ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವದ ನೈತಿಕತೆಗೆ ಡಿಪ್ಲೊಮಾ ಕೋರ್ಸ್‌

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ
Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತಮ ರಾಜಕಾರಣಿಗಳನ್ನು ರೂಪಿಸುವ, ಅವರಲ್ಲಿ ವೃತ್ತಿಪರತೆ ಮತ್ತು ನೈತಿಕತೆ ಬೆಳೆಸುವ ಉದ್ದೇಶದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಬರುವ ಶೈಕ್ಷಣಿಕ ವರ್ಷದಿಂದ ನೂತನ ಕೋರ್ಸ್‌ ಆರಂಭಿಸಲಿದೆ.

ಪೌರ ನಾಯಕತ್ವ ಕುರಿತಾದ ಈ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ (ಪಿಜಿ ಡಿಪ್ಲೊಮಾ ಇನ್‌ ಸಿವಿಕ್‌ ಲೀಡರ್‌ಶಿಪ್‌) ಒಂದು ವರ್ಷ ಅವಧಿಯದ್ದಾಗಿದ್ದು, ಎರಡು ಸೆಮಿಸ್ಟರ್‌ನಲ್ಲಿ ಅಧ್ಯಯನ ಮಾಡಬೇಕಾಗುತ್ತದೆ.

‘ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ ವಿಷಯಗಳಲ್ಲಿ ಸಿದ್ಧಾಂತಕ್ಕೆ ಒತ್ತು ಕೊಟ್ಟರೆ, ಈ ಕೋರ್ಸ್‌ನಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದು ಕೋರ್ಸ್‌ನ ಸಂಯೋಜಕ ಹಾಗೂ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ. ಹರೀಶ್‌ ರಾಮಸ್ವಾಮಿ ಹೇಳುತ್ತಾರೆ.

ಬೋಧನೆ ಹೇಗೆ ?: ‘ಮೊದಲ ಸೆಮಿಸ್ಟರ್‌ನಲ್ಲಿ ರಾಜಕಾರಣಿಗಳು, ನಾಗರಿಕ ಹಕ್ಕುಗಳ ಹೋರಾಟಗಾರರು, ವಿಷಯ ತಜ್ಞರು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಎರಡನೇ ಸೆಮಿಸ್ಟರ್‌ನಲ್ಲಿ ಅನುಭವಿ ರಾಜಕಾರಣಿ ಅಥವಾ ಸಚಿವ, ಮಹಾನಗರ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳ ಜೊತೆಗಿದ್ದು, ಒಂದು ಯೋಜನಾ ವರದಿ ಸಿದ್ಧಪಡಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತದೆ’ ಎಂದು ಹರೀಶ್‌
ಹೇಳಿದರು.

ಪಕ್ಷ, ಆಡಳಿತ ಹಾಗೂ ಸರ್ಕಾರದ ಭಾಗವಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಕೋರ್ಸ್‌ನಲ್ಲಿ ಹೇಳಲಾಗುತ್ತದೆ ಎಂದು ತಿಳಿಸಿದರು.

ಯಾರು ಸೇರಬಹುದು?: ಯಾವುದೇ ಪದವೀಧರರು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಅನಕ್ಷರಸ್ಥ ಚುನಾಯಿತ ಜನಪ್ರತಿನಿಧಿಗಳ ಪ್ರವೇ
ಶಕ್ಕೂ ಅವಕಾಶ ಇದೆ. ಆದರೆ, ಅನಕ್ಷರಸ್ಥರಿಗೆ ತರಬೇತಿ ನೀಡಲು ಯಾವುದಾದರೊಂದು ಪಕ್ಷ, ಕಂಪನಿ ಅಥವಾ ಸಂಸ್ಥೆ ಪ್ರಾಯೋಜಕತ್ವ ನೀಡಬೇಕಾಗುತ್ತದೆ. 21ರಿಂದ 50ವರ್ಷದೊಳಗಿನವರು ಕೋರ್ಸ್‌ ಮಾಡಬಹುದು’ ಎಂದು ಹರೀಶ್‌ ಹೇಳಿದರು.

ಯಾವ ವಿಭಾಗ ?: ‘ನಾಯಕತ್ವ ಕುರಿತು ತರಬೇತಿ ನೀಡಲು ಕುಲಪತಿಯವರ ಅಧೀನದಲ್ಲಿ ಪ್ರತ್ಯೇಕ ಕೇಂದ್ರ ಬೇಕು ಎಂದು ಶಿಫಾರಸು ಮಾಡಿದ್ದೇವೆ. ಏಕೆಂದರೆ, ‘ನಾಯಕತ್ವ’ ವಿಷಯ ವಿಶಾಲವಾದದ್ದು. ಇದರಲ್ಲಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ನಿರ್ವಹಣಾ ವಿಷಯ ಬೋಧಿಸುವ ಎಲ್ಲರೂ ಬೇಕಾಗುತ್ತಾರೆ. ತಾತ್ಕಾಲಿಕವಾಗಿ ಈಗ ರಾಜ್ಯಶಾಸ್ತ್ರ ವಿಭಾಗದ ಅಡಿಯಲ್ಲಿ ಕೋರ್ಸ್‌ ಕಲಿಸ
ಲಾಗುತ್ತದೆ’ ಎಂದು ಕೋರ್ಸ್‌ನ ಅಧ್ಯಯನ ಮಂಡಳಿ ಸದಸ್ಯ ಸಂತೋಷ ನರಗುಂದ ಹೇಳಿದರು.

ಶುಲ್ಕವೆಷ್ಟು, ಸೀಟುಗಳೆಷ್ಟು ?: ಒಂದು ಶೈಕ್ಷಣಿಕ ವರ್ಷದಲ್ಲಿ 30 ಜನ ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಇದರಲ್ಲಿ ಶೇ 15ರಷ್ಟು ಅಂದರೆ,  5ರಿಂದ 8 ಸೀಟುಗಳು ಮಹಿಳೆಯರಿಗೆ ಮೀಸಲಿಡಲಾಗುತ್ತದೆ. ಶುಲ್ಕದ ಮೊತ್ತದ ಬಗ್ಗೆ ವಿಶ್ವವಿದ್ಯಾಲಯ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಎಲ್ಲ ಪಿಜಿ ಡಿಪ್ಲೊಮಾ ಕೋರ್ಸ್‌ಗಳಷ್ಟೇ ಈ ಕೋರ್ಸ್‌ಗೂ ಶುಲ್ಕ ನಿಗದಿ ಮಾಡಲಾಗುತ್ತದೆ ಎಂದು ಸಂತೋಷ ಹೇಳಿದರು.

ಸರ್ಕಾರಿ ಸಂಸ್ಥೆಯಲ್ಲಿ ಮೊದಲ ಬಾರಿ

‘ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಪೌರ ನಾಯಕತ್ವ ಕುರಿತು ಕೋರ್ಸ್‌ ಆರಂಭಿಸಲಾಗಿದೆ. ಉತ್ತರ ಭಾರತದಲ್ಲಿ ಕೆಲವು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಇದನ್ನು ಕಲಿಸಲಾಗುತ್ತಿದೆ. ಈಗ, ಕರ್ನಾಟಕ ವಿಶ್ವವಿದ್ಯಾಲಯ ಈ ಕೋರ್ಸ್‌ ಆರಂಭಿಸಿದ ದೇಶದ ಮೊದಲ ಸರ್ಕಾರಿ ಸಂಸ್ಥೆ ಎನಿಸಿಕೊಳ್ಳಲಿದೆ’ ಎಂದು ಸಂತೋಷ ನರಗುಂದ ಹೇಳಿದರು.

* ಶೈಕ್ಷಣಿಕ ಮಂಡಳಿ, ಸಿಂಡಿಕೇಟ್‌ನಿಂದ ಅನುಮೋದನೆ ಸಿಕ್ಕಿದೆ. ಬರುವ ಶೈಕ್ಷಣಿಕ ವರ್ಷದಿಂದಲೇ ಕೋರ್ಸ್‌ ಆರಂಭಿಸಲಾಗುವುದು

–ಪ್ರಮೋದ್‌ ಗಾಯಿ, ಕುಲಪತಿ, ಕವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT