ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನೀವೇನು ಮನುಷ್ಯರೋ, ಮೃಗಗಳೋ?'

ಸಿಸಿಬಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸಿವಿಲ್ ಪ್ರಕರಣವೊಂದರಲ್ಲಿ ತಮಗೆ ಬೇಕಿದ್ದ ವ್ಯಕ್ತಿಯನ್ನು ಪತ್ತೆ ಮಾಡಲು ಆತನ ಪುತ್ರಿಯನ್ನು ವಶಕ್ಕೆ ಪಡೆಯುವುದಾಗಿ `ಬೆದರಿಕೆ' ಒಡ್ಡಿದ್ದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರನ್ನು, `ನೀವೇನು ಮನುಷ್ಯರೋ ಅಥವಾ ಮೃಗಗಳೋ?' ಎಂದು ಹೈಕೋರ್ಟ್ ಬುಧವಾರ ಖಾರವಾಗಿ ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರಿನ ಭಾನು ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್,  `ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ನೀವು ಮುಂದಾಗುವುದು ಹೇಗೆ? ನೀವು ಸಿವಿಲ್ ನ್ಯಾಯಾಧೀಶರಾಗಿದ್ದು ಯಾವಾಗ?' ಎಂದು ಮೌಖಿಕವಾಗಿ ಪ್ರಶ್ನಿಸಿದರು.

ಗೋಪಾಲ್ ಎಂಬುವರು ಯಲಹಂಕ ಬಳಿಯ ಅಟ್ಟೂರು ಎಂಬಲ್ಲಿ ಚೆನ್ನಿಗಪ್ಪ ಎಂಬುವರಿಂದ ನಿವೇಶನ ಖರೀದಿಸಿದ್ದರು. ನಂತರದ ದಿನಗಳಲ್ಲಿ ಅದನ್ನು ಸುರೇಂದ್ರನಾಥ ಎಂಬುವರಿಗೆ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ನಂತರ ಸೋಮಶೇಖರ್ ಎಂಬುವರು ಇದೇ ನಿವೇಶನವನ್ನು ಚೆನ್ನಿಗಪ್ಪ ಅವರಿಂದ ತಾವು ಖರೀದಿ ಮಾಡಿರುವುದಾಗಿ ಹೇಳಿಕೊಂಡರು.

ಇದರಿಂದ ವಿಚಲಿತರಾದ ಸುರೇಂದ್ರನಾಥ, ಹಣ ಹಿಂದಿರುಗಿಸುವಂತೆ ಗೋಪಾಲ್ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ ಗೋಪಾಲ್ ಅವರು ಹಣ ಹಿಂದಿರುಗಿಸದ ಕಾರಣ, ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಇದರ ವಿಚಾರಣೆ ನಡೆಯುತ್ತಿದೆ.

ನಡುವೆ ಹೈಕೋರ್ಟ್ ಮೆಟ್ಟಿಲೇರಿದ ಗೋಪಾಲ್ ಪತ್ನಿಭಾನು, `ಪೊಲೀಸರು ಮನೆಗೆ ಬಂದು, 25 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಪದೇ ಪದೇ ಒತ್ತಡ ಹೇರುತ್ತಿದ್ದಾರೆ. ಗೋಪಾಲ್ ಅವರು ಎಲ್ಲಿದ್ದಾರೆ ಎಂಬುದನ್ನು ತಿಳಿಸದಿದ್ದರೆ, ಪುತ್ರಿಯನ್ನು ಠಾಣೆಗೆ ಕರೆದೊಯ್ಯುವುದಾಗಿ ಬೆದರಿಕೆ ಒಡ್ಡಿದ್ದಾರೆ. ಆಕೆ ಬಿ.ಕಾಂ ಪರೀಕ್ಷೆಗೆ ಹಾಜರಾಗಬೇಕಿದೆ' ಎಂದು ಅರ್ಜಿ ಸಲ್ಲಿಸಿದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಜೀರ್, `ಈ ಪ್ರಕರಣವು ಸಿವಿಲ್ ಸ್ವರೂಪದ್ದು. ಇದರಲ್ಲಿ ಮಧ್ಯಪ್ರವೇಶ ಮಾಡಲು ಸಿಸಿಬಿ ಪೊಲೀಸರಿಗೆ ಯಾವುದೇ ಅಧಿಕಾರ ಇಲ್ಲ. ಭಾನು ಅವರ ಕುಟುಂಬದ ಸದಸ್ಯರ ತಂಟೆಗೆ ಸಿಸಿಬಿ ಪೊಲೀಸರು ಹೋಗಬಾರದು. ಅವರ ಪುತ್ರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು' ಎಂದು ಆದೇಶಿಸಿದರು.

ಭಾನು ಅವರು ತಮ್ಮ ಸಂಕಷ್ಟ ಹೇಳಿಕೊಂಡ ನಂತರ, ನ್ಯಾಯಮೂರ್ತಿಗಳು ಸಿಸಿಬಿ ಅಧಿಕಾರಿ ಜನಾರ್ದನ್ ಅವರನ್ನು ಮೂರು ತಿಂಗಳು ಅಮಾನತಿನಲ್ಲಿ ಇಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಮುಂದಾದರು. ಆದರೆ ಅಧಿಕಾರಿಯ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ, ನಿರ್ಧಾರ ಕೈಬಿಟ್ಟರು.

ಈ ಪ್ರಕರಣದ ಕುರಿತು ನಗರ ಪೊಲೀಸ್ ಆಯುಕ್ತರು ವರದಿ ಸಿದ್ಧಪಡಿಸಿ, ಆರು ವಾರಗಳಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ವಿಚಾರಣೆ ಮುಂದೂಡಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT