ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ನೀತಿ ಪರಿಷ್ಕರಣೆ

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮರಳು ನೀತಿಯಲ್ಲಿ ಲೋಪಗಳು ಇರುವುದನ್ನು ಸರ್ಕಾರ ಮನಗಂಡಿದ್ದು, ಶೀಘ್ರದಲ್ಲೇ ಪರಿಷ್ಕೃತ ಮರಳು ನೀತಿಯನ್ನು ರೂಪಿಸಿ, ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸಭೆಗೆ ತಿಳಿಸಿದರು.

ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, `ಈಗ ಜಾರಿಯಲ್ಲಿರುವ ಮರಳು ನೀತಿಯಲ್ಲಿ ಲೋಪ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಲವೆಡೆ ಮರಳಿನ ಕಳ್ಳ ಸಾಗಣೆ ನಡೆಯುತ್ತಿರುವುದು ನಿಜ. ಮರಳು ತೆಗೆಯುವುದರಲ್ಲೂ ಅಕ್ರಮ ನಡೆಯುತ್ತಿದೆ.

ಈ ಎಲ್ಲವನ್ನೂ ಸಂಪೂರ್ಣವಾಗಿ ನಿಯಂತ್ರಿಸಲು ಅವಕಾಶ ನೀಡುವಂತೆ ಮರಳು ನೀತಿ ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಈ ದಿಸೆಯಲ್ಲಿ ನಾಲ್ಕು ಬಾರಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಎಲ್ಲ ಸದಸ್ಯರೂ ಈ ನಿಟ್ಟಿನಲ್ಲಿ ಸಲಹೆಗಳನ್ನು ನೀಡಬೇಕು' ಎಂದು ಮನವಿ ಮಾಡಿದರು.

ರೂ 223 ಕೋಟಿ ದಂಡ: ತುಮಕೂರು ಜಿಲ್ಲೆಯ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸಿರುವ 13 ಗಣಿ ಗುತ್ತಿಗೆದಾರರಿಗೆ 223.37 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ದಿನೇಶ ಗುಂಡೂರಾವ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿಯವರು, `13 ಗಣಿ ಗುತ್ತಿಗೆಗಳಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸಿರುವುದು ಜಂಟಿ ಸರ್ವೆ ಸಮಯದಲ್ಲಿ ಪತ್ತೆಯಾಗಿದೆ. ಅಕ್ರಮ ಎಸಗಿರುವವರಿಗೆ ರೂ 223.37 ಕೋಟಿ ದಂಡ ವಿಧಿಸಲಾಗಿದೆ. ಈ ಪೈಕಿ 6.96 ಕೋಟಿ ರೂಪಾಯಿ ಮಾತ್ರ ವಸೂಲಿಯಾಗಿದೆ. 216.40 ಕೋಟಿ ರೂಪಾಯಿ ದಂಡ ಇನ್ನೂ ವಸೂಲಿಯಾಗಬೇಕಿದೆ' ಎಂದು ವಿವರ ನೀಡಿದ್ದಾರೆ.

ರೂ 590.40 ಕೋಟಿ ಬಿಡುಗಡೆ: ರಾಜ್ಯದ 157 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಸರ್ಕಾರ ಘೋಷಿಸಿದ್ದು, ಬರ ಪರಿಹಾರ ಕಾರ್ಯಕ್ರಮಗಳಿಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 590.40 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

    ಕಾಂಗ್ರೆಸ್‌ನ ವಿ.ಮುನಿಯಪ್ಪ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, `ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ರೂ 584.5 ಕೋಟಿ ಬಿಡುಗಡೆ ಮಾಡಲಾಗಿದೆ. ರೂ 5.90 ಕೋಟಿಯನ್ನು ಪೊಲೀಸ್ ಮಹಾನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಆಯುಕ್ತರು ಹಾಗೂ ಕೊಯ್ನಾ ಅಣೆಕಟ್ಟೆಯ ನೀರು ಬಿಡುಗಡೆಗೆ ಪಾವತಿಸಲಾಗಿದೆ' ಎಂದರು.

ಮಾಸಿಕ ರೂ 30.59 ಕೋಟಿ ಮಾಸಾಶನ:ರಾಜ್ಯದಲ್ಲಿ ವೃದ್ಧಾಪ್ಯ ವೇತನ ಯೋಜನೆಯಡಿ 2.31 ಲಕ್ಷ ಪುರುಷರು ಮತ್ತು 3.80 ಲಕ್ಷ ಮಹಿಳೆಯರು ಸೇರಿ ಒಟ್ಟು 6.11 ಲಕ್ಷ ಫಲಾನುಭವಿಗಳು ಮಾಸಾಶನ ಪಡೆಯುತ್ತಿದ್ದಾರೆ. ಇದಕ್ಕಾಗಿ ಮಾಸಿಕ 30.59 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಉಪ ಮುಖ್ಯಮಂತ್ರಿಯವರು, `60ರಿಂದ 64 ವರ್ಷದ ವೃದ್ಧರಿಗೆ ಮಾಸಿಕ ರೂ 200 ಮಾಸಾಶನ ನೀಡಲಾಗುತ್ತಿದೆ. ಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ. 65ರಿಂದ 79 ವರ್ಷದ ವೃದ್ಧರಿಗೆ ಮಾಸಿಕ ರೂ 500 ಮಾಸಾಶನ ನೀಡುತ್ತಿದ್ದು, ರಾಜ್ಯ ಸರ್ಕಾರ ರೂ 300 ಮತ್ತು ಕೇಂದ್ರ ಸರ್ಕಾರ ರೂ 200 ಭರಿಸುತ್ತಿವೆ. 80 ವರ್ಷಕ್ಕೆ ಮೇಲ್ಪಟ್ಟವರಿಗೆ ರೂ 500 ಮಾಸಾಶನ ನೀಡುತ್ತಿದ್ದು, ಪೂರ್ಣ ಮೊತ್ತವನ್ನು ಕೇಂದ್ರ ಸರ್ಕಾರವೇ ಪಾವತಿಸುತ್ತಿದೆ' ಎಂದು ವಿವರ ಒದಗಿಸಿದ್ದಾರೆ.

1530 ಮೆ.ವಾ. ವಿದ್ಯುತ್ ಖರೀದಿಗೆ ಒಪ್ಪಂದ: ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದಲ್ಲಿನ ವಿದ್ಯುತ್ ಕೊರತೆಯನ್ನು ನೀಗಿಸಲು ಖಾಸಗಿ ವಿದ್ಯುತ್ ಉತ್ಪಾದಕರಿಂದ ಮುಂದಿನ ವರ್ಷದ ಜೂನ್ 15ರ ವರೆಗೆ 1530 ಮೆಗಾವಾಟ್ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇದರೊಂದಿಗೆ ಡಿಸೆಂಬರ್‌ನಿಂದ ಫೆಬ್ರುವರಿವರೆಗೆ 100 ಮೆ.ವಾ. ವಿದ್ಯುತ್ ಅನ್ನು ಗರಿಷ್ಠ ಬೇಡಿಕೆ ಅವಧಿಯಲ್ಲಿ ಖರೀದಿಸಲು ಸಹ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT