ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅವಳಲ್ಲ,ಅವನು...!

ಸುತ್ತೋಲೆ ಹೊರಡಿಸಲು ಹೈಕೋರ್ಟ್‌ ನಿರ್ದೇಶನ
Last Updated 4 ಮೇ 2019, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶೈಕ್ಷಣಿಕ ದಾಖಲೆಗಳಲ್ಲಿ ತಮ್ಮ ಹೆಸರನ್ನು ಹೆಣ್ಣಿನಿಂದ ಗಂಡಿಗೆ ಅಥವಾ ಗಂಡಿನಿಂದ ಹೆಣ್ಣಿಗೆ ಪರಿವರ್ತಿಸುವಂತೆ ಕೋರಿ ಸಲ್ಲಿಸುವ ಮನವಿಗಳನ್ನು ಪರಿಗಣಿಸಬೇಕು. ಈ ಸಂಬಂಧ ಎಸ್ಸೆಸ್ಸೆಲ್ಸಿ, ಪಿಯುಸಿ, ವಿಶ್ವವಿದ್ಯಾಲಯಗಳಿಗೆ ಸೂಕ್ತ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಬೇಕು’ ಎಂದು ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಈ ಮಹತ್ವದ ಆದೇಶ ಪ್ರಕಟಿಸಿರುವ ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಯಾರೊಬ್ಬರೂ ಈ ಕುರಿತಂತೆ ಕೋರ್ಟ್ ಮೆಟ್ಟಿಲೇರಿ ಆದೇಶ ಪಡೆಯಬೇಕಾದ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಈಗಾಗಲೇ ಸುಪ್ರೀಂ ಕೋರ್ಟ್‌ನ (ನಾಲ್ಸಾ ವರ್ಸಸ್‌ ಕೇಂದ್ರ ಸರ್ಕಾರದ ಪ್ರಕರಣ) ತೀರ್ಪು ಸ್ಪಷ್ಟವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

‘ನಾನು ಅವಳಲ್ಲ, ಅವನು. ಆದ್ದರಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶೈಕ್ಷಣಿಕ ದಾಖಲೆಗಳಲ್ಲಿ ನನ್ನ ಹೆಸರನ್ನು ಹುಡುಗನ ಹೆಸರಿಗೆ ನಮೂದಿಸಲು ಶಿಕ್ಷಣ ಇಲಾಖೆಗೆ ನಿರ್ದೇಶಿಸಬೇಕು’ ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಪೀಠ 2019ರ ಮಾರ್ಚ್‌ 26ರಂದು ವಿಲೇವಾರಿ ಮಾಡಿದೆ.

ಪ್ರಕರಣವೇನು?: ಲಿಂಗ ಪರಿವರ್ತಿತ (ಟ್ರಾನ್ಸ್‌ಜೆಂಡರ್‌) ವ್ಯಕ್ತಿಯೊಬ್ಬರು 2018ರ ಅಕ್ಟೋಬರ್‌ 3ರಂದು, ‘ನಾನು ಈಗ ಹುಡಗಿಯಲ್ಲ. ಹುಡುಗನಾಗಿ ಬದಲಾಗಿದ್ದೇನೆ. ಆದ್ದರಿಂದ ಶೈಕ್ಷಣಿಕ ದಾಖಲೆಗಳಲ್ಲಿ ಹುಡುಗಿಯ ಹೆಸರಿಗೆ ಬದಲಾಗಿ ಹುಡುಗನ ಹೆಸರನ್ನು ನಮೂದು ಮಾಡಬೇಕು’ ಎಂದು ಶಿಕ್ಷಣ ಇಲಾಖೆಗೆ ಕೋರಿದ್ದರು.

ಆದರೆ, ಇಲಾಖೆ ಈ ಮನವಿಯನ್ನು ತಿರಸ್ಕರಿಸಿತ್ತು. ಇದರಿಂದಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ಅವರು, ‘ನನ್ನ ಹೆಸರನ್ನು ಜೀವಾ ಎಂ. ಮತ್ತು ನನ್ನ ಲಿಂಗವನ್ನು ಗಂಡು ಎಂದು ಬದಲಾಯಿಸಲು ಎಸ್ಸೆಸ್ಸೆಲ್ಸಿ ಹಾಗೂ ಪಿಯು ಮಂಡಳಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು, ‘ಈಗಾಗಲೇ 2013ರಲ್ಲಿ ಇದೇ ಹೈಕೋರ್ಟ್‌ ಇಂತಹುದೇ ಪ್ರಕರಣವೊಂದರಲ್ಲಿ ಆದೇಶ ನೀಡಿದ್ದು, ಇಂತಹ ಮನವಿಗಳನ್ನು ಪರಿಗಣಿಸುವಂತೆ ಇಲಾಖೆಗೆ ನಿರ್ದೇಶಿಸಿದೆ’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ಅರುಹಿದ್ದರು.

ಇದಕ್ಕೆ ಪ್ರತಿಯಾಗಿ ಸರ್ಕಾರದ ಪರ ವಕೀಲೆ ಪ್ರಮೋದಿನಿ ಕಿಷನ್‌ ಅವರು, ‘ಈ ರೀತಿಯ ಪ್ರಕರಣಗಳಲ್ಲಿ ಯಾವುದೇ ಮನವಿದಾರರ ಅಂಕಪಟ್ಟಿಗಳು, ಪ್ರಮಾಣ ಪತ್ರಗಳನ್ನು ವಿಲೇವಾರಿ ಮಾಡಲು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಂಡಳಿಗೆ ಸರ್ಕಾರದಿಂದ ನಿರ್ದಿಷ್ಟ ಸುತ್ತೋಲೆ, ಅಥವಾ ಮಾರ್ಗದರ್ಶಿ ಸೂತ್ರಗಳಿಲ್ಲ. ಆದ್ದರಿಂದ ಅರ್ಜಿದಾರರ ಮನವಿ ಮಾನ್ಯ ಮಾಡಲು ಕೋರ್ಟ್ ಆದೇಶದ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT