ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಇಲಾಖೆಗಳಲ್ಲೂ ಹಾಜರಾತಿಗೆ ಬಯೋಮೆಟ್ರಿಕ್‌

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ‘ಯಾರು ಎಷ್ಟು ಹೊತ್ತಿಗೆ ಕಚೇರಿಗೆ ಬಂದರು, ಎಷ್ಟು ಹೊತ್ತಿಗೆ ಮನೆಗೆ ಹೋದರು’ ಎಂಬುದರ ಮೇಲೆ ನಿಗಾ ಇಡುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್ಲ ಇಲಾಖೆಗಳಲ್ಲೂ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲು ತೀರ್ಮಾನಿಸಿದೆ.

ಸರ್ಕಾರದ ಸಚಿವಾಲಯ ಮತ್ತು ಕೆಲವೊಂದು ಇಲಾಖೆಗಳಲ್ಲಿ ಮಾತ್ರ ಸಿಬ್ಬಂದಿಯ ಹಾಜರಾತಿ ವ್ಯವಸ್ಥೆಯನ್ನು ಬಯೋಮೆಟ್ರಿಕ್‌ ಮೂಲಕ ದಾಖಲು ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ನವೆಂಬರ್‌ 1ರಿಂದ ಬೆಂಗಳೂರಿನಲ್ಲಿರುವ ಇತರ ಎಲ್ಲ ಇಲಾಖೆಗಳ ಕಚೇರಿಗಳಲ್ಲೂ ಆರಂಭಿಸುವುದಕ್ಕೆ ಸಿದ್ಧತೆ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೂ ಅದರ ವಿಸ್ತರಣೆ ಆಗಲಿದೆ.

ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲದ ಕಡೆ ಅಧಿಕಾರಿಗಳು ಮತ್ತು ನೌಕರರ ಹಾಜರಾತಿ ಸರಿ ಇಲ್ಲ ಎನ್ನುವ
ಕಾರಣಕ್ಕೆ ಈ ಕ್ರಮ ತೆಗೆದು ಕೊಳ್ಳಲಾಗಿದೆ.

‘ಕೇಂದ್ರ ಕಚೇರಿಯಲ್ಲಿ ಕೆಲಸ ಇದೆ’ ಎಂದು ಸುಳ್ಳು ಹೇಳಿ ನಾಪತ್ತೆಯಾಗುವ ಮತ್ತು ಸುಳ್ಳು ರಜೆ ಚೀಟಿ ಬರೆದಿಟ್ಟು, ನಂತರ ಅದನ್ನು ಹರಿದುಹಾಕಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವ ಅಧಿಕಾರಿಗಳ ವರ್ತನೆಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ನಾಗರಿಕ ಸೇವೆ) ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರು ಈ ಕುರಿತು ಆದೇಶ ಹೊರಡಿಸಿದ್ದು, ಕಡ್ಡಾಯವಾಗಿ ನವೆಂಬರ್ 1ರಿಂದ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

ಸಚಿವಾಲಯದಲ್ಲಿ ಆರು ವರ್ಷಗಳಿಂದ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಒಂದು ವರ್ಷದ ಹಿಂದೆ ವಾರ್ತಾ ಇಲಾಖೆ ಅನುಷ್ಠಾನಗೊಳಿಸಿದೆ. ಇದರಿಂದ ಸಿಬ್ಬಂದಿಯ ಹಾಜರಾತಿ ಯಲ್ಲಿ ಸುಧಾರಣೆ ಆಗಿದೆ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ವಿಳಂಬ ಮಾಡಿ ಬರುವ ಸಿಬ್ಬಂದಿ ಮೇಲೆ ಕ್ರಮ ಕೂಡ ಆಗಿದೆ. ಕ್ಷೇತ್ರ ಕಾರ್ಯ ಇರುವ ಅಧಿಕಾರಿ/ ಸಿಬ್ಬಂದಿಗೆ ಮಾತ್ರ ಬಯೋಮೆಟ್ರಿಕ್‌ ನಿಂದ ವಿನಾಯಿತಿ ಇದಸ್ದು, ಅವರ ಚಲನವಲನಗಳನ್ನೂ ದಾಖಲು ಮಾಡುವ ವ್ಯವಸ್ಥೆ ಜಾರಿಗೆ ತೀರ್ಮಾನಿಸಲಾಗಿದೆ.

‘ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿನ ಎಲ್ಲ ಇಲಾಖೆಗಳ ನಿರ್ದೇಶನಾಲಯಗಳ ಕಚೇರಿಗಳಲ್ಲಿ ಜಾರಿ ಮಾಡಲಾಗುತ್ತದೆ. ಇದರ ಬಳಿಕ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಿಗೂ ಈ ವ್ಯವಸ್ಥೆ ವಿಸ್ತರಣೆ ಆಗಲಿದೆ’ ಎಂದು ಡಾ.ಶಾಲಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಖರ್ಚು ಇಲಾಖೆಗಳದ್ದೇ: ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ತಗಲುವ ವೆಚ್ಚವನ್ನು ಆಯಾ ಇಲಾಖೆಗಳೇ ಭರಿಸಬೇಕಾಗುತ್ತದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಗಳಿಗೆ ನಿಗದಿಪಡಿಸಿರುವ ಬಜೆಟ್‌ ಹಣದಲ್ಲೇ ಪರಿಕರ ಖರೀದಿಸಬೇಕು. ಸಿಬ್ಬಂದಿಯ ಸಂಖ್ಯೆಗನುಗುಣವಾಗಿ ‘ರೀಡರ್‌’ ಸಾಧನ ಮತ್ತು ಕಂಪ್ಯೂಟರ್‌ ಖರೀದಿಸಬೇಕು. ಹೀಗೆ, ಅಗತ್ಯ ಇರುವ ಎಲ್ಲ ಸಾಧನಗಳನ್ನು ಇ–ಆಡಳಿತ ಇಲಾಖೆ ಗುರುತಿಸಿರುವ ಮಾರಾಟಗಾರರಿಂದ ಖರೀದಿಸಲು ಸೂಚಿಸಲಾಗಿದೆ. ಖರೀದಿ ವೇಳೆ ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಕಟ್ಟಾಜ್ಞೆ ಮಾಡ ಲಾಗಿದೆ.

ಅಗತ್ಯ ಇರುವ ಸಾಫ್ಟ್‌ವೇರ್ ಅನ್ನು ಎನ್ಐಸಿ ಅಥವಾ ಇ–ಆಡಳಿತ ಇಲಾಖೆಯಿಂದ ಪಡೆಯಬಹುದು.
ಇ–ಆಡಳಿತ ಇಲಾಖೆಯವರೇ ಹೊಸ ವ್ಯವಸ್ಥೆ ಜಾರಿಗೆ ನೆರವಾಗಲಿದ್ದಾರೆ.


ಕಾರ್ಯನಿರ್ವಹಣೆ ಹೇಗೆ?
ಅಧಿಕಾರಿ ಅಥವಾ ಸಿಬ್ಬಂದಿ ನಿಗದಿತ ವೇಳೆಗೆ ಕಚೇರಿಗೆ ಹೋಗಬೇಕು. ಅದಕ್ಕೂ ಮುನ್ನ ತಮ್ಮ ಬೆರಳಚ್ಚನ್ನು ಕಚೇರಿಯಲ್ಲಿನ ರೀಡರ್‌ನಲ್ಲಿ ದಾಖಲು ಮಾಡಬೇಕು. ಆ ಮೂಲಕ ನಿರ್ದಿಷ್ಟ ಅಧಿಕಾರಿ ಇಂತಹದ್ದೇ ಸಮಯಕ್ಕೆ ಕಚೇರಿಗೆ ಹಾಜರಾಗಿದ್ದರು ಎಂಬುದನ್ನು ರೀಡರ್‌ ಸಾಧನ ದಾಖಲು ಮಾಡಿರುತ್ತದೆ. ಪ್ರತಿ ತಿಂಗಳು ಇದರಲ್ಲಿ ದಾಖಲಾದ ಹಾಜರಾತಿಯನ್ನು ತೆಗೆದು, ಆನ್‌ಲೈನ್‌ನಲ್ಲಿ ವೇತನ ನೀಡುವ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಹಾಜರಾತಿಯ ಪ್ರಮಾಣ ನೋಡಿಕೊಂಡು ವೇತನ ಬಟವಾಡೆ ಆಗುತ್ತದೆ. ಇದು ನಿಯಮ.

ಸಿಬ್ಬಂದಿಯ ಕಳ್ಳಾಟಕ್ಕೆ ಕಡಿವಾಣ
ದೂರದ ಊರುಗಳಿಗೆ ವರ್ಗಾವಣೆ ಆಗುವ ಅಧಿಕಾರಿಗಳು/ಸಿಬ್ಬಂದಿ ಪ್ರತಿನಿತ್ಯ ಕಚೇರಿಗೆ ಹಾಜರಾಗುತ್ತಿಲ್ಲ. ನಾಲ್ಕೈದು ದಿನಕ್ಕೊಮ್ಮೆ ಕಚೇರಿಗೆ ಹೋಗಿ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇವೆಲ್ಲದಕ್ಕೂ ಕಡಿವಾಣ ಹಾಕಲು ಬಯೋಮೆಟ್ರಿಕ್‌ ವ್ಯವಸ್ಥೆ ಒಂದೇ ರಾಮಬಾಣ. ಹೀಗಾಗಿ ಇದನ್ನು ಆದಷ್ಟು ಬೇಗ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸಲು ಇ–ಆಡಳಿತ ಇಲಾಖೆ ಸರ್ಕಾರಕ್ಕೆ ಸಲಹೆ ಮಾಡಿದೆ. ಹಣಕಾಸಿನ ಲಭ್ಯತೆ ನೋಡಿಕೊಂಡು ಹಂತಹಂತವಾಗಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಗೊಂದಲ
ಸಿಬ್ಬಂದಿಯ ಹಾಜರಾತಿ ವಿವರ ಸ್ಥಳೀಯ ಮಟ್ಟದಲ್ಲಿ ಮಾತ್ರ ದಾಖಲು ಮಾಡಿದರೆ ಸಾಕೇ ಅಥವಾ ಅದನ್ನು ಕೇಂದ್ರ ಸ್ಥಾನದಲ್ಲಿ ದಾಖಲಿಸುವ ವ್ಯವಸ್ಥೆ ಆಗಬೇಕೇ ಎನ್ನುವ ಗೊಂದಲ ಸರ್ಕಾರ ಮಟ್ಟದಲ್ಲಿ ಮೂಡಿದೆ. ಈ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಇಡೀ ರಾಜ್ಯದ ಸಿಬ್ಬಂದಿಯ ವಿವರಗಳನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ದಾಖಲು ಮಾಡಿದರೆ, ಅದಕ್ಕೆ ಹೆಚ್ಚು ವೆಚ್ಚ ತಗಲುತ್ತದೆ. ಅದರ ಬದಲು, ಸ್ಥಳೀಯವಾಗಿಯೇ ಹಾಜರಾತಿಯನ್ನು ದಾಖಲು ಮಾಡಿ, ನಂತರ ಅದನ್ನು ಆನ್‌ಲೈನ್‌ನಲ್ಲಿ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಕಳುಹಿಸುವ ವ್ಯವಸ್ಥೆಯೇ ಉತ್ತಮ ಎಂದೂ ಇ–ಆಡಳಿತ ಇಲಾಖೆ ಸಲಹೆ ಮಾಡಿದೆ. ಇದು ಆರ್ಥಿಕವಾಗಿಯೂ ಅನುಷ್ಠಾನ ಯೋಗ್ಯ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT