ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ತಾರತಮ್ಯ–ಕ್ರಮಕ್ಕೆ ಹಿಂಜರಿಕೆ ಬೇಡ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಸಲಹೆ
Last Updated 25 ಅಕ್ಟೋಬರ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಈಶಾನ್ಯ ರಾಜ್ಯಗಳ ಜನರನ್ನು ಗುರಿ­ಯಾ­­ಗಿ­ಸಿಕೊಂಡು ನಡೆಯುವ ಜನಾಂಗೀಯ ತಾರ­ತಮ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳು ಹಿಂಜರಿಯಬಾರದು’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್‌ ರಿಜಿಜು ಹೇಳಿದರು.
ಬಿಜೆಪಿಯ ಈಶಾನ್ಯ  ಸಂಪರ್ಕ ಘಟಕದ ವತಿ­ಯಿಂದ ಶನಿವಾರ ಇಲ್ಲಿನ ಭಾರತೀಯ ವಿದ್ಯಾಭವನ­ದಲ್ಲಿ ಏರ್ಪಡಿಸಿದ್ದ ಪೂರ್ವಾಂಚಲ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈಶಾನ್ಯ ರಾಜ್ಯಗಳ ಜನರನ್ನು ಗುರಿಯಾಗಿಸಿ­ಕೊಂಡು ನಡೆಯುವ ಜನಾಂಗೀಯ ತಾರತಮ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಂಸದ ಬೇಜ್ ಬರುವಾ ಸಮಿತಿ ವರದಿ ಎರಡು ತಿಂಗಳಿನಲ್ಲಿ ಕೇಂದ್ರಕ್ಕೆ ಸಲ್ಲಿಕೆಯಾ­ಗಲಿದೆ. ಇದರ ಅನುಸಾರ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆ ರವಾನಿಸಲಿದೆ. ರಾಜ್ಯ ಸರ್ಕಾರಗಳು ಈ ಸಲಹೆ ಸೂಚನೆಗಳನ್ನು ಜನಸ್ನೇಹಿ ವಿಧಾನದಲ್ಲಿ ಅನುಷ್ಠಾನಕ್ಕೆ ತರಲು ಮುಂದಾಗಬೇಕು’ ಎಂದು ಅವರು ಹೇಳಿದರು.

ಇತ್ತೀಚೆಗೆ ಬೆಂಗಳೂರು ಮತ್ತು ಗುಡಗಾಂವ್‌ನಲ್ಲಿ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ­ಯನ್ನು ಉದಾಹರಿಸಿದ ಅವರು, ‘ವಲಸೆ ಬರುವ ಈಶಾನ್ಯ ರಾಜ್ಯಗಳ ಜನರು ಸ್ಥಳೀಯ ಜನರ ಜೊತೆ ಹಾಸು­ಹೊಕ್ಕಾಗಿ ಬೆರೆಯುವ ಮೂಲಕ  ಪ್ರತ್ಯೇಕ ಭಾವನೆ ಕಳೆದುಕೊಳ್ಳಲು ಪ್ರಯ­ತ್ನಿಸಬೇಕು’ ಎಂದರು.

ಮೆಟ್ರೊಪಾಲಿಟನ್‌ ನಗರಗಳಲ್ಲಿ ವಸತಿ ಸೌಲಭ್ಯ: ‘ದೇಶದ ವಿವಿಧ ಮೆಟ್ರೊಪಾಲಿಟನ್‌ ನಗರಗಳಲ್ಲಿ ಈಶಾನ್ಯ ರಾಜ್ಯದ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಚಿಂತಿಸಲಾಗುವುದು’ ಎಂದು ರಿಜಿಜು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಈಶಾನ್ಯ ರಾಜ್ಯಗಳ ಜನರ ಜತೆ ಸಂಭಾಷಣೆ ನಡೆಸಿದ ಅವರು, ‘ಈ ಕುರಿತಂತೆ ನಗರಾಭಿವೃದ್ಧಿ ಸಚಿವಾಲಯದ ಜೊತೆ ಚರ್ಚಿಸಲಾಗುವುದು’ ಎಂಬ ಭರವಸೆ ನೀಡಿದರು.

ರೈಲ್ವೆ ಸಂಪರ್ಕ: ರೈಲ್ವೆ ಮಂತ್ರಿ ಸದಾನಂದ ಗೌಡ ಮಾತನಾಡಿ, ‘ಮುಂದಿನ ಮೂರು ವರ್ಷಗಳಲ್ಲಿ ಈಶಾನ್ಯ ಭಾರತದ ಎಲ್ಲ ಎಂಟು ರಾಜ್ಯಗಳ ರಾಜಧಾನಿ ಮತ್ತು ನವದೆಹಲಿ ನಡುವೆ ರೈಲು ಸಂಪರ್ಕ ಕಲ್ಪಿಸಲಾಗುವುದು’ ಎಂದರು.

ಬೃಹತ್ ರಸಗೊಬ್ಬರ ಘಟಕ ಸ್ಥಾಪನೆ: ಕೇಂದ್ರ ರಸ­ಗೊಬ್ಬರ ಖಾತೆ ಸಚಿವ ಅನಂತ ಕುಮಾರ್‌ ಮಾತ­ನಾಡಿ, ‘ಈಶಾನ್ಯ ರಾಜ್ಯಗಳ ಯಾವುದಾದರೂ ಒಂದು ಸ್ಥಳದಲ್ಲಿ ಅತ್ಯಾಧುನಿಕ ಹಾಗೂ ಬೃಹತ್‌ ರಸಗೊಬ್ಬರ ಕಾರ್ಖಾನೆಯ ಘಟಕವನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್ಸ್‌ ಕಾರ್ಪೊರೇಷನ್‌ ಲಿ. (ಬಿವಿಎಫ್‌ಸಿ) ವತಿಯಿಂದ ಈ ಘಟಕವನ್ನು ಆರು ತಿಂಗಳ ಒಳಗೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ಸಂಸದ ಪಿ.ಸಿ.ಮೋಹನ್, ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಆರ್.ಅಶೋಕ, ರಾಜ್ಯದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ನಿರ್ಮಲ್‌ ಕುಮಾರ್‌ ಸುರಾನ, ಬಿಜೆಪಿಯ ಈಶಾನ್ಯ ರಾಜ್ಯಗಳ ಸಂಪರ್ಕ ಘಟಕದ ಸಂಚಾಲಕ ಸುನಿಲ್‌ ದೇವಧರ್‌, ಬಿಜೆಪಿಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮುನಿರಾಜು, ನಗರ ಜಿಲ್ಲಾ ಘಟಕದ ಅಧ್ಯಕ್ಷ ಸುಬ್ಬು ನರಸಿಂಹ, ಬಿಜೆಪಿ ಈಶಾನ್ಯ ಸಂಪರ್ಕ ಘಟಕದ ರಾಜ್ಯ ಸಹ ಸಂಚಾಲಕ ಶುಭಮ್‌ ಶೋಮ್‌, ಬೆಂಗಳೂರು ಅಸ್ಸಾಂ ಸೊಸೈಟಿ ಅಧ್ಯಕ್ಷ ಡಾ.ಸಿಮಂತ್‌ ಶರ್ಮಾ, ರಾಜ್ಯ ಸಂಚಾಲಕ ಸಂಪತ್‌ ಕುಮಾರ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT