ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ರಕ್ಷಣೆಗೆ ಪಡೆ: ಸರ್ಕಾರದ ಚಿಂತನೆ

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಖನಿಜಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ಅಪರಾಧ ಚಟುವಟಿಕೆ ನಿಯಂತ್ರಿಸಲು ‘ಖನಿಜ ಸಂರಕ್ಷಣಾ ಪಡೆ’ ರಚಿಸುವ ಚಿಂತನೆ ಸರ್ಕಾರಕ್ಕೆ ಇದೆ ಎಂದು ಸಭಾನಾಯಕ ಎಸ್‌.ಆರ್‌. ಪಾಟೀಲ ಅವರು ವಿಧಾನ ಪರಿಷತ್ತಿಗೆ ಬುಧವಾರ ತಿಳಿಸಿದರು.

ಅಕ್ರಮ ಮರಳು ಗಣಿಗಾರಿಕೆ ಕುರಿತು ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಜೆಡಿಎಸ್‌ನ ಬಸವರಾಜ ಹೊರಟ್ಟಿ, ಬಿಜೆಪಿಯ ಅಶ್ವತ್ಥ ನಾರಾ­ಯಣ ಇತರರು ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯ­ಮಂತ್ರಿಗಳ ಪರವಾಗಿ ಉತ್ತರಿಸಿದ ಪಾಟೀಲ, ‘ಬೆಂಗ­ಳೂರು ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಮರಳಿನ ನಿಕ್ಷೇಪ ಇಲ್ಲ. ಹಾಗಾಗಿ ಕೃತಕ ಮರಳು (ಎಂ–ಸ್ಯಾಂಡ್‌) ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾ­ಗುತ್ತಿದೆ’ ಎಂದರು.

ಎಂ–ಸ್ಯಾಂಡ್‌ ಗುಣಮಟ್ಟ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯಿಂದ (ಐಐಎಸ್‌ಸಿ) ವರದಿ ಪಡೆ­ಯಲಾಗಿದೆ. ಇದು ನೈಸರ್ಗಿಕ ಮರಳಿನ ಗುಣಲಕ್ಷಣ ಹೊಂದಿದೆ, ಕೆಲವು ಅಂಶಗಳಲ್ಲಿ ಇದು ನದಿ ಮರಳಿಗಿಂತ ಉತ್ತಮವಾಗಿದೆ ಎಂದು ಐಐಎಸ್‌ಸಿ ಹೇಳಿದೆ.

ಬೆಂಗಳೂರಿನಲ್ಲಿ ಬೃಹತ್‌ ಕಟ್ಟಡಗಳ ನಿರ್ಮಾಣ ಮತ್ತು ವಿವಿಧ ಯೋಜನೆಗಳಿಗೆ ಎಂ–ಸ್ಯಾಂಡ್‌ ಬಳಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಾರ್ಷಿಕ 20ರಿಂದ 23 ದಶಲಕ್ಷ ಟನ್‌ ಮರಳು ಬೇಡಿಕೆ ಇದೆ. ಆದರೆ 7.5 ದಶಲಕ್ಷ ಟನ್‌ ನದಿ ಮರಳು ಮತ್ತು 1.5 ದಶಲಕ್ಷ ಎಂ–ಸ್ಯಾಂಡ್‌ ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.

ಮರಳು ಮಾಫಿಯಾ ವಿರುದ್ಧ ಆಕ್ರೋಶ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವಿಧಾನಸಭೆಯಲ್ಲಿ ಬುಧವಾರ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು. ‘ರಾಜ್ಯದ ಎಲ್ಲ ನದಿ ಪಾತ್ರ­ಗಳಿಂದ ಮರಳು ಖಾಲಿ ಆಗು­ತ್ತಿ­ದ್ದರೂ ರಾಜಸ್ವ ಸಂಗ್ರಹ ಆಗುತ್ತಿಲ್ಲ. ಅಧಿ­ಕಾರಿಗಳ ಜೇಬು ಮಾತ್ರ ತುಂಬುತ್ತಲೇ ಇದೆ’ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆ ಮೇಲಿನ ಚರ್ಚೆ­ಯಲ್ಲಿ ಪಾಲ್ಗೊಂಡ ವಿರೋಧ ಪಕ್ಷದ ನಾಯಕ ಜಗ­ದೀಶ ಶೆಟ್ಟರ್‌, ‘ಹಾವೇರಿ, ಯಾದಗಿರಿ, ಮೈಸೂರು ಮತ್ತು ಕಾರವಾರ ಜಿಲ್ಲೆಗಳಲ್ಲಿ ಅಕ್ರಮ ಮರಳು ದಂಧೆ ಜೋರಾಗಿ ನಡೆದಿದೆ. ಬೆಂಗಳೂರಿನಲ್ಲಿ ಲೋಡ್‌ ಮರಳು ₨ 50 ಸಾವಿರದಿಂದ ₨ 1 ಲಕ್ಷದವರೆಗೆ ಮಾರಾಟ ಆಗುತ್ತಿದೆ’ ಎಂದು ದೂರಿದರು. ತಮ್ಮ ದೂರಿಗೆ ಪೂರಕವಾಗಿ ಕೆಲವು ದಾಖಲೆಗಳನ್ನೂ ಅವರು ಸದನದಲ್ಲಿ ಮಂಡಿಸಿದರು.

ಸಚಿವರ ಪುತ್ರನ ವಿರುದ್ಧ ಆರೋಪ: ‘ಲೋಕೋಪ­ಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಪುತ್ರನೂ ಈ ದಂಧೆಯಲ್ಲಿ ಭಾಗಿಯಾದ ಆರೋಪಗಳಿವೆ. ಇಂತಹ ಕಳಂಕ ಅಂಟ­ದಂತೆ ಸಚಿವರು ನೋಡಿ­ಕೊಳ್ಳ­ಬೇಕು’ ಎಂದು ಸಲಹೆ ನೀಡಿದರು. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಚಿವರು, ‘ಅವ್ಯವಹಾರ­ಗಳನ್ನು ತಡೆಗಟ್ಟಲು ಮುಂದಾದಾಗ ಇಂತಹ ಆರೋಪಗಳು ಬರುವುದು ಸಹಜ. ಆದರೆ, ಮರಳು ಮಾಫಿಯಾ­ವನ್ನು ಸರ್ಕಾರ ಮಟ್ಟ ಹಾಕಲಿದೆ’ ಎಂದು ಹೇಳಿದರು.

‘ಒಂದೆಡೆ ಅವ್ಯಾಹತವಾಗಿ ನಡೆ­ದಿ­ರುವ ಮರಳು ಗಣಿಗಾರಿಕೆಯಿಂದ ಅಂತ­ರ್ಜಲ ಕುಸಿದಿದ್ದು, ಪರಿಸರ ನಾಶ­ವಾಗಿದೆ. ಇನ್ನೊಂದೆಡೆ ಮಧ್ಯಮ ವರ್ಗ­ದ­ವರಿಗೆ ಮನೆ ಕಟ್ಟಲು ಮರಳು ಸಿಗು­ತ್ತಿಲ್ಲ’ ಎಂದು ಶೆಟ್ಟರ್‌ ಅಸಮಾಧಾನ ವ್ಯಕ್ತ­ಪಡಿಸಿದರು. ‘ಸರ್ಕಾರ ಮರಳು ಗಣಿ­ಗಾರಿಕೆಗೆ ಹೊಸ ನೀತಿಯನ್ನು ತಂದಿ­ದ್ದರೂ ಯಾವುದೇ ಪ್ರಯೋಜನ­ವಾಗಿಲ್ಲ. ಮರಳು ಸಾಗಿಸುವ ವಾಹನ­ಗಳಿಗೆ ಹಳದಿ ಬಣ್ಣ ಹಚ್ಚಿರಬೇಕು ಎಂಬ ನಿಯಮವಿದೆ. ಆದರೆ, ಮರಳು ತುಂಬಿ­ಕೊಂಡು ಬಂದ ಅಂತಹ ಒಂದೇ ಒಂದು ಹಳದಿ ಬಣ್ಣದ ವಾಹನವನ್ನೂ ನಾನು ನೋಡಿಲ್ಲ’ ಎಂದು ಚುಚ್ಚಿದರು.

‘ಆನೇಕಲ್‌ ತಾಲ್ಲೂಕಿನ ಜಿಗಣಿ ಹಾಗೂ ಕಸಬಾ ಹೋಬಳಿಗಳಲ್ಲಿ ಫಿಲ್ಟರ್‌ ಮರಳು ದಂಧೆ ಜೋರಾಗಿ ನಡೆ­­ದಿದೆ. ಅಧಿಕಾರಿಗಳು ಅವುಗಳ ಮೇಲೆ ದಾಳಿ ನಡೆ­ಸದೆ ಸುಮ್ಮನಿದ್ದಾರೆ’ ಎಂದು ದೂರಿ­ದರು. ಶೆಟ್ಟರ್‌ ಮಾತಿಗೆ ದನಿ­ಗೂ­ಡಿ­ಸಿದ ಜೆಡಿಎಸ್‌ನ ಎನ್‌.ಚೆಲು­ವರಾಯ­ಸ್ವಾಮಿ, ‘ಎತ್ತಿನ ಗಾಡಿಯಲ್ಲಿ ಮರಳು ಒಯ್ಯುವವರು, ದೇವಸ್ಥಾನ ಕಟ್ಟುವ­ವರು ಮಾತ್ರ ನಮ್ಮ ಅಧಿಕಾರಿಗಳಿಗೆ ಕಾಣು­ತ್ತಾರೆ. ನೂರಾರು ಲಾರಿಗಳ ಮೂಲಕ ದಂಧೆ ನಡೆಸುವವರು ಕಾಣಿ­ಸುವುದೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು. ಜನ­ಸಾಮಾನ್ಯರಿಗೆ ಸುಲಭದ ದರದಲ್ಲಿ ಮರಳು ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು. ‘ಬೆಂಗಳೂರು ನಗರಕ್ಕೆ ಬರುವ ಮರಳಿನ ಲಾರಿಗಳಿಂದ ಅಧಿಕಾರಿಗಳು ನಿತ್ಯ ₨ 8ರಿಂದ 10 ಲಕ್ಷ ಹಣ ಸಂಗ್ರಹ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಬಿಜೆಪಿಯ ಸಿ.ಟಿ. ರವಿ, ‘ದಂಡದ ಮೊತ್ತ ಜಾಸ್ತಿ ಆದಂತೆ ಲಂಚದ ದರವೂ ಜಾಸ್ತಿಯಾಗಿದೆ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಪಾಳೆಯದಿಂದಲೂ ಮರಳು ದಂಧೆ ಕುರಿತು ದೂರುಗಳು ಕೇಳಿಬಂದವು. ‘ಮರಳು ದಂಧೆ ಮಟ್ಟ ಹಾಕುವ ಸಲುವಾಗಿ ಗೂಂಡಾ ಕಾಯ್ದೆ ಪ್ರಯೋಗಿಸಲು ಯತ್ನ ನಡೆದಿದೆ’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT