇದನ, ಪತಿ–ಪತ್ನಿ ಜಗಳ, ವರದಕ್ಷಿಣೆ ಕಿರುಕುಳ ಸೇರಿ ಕೌಟುಂಬಿಕ ಪ್ರಕರಣಗಳ ವಿಚಾರಣೆಗೆ ಪೊಲೀಸ್‌ ಇಲಾಖೆ ಮಾರ್ಗಸೂಚಿ ನಿಗದಿಪಡಿಸಿದೆ. ದೂರುದಾರ ಹಾಗೂ ಪ್ರತಿವಾದಿಗಳ ಕೌನ್ಸೆಲಿಂಗ್ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಮಹಿಳಾ ಠಾಣೆಗೆ ಓಡಾಡುವುದೇ ಸವಾಲಾಗಿತ್ತು.

ಅತ್ಯಾಚಾರ, ವರದಕ್ಷಿಣೆ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ (ಪೋಕ್ಸೊ), ಕೌಟುಂಬಿಕ ದೌರ್ಜನ್ಯ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಹಿಳೆಯನ್ನು ಅಸಭ್ಯವಾಗಿ ಜಾಹೀರುಗೊಳಿಸುವುದು, ಬಾಲ ನ್ಯಾಯಮಂಡಳಿ ಕಾಯ್ದೆ ಸೇರಿ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ತನಿಖೆಯನ್ನು ಮಹಿಳಾ ಠಾಣೆಗೆ ವರ್ಗಾಯಿಸುವುದು ಪೊಲೀಸ್‌ ಇಲಾಖೆಯ ಉದ್ದೇಶವಾಗಿತ್ತು. ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ದಾಖಲಾಗುವ ಇಂತಹ ಪ್ರಕರಣಗಳನ್ನು ಮಹಿಳಾ ಠಾಣೆಗೆ ವರ್ಗಾಯಿಸಲು ಮುಂದಾಗಿತ್ತು. ಪ್ರಾಯೋಗಿಕವಾಗಿ ಇದು ಅಸಾಧ್ಯವಾಗಿರುವುದರಿಂದ ಕಾರ್ಯವ್ಯಾಪ್ತಿಯನ್ನು ಕುಗ್ಗಿಸಿದೆ.

‘ಕೆಲ ಪ್ರಕರಣಗಳ ವಿಚಾರಣೆಯನ್ನು ಪುರುಷ ಅಧಿಕಾರಿಗಳು ನಡೆಸುವುದು ಸಂತ್ರಸ್ತ ಮಹಿಳೆಯರಿಗೆ ಇಷ್ಟವಿರುವುದಿಲ್ಲ. ಮಹಿಳಾ ಸಂತ್ರಸ್ತರನ್ನು ಕೇಂದ್ರವಾಗಿಟ್ಟುಕೊಂಡು ಈ ಠಾಣೆಯನ್ನು ಸ್ಥಾಪಿಸಲಾಗಿತ್ತು.ಕಾರ್ಯವ್ಯಾಪ್ತಿ ಕುಗ್ಗಿಸಿದ್ದರಿಂದ ಮಹಿಳಾ ಠಾಣೆಯ ಉದ್ದೇಶವೇ ಸಫಲವಾಗುವುದಿಲ್ಲ. ಠಾಣೆಯ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಒದಗಿಸಿದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು’ ಎಂಬುದು ಮಹಿಳಾ ಠಾಣೆಯ ಸಿಬ್ಬಂದಿಯೊಬ್ಬರ ಅಭಿಪ್ರಾಯ.

*ಪ್ರಕರಣಗಳ ವಿಚಾರಣೆ ಹಾಗೂ ತನಿಖೆಗೆ ತೊಂದರೆಯಾಗುತ್ತಿತ್ತು. ಸಂತ್ರಸ್ತರ ಕೋರಿಕೆ ಮೇರೆಗೆ ಮಹಿಳಾ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿಸಿಕೊಳ್ಳುವ ಅವಕಾಶವಿದೆ.

-ಡಾ.ಕೆ.ಅರುಣ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT