ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಮನೆ ಮೇಲೆ ಸಿಬಿಐ ದಾಳಿ

ಕಾರವಾರ, ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣ
Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕಾರವಾರ ಮತ್ತು ಬೇಲೆಕೇರಿ ಬಂದರುಗಳ ಮೂಲಕ ನಡೆದಿರುವ ಅದಿರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಫ್‌ಎಸ್ ಅಧಿಕಾರಿ ಸಿ.ಡಿ.ದ್ಯಾವಯ್ಯ, ನಿವೃತ್ತ ಐಎಫ್‌ಎಸ್ ಅಧಿಕಾರಿ ನಾಗರಾಜು ಐಪಿಎಸ್ ಅಧಿಕಾರಿ ಸೀಮಂತಕುಮಾರ್ ಸಿಂಗ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿರುವ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಬಳ್ಳಾರಿಯ ವಿವಿಧೆಡೆ ಅಕ್ರಮವಾಗಿ ತೆಗೆದ ಅದಿರನ್ನು ಪರವಾನಗಿ ಇಲ್ಲದೇ ಬಂದರುಗಳಿಗೆ ಸಾಗಿಸಿರುವುದು ಮತ್ತು ಅಲ್ಲಿಂದ ವಿದೇಶಗಳಿಗೆ ಕಳ್ಳಸಾಗಣೆ ಮಾಡಿರುವ ಪ್ರಕರಣಗಳಲ್ಲಿ ಐಎಫ್‌ಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭಾಗಿಯಾಗಿರುವ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಏಳು ಅಧಿಕಾರಿಗಳ ಮನೆ, ಸಂಬಂಧಿಗಳ ಮನೆ, ಕಚೇರಿಗಳ ಮೇಲೆ ಗುರುವಾರ ಮತ್ತು ಶುಕ್ರವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸಿಬಿಐನ ಉನ್ನತ ಮೂಲಗಳು ತಿಳಿಸಿವೆ.


ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಅದಿರು ಕಳ್ಳಸಾಗಣೆ ನಡೆಸುವುದಕ್ಕೆ ಅವಕಾಶ ಮಾಡಿಕೊಡುವಲ್ಲಿ ನೇರವಾಗಿ ಭಾಗಿಯಾದ ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ. ಬಹುತೇಕ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ನಡೆಸುತ್ತಿದ್ದ ವ್ಯಕ್ತಿಗಳಿಂದ ಹಣ ಪಡೆದಿರುವ ಬಗ್ಗೆಯೂ ಸಿಬಿಐ ದಾಖಲೆಗಳನ್ನು ಕಲೆಹಾಕಿದೆ. ದಾಖಲೆಗಳಲ್ಲಿ ದೊರೆತ ಖಚಿತ ಸುಳಿವು ಆಧರಿಸಿ ಹೆಚ್ಚಿನ ತನಿಖೆಗಾಗಿ ದಾಳಿ ನಡೆಸಲಾಗಿದೆ ಎಂದು ಗೊತ್ತಾಗಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿದ್ದ ನಾಗರಾಜು ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿದ್ದರು. ದ್ಯಾವಯ್ಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿದ್ದಾರೆ. ಬಳ್ಳಾರಿಯಲ್ಲಿ ಹೆಚ್ಚುವರಿ ಎಸ್‌ಪಿ ಹುದ್ದೆಯಲ್ಲಿದ್ದ ಅಶ್ರಫ್ ಕೋದೂರು, ಇನ್‌ಸ್ಪೆಕ್ಟರ್‌ಗಳಾಗಿದ್ದ ಎಸ್.ಎಸ್. ಹೋಲೂರು ಮತ್ತು ರಮಾಕಾಂತ್ ಸೋೀಲೂರು ಅವರ ಮೇಲೂ ದಾಳಿ ನಡೆದಿದೆ. ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರ ಜೊತೆ ನಿಕಟ ಸಂಬಂಧ ಹೊಂದಿದ್ದ ಇತರೆ ಕೆಲವು ಅಧಿಕಾರಿಗಳ ಮನೆಗಳ ಮೇಲೂ ದಾಳಿ ಮಾಡಿ, ಶೋಧಕಾರ್ಯ ನಡೆಸಲಾಗಿದೆ.

ಸೀಮಂತ್‌ಕುಮಾರ್‌ಗೆ ಗಾಳ: ಸದ್ಯ ಗಡಿಭದ್ರತಾ ಪಡೆಯಲ್ಲಿ ಡಿಐಜಿ ಹುದ್ದೆಯಲ್ಲಿರುವ ಸೀಮಂತ್‌ಕುಮಾರ್ ಸಿಂಗ್ ದೀರ್ಘಕಾಲ ಬಳ್ಳಾರಿಯ ಎಸ್‌ಪಿ ಆಗಿದ್ದರು. ನಂತರ ಮಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಗೆ ಅವರನ್ನು ವರ್ಗಾಯಿಸಲಾಗಿತ್ತು. ಕೆಲಕಾಲ ವಿದೇಶಕ್ಕೆ ತರಬೇತಿಗೆ ತೆರಳಿದ್ದ ಅವರನ್ನು ರಾಜ್ಯಕ್ಕೆ ಮರಳಿದ ಬಳಿಕ ಗಡಿಭದ್ರತಾ ಪಡೆಗೆ ವರ್ಗಾವಣೆ ಮಾಡಲಾಗಿತ್ತು.

ಬಳ್ಳಾರಿಯಲ್ಲಿ ಇದ್ದಷ್ಟೂ ದಿನ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸೇರಿದಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ಸಹಕಾರ ನೀಡಿದ್ದರು ಎಂಬ ಆರೋಪ ಸೀಮಂತ್‌ಕುಮಾರ್ ಅವರ ಮೇಲಿದೆ. ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ತನಿಖೆ ನಡೆಸಿ ಸಲ್ಲಿಸಿದ ವರದಿಯಲ್ಲೂ, ಬಳ್ಳಾರಿ ಎಸ್‌ಪಿ ಹುದ್ದೆಯಲ್ಲಿದ್ದವರು ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಉಲ್ಲೇಖವಾಗಿತ್ತು. ಯಲಹಂಕದಲ್ಲಿರುವ ಗಡಿ ಭದ್ರತಾ ಪಡೆಯ ವಸತಿಗೃಹಗಳ ಆವರಣದಲ್ಲಿರುವ ಸೀಮಂತ್‌ಕುಮಾರ್ ಸಿಂಗ್ ಅವರ ಅಧಿಕೃತ ನಿವಾಸದ ಮೇಲೆಯೇ ದಾಳಿ ನಡೆಸಲಾಗಿದೆ.

ಮಹತ್ವದ ದಾಖಲೆಗಳ ವಶ: ಎರಡು ದಿನಗಳ ಕಾಲ ನಡೆದ ದಾಳಿಯ ವೇಳೆ ಸಿಬಿಐ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಅಧಿಕಾರಿಗಳ ಹಣಕಾಸು ವಹಿವಾಟಿನ ವಿವರಗಳು, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರಗಳು, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರ ಜೊತೆ ಇದ್ದ ನಂಟನ್ನು ಪುಷ್ಟೀಕರಿಸುವಂತಹ ದಾಖಲೆಗಳನ್ನು ತನಿಖಾ ತಂಡ ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT