ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರು ನುಡಿ - ನೂರು ದುಡಿ’ ಇಂದು

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಡಾ.ಬಿ.ಆರ್‌. ಅಂಬೇಡ್ಕರ್ ಅವರ 126ನೇ ಜನ್ಮ ವರ್ಷಾಚರಣೆ ಅಂಗವಾಗಿ ಇದೇ 21ರಿಂದ 23ರವರೆಗೆ ನಗರದ ಜಿ.ಕೆ.ವಿ.ಕೆ. ಆವರಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮಾವೇಶವನ್ನು ಮಾನವ ಹಕ್ಕುಗಳ ಕಾರ್ಯಕರ್ತ ಮಾರ್ಟಿನ್‌ ಲೂಥರ್‌ ಕಿಂಗ್‌–3 ಉದ್ಘಾಟಿಸುವರು ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದರು.

‘ಸಾಮಾಜಿಕ ನ್ಯಾಯ ಮರು ಸ್ಥಾಪನೆ– ಅಂಬೇಡ್ಕರ್‌ ಚಿಂತನೆಗಳ ಪುನರ್‌ ಅವಲೋಕನ’ (ರೀಕ್ಲೈಮಿಂಗ್‌ ಸೋಷಿಯಲ್ ಜಸ್ಟೀಸ್‌– ರೀವಿಸಿಟಿಂಗ್ ಅಂಬೇಡ್ಕರ್‌) ಎಂಬ ವಿಷಯದ ಕುರಿತು ನಡೆಯಲಿರುವ ಈ ಸಮಾವೇಶದಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೂ ಭಾಗವಹಿಸುವರು.  ಇದೇ 20 ರಂದು ರಾಜ್ಯದ 30 ಜಿಲ್ಲೆಗಳಲ್ಲಿ ‘ಮೂರು ನುಡಿ -ನೂರು ದುಡಿ’ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಬುಧವಾರ ಅವರು ಹೇಳಿದರು.

‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅಂಬೇಡ್ಕರ್‌ ಅವರ ಮೂರು ನುಡಿಗಳೊಂದಿಗೆ ಸಂಜೆ 6 ಗಂಟೆಯಿಂದ 6.30ರವರೆಗೆ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಾದ್ಯಂತ 150 ತಂಡಗಳ 1,500 ಚರ್ಮ ವಾದ್ಯಗಾರರು ವಾದ್ಯಗಳನ್ನು ನುಡಿಸಲಿದ್ದಾರೆ. 60 ತಂಡಗಳ 600 ಗಾಯಕರು ಅಂಬೇಡ್ಕರ್ ಕುರಿತು ಹಾಡುಗಳನ್ನು ಹಾಡಲಿದ್ದಾರೆ. 30 ವಿದ್ವಾಂಸರು ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ತಮಿಳುನಾಡಿನ ಮಹಿಳಾ ವಾದ್ಯಗಾರರು ಬ್ರೆಜಿಲ್‌ನ ಆದಿವಾಸಿ ವಾದ್ಯಗಳನ್ನು ನುಡಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ವಾದ್ಯ ನುಡಿಸಿ ಮೆರುಗು ನೀಡಲಿದ್ದಾರೆ ಎಂದರು.

ರಂಗಕರ್ಮಿ ಎಚ್. ಜನಾರ್ದನ ಅವರ ಮಾರ್ಗದರ್ಶನದಲ್ಲಿ ಮೂರು ಬೀದಿ ನಾಟಕ ತಂಡಗಳಿಗೆ ನಾಡಿನ ಪ್ರಸಿದ್ದ ರಂಗ ನಿರ್ದೇಶಕರಿಂದ ಅಂಬೇಡ್ಕರ್ ಕುರಿತು ಬೀದಿ ನಾಟಕಗಳನ್ನು, ಹೋರಾಟದ ಹಾಡುಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಹೇಳಿದರು.

ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಯಿಂದ ಹೊರಟ ಬೀದಿನಾಟಕ ತಂಡಗಳು ಶ್ರೀರಂಗಪಟ್ಟಣ, ಮಂಡ್ಯ, ರಾಮನಗರ, ಕೊಳ್ಳೇಗಾಲ, ಮಳವಳ್ಳಿ, ಕನಕಪುರ, ಅರಕಲಗೂಡು, ಕೆ.ಆರ್. ಪೇಟೆ, ಕುಣಿಗಲ್, ನೆಲಮಂಗಲಗಳಲ್ಲಿ  ಪ್ರದರ್ಶನ ನೀಡಿ ಬೆಂಗಳೂರು ತಲುಪಲಿದೆ. ಬಳಿಕ ಬೆಂಗಳೂರಿನ ವಿವಿಧ ಕಡೆಗಳಿಗೆ ತೆರಳಿ ದಿನಕ್ಕೆ 3 ರಿಂದ 4 ಪ್ರದರ್ಶನ ನೀಡುವ ಮೂಲಕ ಸಮ್ಮೇಳನಕ್ಕೆ ಪ್ರಚಾರ ನೀಡಲಿದೆ ಎಂದರು.

ನಾಟಕೋತ್ಸವ: ಸಮಾವೇಶದ ಅಂಗವಾಗಿ ಬುಧವಾರದಿಂದ (ಜುಲೈ 19)  ಇದೇ 24 ರವರೆಗೆ ನಗರದ ಗುರುನಾನಕ್ ಭವನದಲ್ಲಿ ಐದು ದಿನ ಅಂಬೇಡ್ಕರ್ ನಾಟಕೋತ್ಸವ ನಡೆಯಲಿದೆ. ಅಂಬೇಡ್ಕರ್ ಅವರ ಸಂಘರ್ಷಮಯ ಜೀವನದ ಸೂಕ್ಷ್ಮಗಳನ್ನು ಅನಾವರಣಗೊಳಿಸುವ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದು ಸಚಿವರು ವಿವರಿಸಿದರು. ಸಮಾವೇಶ ನಡೆಯುವ ಮುಖ್ಯ ಸಭಾಂಗಣದಲ್ಲಿ ಹೋರಾಟದ ಹಾಡುಗಳು, ಹಿಂದೂಸ್ಥಾನಿ ಗಾಯನ, ಭರತನಾಟ್ಯ ಹಾಗೂ ವಿವಿಧ ರಾಜ್ಯಗಳ ವಿಶೇಷ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT