ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿ, ಚರ್ಚ್‌ಗಳಿಗೆ ದೇವಸ್ಥಾನದ ಹಣ ಕೊಡಲ್ಲ

ಹಿಂದೂ ದೇವಾಲಯದ ಹಣ ಇತರೆ ಧರ್ಮದವರಿಗೆ ಬಳಕೆ ಆರೋಪ: ಮುಜರಾಯಿ ಸಚಿವ ಲಮಾಣಿ ಸ್ಪಷ್ಟನೆ
Last Updated 14 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದೂ ದೇವಸ್ಥಾನಗಳ ಆದಾಯವನ್ನು ಹಜ್‌ ಯಾತ್ರೆ, ಮಸೀದಿ, ಚರ್ಚ್‌ಗಳಿಗೆ ನೀಡುವುದಿಲ್ಲ’ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸ್ಪಷ್ಟಪಡಿಸಿದರು.

‘ಹಿಂದೂ ದೇವಾಲಯಗಳ ಆದಾಯವನ್ನು ಬೇರೆ ಧರ್ಮಗಳ ಪ್ರಾರ್ಥನಾ ಮಂದಿರಗಳಿಗೆ ಬಳಕೆ ಮಾಡಲಾಗುತ್ತದೆ ಎಂಬ ಮಾಹಿತಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ. ಇಂತಹ ಮಾಹಿತಿಯನ್ನು ನಂಬಬಾರದು’ ಎಂದು ಅವರು ಮನವಿ ಮಾಡಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆ ಬಸವರಾಜ ಪಾಟೀಲ ಯತ್ನಾಳ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

‘ಕೆಲವರು ಹಿಂದೂ ಧರ್ಮದ ಬಗ್ಗೆ ವೀರಾವೇಶದ ಮಾತುಗಳನ್ನಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿಗಳನ್ನು ಹರಡುತ್ತಾರೆ. ಆದರೆ, ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದರು.

‘ದೇವಸ್ಥಾನಗಳ ಅರ್ಚಕರು ಮತ್ತು ಇತರೆ ಸಿಬ್ಬಂದಿಯ ವೇತನವನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿದೆ’ ಎಂದೂ ಸಚಿವರು ಹೇಳಿದರು.

‘ಮುಜರಾಯಿ ಇಲಾಖೆ ವ್ಯಾಪ್ತಿಯ 34,559 ದೇವಸ್ಥಾನಗಳ ಪೈಕಿ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಿಂದ 2015–16ರಲ್ಲಿ ₹ 476.21 ಕೋಟಿ ಆದಾಯ ಬಂದಿದೆ. ಇದರಲ್ಲಿ ₹ 314 ಕೋಟಿ ಖರ್ಚು ಮಾಡಲಾಗಿದೆ. ಉಳಿದ ₹ 161 ಕೋಟಿ ಎಲ್ಲಿದೆ?  ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಹಜ್‌ ಯಾತ್ರಾರ್ಥಿಗಳಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ?’ ಎಂದು ಪ್ರಶ್ನಿಸಿದರು.

‘ಎ ವರ್ಗದ ದೇವಸ್ಥಾನಗಳಲ್ಲಿ ಸಂಗ್ರಹ ಆದಾಯದ ಶೇ 10ರಷ್ಟು ಮತ್ತು ಬಿ ವರ್ಗದ ದೇವಸ್ಥಾನಗಳಿಂದ ಶೇ 5ರಷ್ಟು ಮಾತ್ರ ಸರ್ಕಾರ ಪಡೆಯುತ್ತದೆ. ಉಳಿದ ಹಣ ಆ ದೇವಸ್ಥಾನದ ಅಭಿವೃದ್ಧಿಗೆ ಬಳಕೆ ಆಗುತ್ತದೆ. ಅಭಿವೃದ್ಧಿ ಕಾರ್ಯಗಳ ನಂತರವೂ ಉಳಿದ ಹಣವನ್ನು ದೇವಸ್ಥಾನದ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಧಾರ್ಮಿಕ ದತ್ತಿ ಪರಿಷತ್ ನೇಮಕ ಮಾಡಿದ ನಂತರ ದೇವಸ್ಥಾನದ ಆದಾಯದ ಶೇ 60ರಷ್ಟು ಹಣವನ್ನು ಅದೇ ದೇವಸ್ಥಾನಕ್ಕೆ ಮತ್ತು ಶೇ 40ರಷ್ಟು ಹಣವನ್ನು ಸಮೀಪದ ಇತರೆ ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಹಣದ ಲಭ್ಯತೆಗೆ ಅನುಗುಣವಾಗಿ  ದೇವಸ್ಥಾನ ಅಷ್ಟೇ ಅಲ್ಲ ಆ ಗ್ರಾಮ ಅಥವಾ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳಚರಂಡಿ, ಶೌಚಾಲಯ, ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವಾಸಿಗರು ಉಳಿದುಕೊಳ್ಳಲು ವಸತಿ ಸೌಲಭ್ಯವನ್ನೂ ಕಲ್ಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT