ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಾರಥಿಗೆ ಹುಡುಕಾಟ: ಡಿ.16ರಂದು ಸಭೆ

ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ನಿರ್ದೇಶಕ ಪ್ರೊ.ಶರ್ಮಾ ದಿಢೀರ್‌ ರಾಜೀನಾಮೆ!
Last Updated 27 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಲವು ನಿರೀಕ್ಷೆಗಳೊಂದಿಗೆ ಧಾರವಾಡದಲ್ಲಿ ಆರಂಭವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಗೆ ಒಂದೂವರೆ ತಿಂಗಳ ಹಿಂದಷ್ಟೇ ನೇಮಕವಾಗಿದ್ದ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ.

ನಿರ್ದೇಶಕರ ಹುದ್ದೆಗೆ ನಡೆದ ತೀವ್ರ ಪೈಪೋಟಿಯ ನಡುವೆ ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ಸಿ. ಶರ್ಮಾ ಅವರನ್ನು ನೇಮಕ ಮಾಡಲಾಗಿತ್ತು. ಆದರೆ ಅವರೀಗ ವೈಯಕ್ತಿಕ ಕಾರಣ ನೀಡಿ ನ. 19ರಂದು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದನ್ನು ಐಐಐಟಿ ಆಡಳಿತ ಮಂಡಳಿ ಮೂರು ದಿನಗಳ ಹಿಂದೆ ಅಂಗೀಕರಿಸಿದೆ. ಪ್ರೊ. ಶರ್ಮಾ ಅಧಿಕಾರ ಹಸ್ತಾಂತರಿಸಿದ್ದಾರೆ.

ಕರ್ನಾಟಕ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಿರುವ ಐಐಐಟಿ ನಿರ್ದೇಶಕರ ಹುದ್ದೆಗೆ ಪ್ರೊ. ಶರ್ಮಾ ಅವರಲ್ಲದೆ ಗುವಾಹಟಿ ಐಐಟಿ ಪ್ರಾಧ್ಯಾಪಕ ಪ್ರೊ. ಪ್ರದೀಪ ಯಮ್ಮಿಯವರ, ಹಾಸನ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಡಾ. ಮೋಹನ ಕುಮಾರ ಮತ್ತು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜಿನ ಡಾ. ಕೆ.ಪಿ. ವಿಠ್ಠಲ ಪೈಪೋಟಿಯಲ್ಲಿದ್ದರು. ಇವರಲ್ಲಿ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ನೇತೃತ್ವದ ಐಐಐಟಿ ನಿರ್ವಹಣಾ ಮಂಡಳಿಯು ಪ್ರೊ. ಶರ್ಮಾ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಿತ್ತು.

ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದ ಪ್ರೊ. ಶರ್ಮಾ 43 ದಿನ ಕೆಲಸ ಮಾಡಿದ್ದರು. ಈ ನಡುವೆ ಧಾರವಾಡ ತಾಲ್ಲೂಕಿನ ಸಲಕಿನಕೊಪ್ಪದ ಬಳಿ ನೂತನ ಸಂಸ್ಥೆಗೆ ಜಾಗ ಮಂಜೂರಾತಿ ಅಲ್ಲದೆ ಮಾಹಿತಿ ತಂತ್ರಜ್ಞಾನ ಅಧ್ಯಯನದ ಜೊತೆಗೆ ಉತ್ತರ ಕರ್ನಾಟಕ ಜಾನಪದ, ಸಾಂಸ್ಕೃತಿಕ ಸೊಬಗು ಪ್ರತಿಬಿಂಬಿಸುವ ಪ್ರಾದೇಶಿಕ ವಸ್ತು ಸಂಗ್ರಹಾಲಯ ನಿರ್ಮಿಸುವ ಉದ್ದೇಶದಿಂದ ಕಾರ್ಯಯೋಜನೆ ರೂಪಿಸಿದ್ದರು.

ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ, ಪುಟ್ಟರಾಜ ಗವಾಯಿಗಳು, ದ.ರಾ. ಬೇಂದ್ರೆ, ಶಿಶುನಾಳ ಶರೀಫ, ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಕ್ಷೇತ್ರಗಳ ದಿಗ್ಗಜರ ಸ್ಮಾರಕ ಸ್ಥಾಪನೆಯ ಮಾಹಿತಿಗಾಗಿ ಅವರು ಪ್ರಸ್ತಾವ ಸಿದ್ಧಪಡಿಸಿದ್ದರು ಎನ್ನಲಾಗಿದೆ. ಈ ಎಲ್ಲದರ ನಡುವೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ದಿಢೀರ್ ರಾಜೀನಾಮೆ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರೊ. ಶರ್ಮಾ, ‘ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ. ಅದರಲ್ಲಿ ಬೇರೆ ಏನೂ ಉದ್ದೇಶ ಇಲ್ಲ. ನಮ್ಮ ತಂದೆಗೆ 92 ವರ್ಷ. ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುತ್ತಿದೆ. ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಮಗನಿಗೆ ಮನೆ ಮತ್ತು ಕೆಲಸ ಎರಡೂ ಕಡೆ ನಿರ್ವಹಣೆ ಕಷ್ಟವಾಗುತ್ತಿದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಲು ನನಗೂ ಕೆಲಸದ ಒತ್ತಡದಿಂದ ಆಗುತ್ತಿರಲಿಲ್ಲ. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ತಂದೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದರು.

‘ನಿರ್ದೇಶಕರಾಗಿದ್ದ ಪ್ರೊ. ಶರ್ಮಾ ಮತ್ತು ಇಲ್ಲಿಯ ಬೋಧನಾ ಸಿಬ್ಬಂದಿ ನಡುವೆ ಆರಂಭದಿಂದಲೂ ಹೊಂದಾಣಿಕೆ ಇರಲಿಲ್ಲ. ಇದು ವೈಯಕ್ತಿಕ ಪ್ರತಿಷ್ಠೆಯಾಗಿ ಸಂಬಂಧದ ಕೊಂಡಿ ಸಾಕಷ್ಟು ಕಳಚಿಕೊಂಡಿತ್ತು. ಈ ಕುರಿತು ಬಹುತೇಕ ಸಿಬ್ಬಂದಿ ಪ್ರೊ. ಶರ್ಮಾ ವಿರುದ್ಧ ಆಡಳಿತ ಮಂಡಳಿ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದರು’ ಎಂದು ಐಐಐಟಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ ಭ್ರಷ್ಟಾಚಾರದ ಆರೋಪ ಹೊರಿಸಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಹ ಆಕ್ಷೇಪ ಸಲ್ಲಿಸಿದ್ದರು. ‘ಅವರ (ಶರ್ಮಾ) ಬದಲಾವಣೆ ಮಾಡದಿದ್ದರೆ ಹೋರಾಟ ನಡೆಸುವುದಾಗಿ’ ತಿಳಿಸಿದ್ದರು. ಅಲ್ಲದೆ ಸುಮಾರು 130 ಪುಟಗಳ ಆರೋಪ ಪಟ್ಟಿಯನ್ನೂ ಸಿದ್ಧಪಡಿಸಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ.

ಸುಧಾ ಮೂರ್ತಿ ಅಧ್ಯಕ್ಷತೆಯಲ್ಲಿ ಬೆಂಗಳೂರು ಐಐಐಟಿ ನಿರ್ದೇಶಕ ಸಡಗೋಪನ್, ಹೈದರಾಬಾದ್‌ ಐಐಟಿಯ ಉದಯ ದೇಸಾಯಿ, ಬೆಂಗಳೂರು ಐಐಎಸ್‌ಸಿ ನಿರ್ದೇಶಕ ಬಲರಾಂ, ರಾಜ್ಯ ಸರ್ಕಾರದ ಐಟಿ, ಬಿಟಿ ಇಲಾಖೆ ನಿವೃತ್ತ ಕಾರ್ಯದರ್ಶಿ ವಿದ್ಯಾಶಂಕರ್, ಬಾಂಬೆ ಐಐಟಿ ನಿರ್ದೇಶಕ ಕಾಕೋಡ್ಕರ್, ಉದ್ಯಮಿ ಕಿರ್ಲೋಸ್ಕರ್ ಅವರನ್ನು ಒಳಗೊಂಡ ಸಮಿತಿಯು ಡಿ.16ರಂದು ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ನೂತನ ನಿರ್ದೇಶಕರ ನೇಮಕ ಮಾಡುವ ಸಾಧ್ಯತೆಗಳಿವೆ.

ಹಿಂದೆ ಸಂದರ್ಶನದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳ ಪೈಕಿ ಒಬ್ಬರನ್ನು ನೇಮಕ ಮಾಡಬಹುದು ಅಥವಾ ಮತ್ತೊಮ್ಮೆ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡಬಹುದು. ಈ ಕುರಿತು ಸಭೆಯಲ್ಲಿಯೇ ನಿರ್ಧಾರವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT